ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಪ್ರಭು ಕೆಂಪೇಗೌಡ ಬಡಾವಣೆ: ನಾಗರಿಕ ಸೌಕರ್ಯ ನಿವೇಶನಗಳಿಗೆ ಕತ್ತರಿ?

ಕೆಲವು ಸಿ.ಎ ನಿವೇಶನ ವಸತಿ ಬಳಕೆಗೆ
Last Updated 17 ಡಿಸೆಂಬರ್ 2019, 1:40 IST
ಅಕ್ಷರ ಗಾತ್ರ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಾಗರಿಕ ಸೌಕರ್ಯ ಕಲ್ಪಿಸಲು ಮೀಸಲಿಟ್ಟ ನಿವೇಶನಗಳನ್ನು ಸದ್ದಿಲ್ಲದೇ ವಸತಿ ಬಳಕೆಗೆ ಮಾರ್ಪಾಡು ಮಾಡಲಾಗುತ್ತಿದೆಯೇ?

ಇಂತಹದ್ದೊಂದು ಸಂದೇಹ ಈ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಆಗಿರುವ ಫಲಾನುಭವಿಗಳನ್ನು ಕಾಡುತ್ತಿದೆ. ಈ ಬಡಾವಣೆಗೆ ಸಂಬಂಧಿಸಿದಂತೆ 2018ರ ನಕ್ಷೆಗೂ ಈಗಿನ ನಕ್ಷೆಗೂ ವ್ಯತ್ಯಾಸವಾಗಿದೆ. ಈ ಹಿಂದೆ ನಾಗರಿಕ ಸೌಕರ್ಯ (ಸಿ.ಎ) ನಿವೇಶನಗಳಿಗೆ ಕಾಯ್ದಿರಿಸಿದ್ದ ಕೆಲವು ನಿವೇಶನಗಳಲ್ಲಿ ವಸತಿ ನಿವೇಶನಗಳನ್ನಾಗಿ ಪರಿವರ್ತಿಸಲಾಗಿದೆ. ಇನ್ನು ಕೆಲವು ಸಿ.ಎ. ನಿವೇಶನಗಳ ವಿಸ್ತೀರ್ಣವನ್ನು ಕಡಿತ ಮಾಡಲಾಗಿದೆ ಎಂದು ಈ ಬಡಾವಣೆಯ ನಿವೇಶನದಾರರು ಅಳಲು ತೋಡಿಕೊಂಡಿದ್ದಾರೆ.

‘4ನೇ ಬ್ಲಾಕ್‌ನ ಸೆಕ್ಟರ್‌–ಡಿನಲ್ಲಿ 15,202 ಚ.ಮೀ ವಿಸ್ತೀರ್ಣದ ಸಿ.ಎ.ನಿವೇಶನವಿತ್ತು. ಅದರ ವಿಸ್ತೀರ್ಣವನ್ನು 3,850 ಚ.ಮೀ.ಗೆ ಕಡಿತ ಮಾಡಲಾಗಿದೆ. ಸೆಕ್ಟರ್‌–ಇ ನಲ್ಲಿ 629 ಚ.ಮೀ ವಿಸ್ತೀರ್ಣದ ಸಿ.ಎ. ನಿವೇಶನದ ಬಗ್ಗೆ ಹೊಸ ನಕ್ಷೆಯಲ್ಲಿ ಉಲ್ಲೇಖವೇ ಇಲ್ಲ. 5ನೇ ಬ್ಲಾಕ್‌ನಲ್ಲಿ ಸುಮಾರು 5 ಎಕರೆ ವಿಸ್ತೀರ್ಣದ ಜಾಗವನ್ನು ಸಾರಿಗೆಗೆ ಸಂಬಂಧಿಸಿದ ಸೌಕರ್ಯಕ್ಕಾಗಿ ಕಾಯ್ದಿರಿಸಲಾಗಿದೆ ಎಂದು ಹಿಂದಿನ ನಕಾಶೆಯಲ್ಲಿ ನಮೂದಿಸಲಾಗಿತ್ತು. ಈಗ ಆ ಜಾಗದಲ್ಲಿ ವಸತಿ ನಿವೇಶನಗಳನ್ನು ಗುರುತು ಮಾಡಿ ಸಂಖ್ಯೆಗಳನ್ನು ನೀಡಲಾಗಿದೆ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರ ಮುಕ್ತ ವೇದಿಕೆಯ ಹೆಚ್ಚುವರಿ ಕಾರ್ಯದರ್ಶಿ ಎನ್‌.ನಿಖಿಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರ ಯೋಜನೆ ವಿಭಾಗದಿಂದ ಒಮ್ಮೆ ಅನುಮೋದನೆ ಪಡೆದ ಬಳಿಕ ನಿವೇಶನಗಳನ್ನು ಮನಬಂದಂತೆ ಬದಲಾವಣೆ ಮಾಡಲು ಬಿಡಿಎ ನಿಯಮಗಳಲ್ಲಿ ಅವಕಾಶವಿಲ್ಲ. ಸಿ.ಎ ನಿವೇಶನಗಳನ್ನು ಅನ್ಯ ಉದ್ದೇಶಕ್ಕೆ ಬಳಸುವುದಿದ್ದರೂ ಸರ್ಕಾರದ ಅನುಮೋದನೆ ಅಗತ್ಯ’ ಎಂದು ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಿ.ಎ. ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಮಾರ್ಪಾಡು ಮಾಡಿರುವುದನ್ನು ಬಿಡಿಎ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ನಿರಾಕರಿಸಿದರು.

‘ನಗರ ಯೋಜನೆ ವಿಭಾಗದಿಂದ ಬಡಾವಣೆಗೆ ಅಂತಿಮ ಅನುಮೋದನೆ ಪಡೆದ ಬಳಿಕ ಯಾವುದೇ ಸಿ.ಎ. ನಿವೇಶನಗಳನ್ನು ಅನ್ಯಬಳಕೆಗೆ ಬದಲಾಯಿಸಿಲ್ಲ’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಒಬ್ಬರು ತಿಳಿಸಿದರು.

‘ಭವಿಷ್ಯದಲ್ಲಿ ಭಾರಿ ಸಮಸ್ಯೆ’

‘ನಾಗರಿಕ ಸೌಕರ್ಯ ನಿವೇಶನಗಳ ವಿಸ್ತೀರ್ಣ ಕಡಿತ ಮಾಡಿದರೆ ಇಲ್ಲಿನ ನಿವೇಶನದಾರರು ಭವಿಷ್ಯದಲ್ಲಿ ಭಾರಿ ಸಮಸ್ಯೆ ಎದುರಿಸಬೇಕಾಗುತ್ತದೆ. ಬಡಾವಣೆಯಲ್ಲಿ ಜನವಸತಿ ಹೆಚ್ಚಲಿದೆ. ಆಗ ಆಸ್ಪತ್ರೆ, ಅಂಚೆ ಕಚೇರಿ, ಶಾಲಾ ಸಮುದಾಯ ಭವನ ಮುಂತಾದ ಮೂಲಸೌಕರ್ಯಗಳನ್ನು ಸ್ಥಳೀಯ ನಿವಾಸಿಗಳು ಹುಡುಕಿಕೊಂಡು ಹೋಗಬೇಕಾದೀತು’ ಎಂದು ಮುಕ್ತವೇದಿಕೆಯ ಸಂಚಾಲಕ ಸೂರ್ಯಕಿರಣ್‌ ಕಳವಳ ವ್ಯಕ್ತಪಡಿಸಿದರು.

‘ಬಡಾವಣೆಯ ನಕ್ಷೆಗೆ ಒಮ್ಮೆ ಅನುಮೋದನೆ ಪಡೆದ ಬಳಿಕ ಯಾವುದೇ ಮಾರ್ಪಾಡು ಮಾಡುವುದಿದ್ದರೂ ನಿವೇಶನದಾರರ ಸಮ್ಮತಿ ಪಡೆಯಬೇಕು. ನಿವೇಶನದಾರರಲ್ಲಿ ಮೂರನೇ ಎರಡರಷ್ಟು ಮಂದಿ ಬದಲಾವಣೆಗೆ ಒಪ್ಪಿಗೆ ಸೂಚಿಸಬೇಕು ಎಂದು ರಿಯಲ್‌ ಎಸ್ಟೇಟ್‌ ನಿಯಂತ್ರಣಾ ಕಾಯ್ದೆಯಲ್ಲೂ (ರೇರಾ) ಸ್ಪಷ್ಟಪಡಿಸಲಾಗಿದೆ. ಆದರೆ, ಬಿಡಿಎ ಈ ಮಾರ್ಪಾಡುವ ಮಾಡುವುದಕ್ಕೆ ಮುನ್ನ ನಿವೇಶನದಾರರನ್ನು ಸಂಪರ್ಕಿಸಿಯೇ ಇಲ್ಲ’ ಎಂದರು.

ಎಲ್ಲೆಲ್ಲಿ ಸಿ.ಎ. ನಿವೇಶನಗಳಲ್ಲಿ ಮಾರ್ಪಾಡು?

ಬ್ಲಾಕ್‌/ಸೆಕ್ಟರ್‌;ನಿವೇಶನದ ಉದ್ದೇಶಿತ ಬಳಕೆ; ಹಿಂದಿನ ವಿಸ್ತೀರ್ಣ (ಚ.ಮೀ); ಈಗಿನ ವಿಸ್ತೀರ್ಣ (ಚ.ಮೀ); ಈಗಿನ ಬಳಕೆ

4–ಡಿ; ಸಿ.ಎ; 15,202; 3852.7; ನಿರ್ಮಾಣ ಪ್ರದೇಶ

4–ಸಿ; ಸಿ.ಎ;17074.4; 11164.3; ಎನ್‌ಎನ್‌ಎ

4–ಇ; ಸಿ.ಎ; 629.3; 0; ಸಿ.ಎ ಉದ್ದೇಶಕ್ಕೆ ಮೀಸಲಿದ್ದುದು ಡಿಲೀಟ್‌ ಮಾಡಲಾಗಿದೆ

5–1; ಸಾರಿಗೆ ಸೌಕರ್ಯ; 31949.79; 0; ವಸತಿ ನಿವೇಶನ

7–ಇ;ಸಿ.ಎ; 10,545; 0; ವಸತಿ ನಿವೇಶನ

7–ಬಿ; ಸಿ.ಎ; 7897.9; 0; ವಸತಿ ನಿವೇಶನ

7–ಬಿ; ಸಾಂಸ್ಕೃತಿಕ ಚಟುವಟಿಕೆ; 1528.2; 0; ವಸತಿ ನಿವೇಶನ

1–ಎಂ; ಸಿ.ಎ; 720.6; 0; ಡಿಲೀಟ್‌ ಮಾಡಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT