18 ಸಾವಿರ ಪೌರಕಾರ್ಮಿಕರಿಗೆ ಪಾವತಿಯಾಗದ ವೇತನ

7
ಕಾರ್ಮಿಕ ಸುಬ್ರಮಣಿ ಆತ್ಮಹತ್ಯೆಯ ಹಿಂದಿನ ಸಂಕಟ

18 ಸಾವಿರ ಪೌರಕಾರ್ಮಿಕರಿಗೆ ಪಾವತಿಯಾಗದ ವೇತನ

Published:
Updated:

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 18 ಸಾವಿರ ಪೌರ ಕಾರ್ಮಿಕರಿಗೆ 6 ತಿಂಗಳಿನಿಂದ ವೇತನ ಪಾವತಿ ಆಗಿಲ್ಲ. ಮೂರು ದಿನಗಳ ಒಳಗಾಗಿ ವೇತನ ಪಾವತಿಸುವುದಾಗಿ ಜೂನ್‌ 5ರಂದು ಅಧಿಕಾರಿಗಳು ಕಾರ್ಮಿಕರಿಗೆ ಭರವಸೆ ನೀಡಿದ್ದರು. ಆದರೆ, ಕಾರ್ಮಿಕರು ವೇತನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘದ ಮುಖಂಡ ಕ್ಲಿಫ್ಟನ್‌ ಡಿ ರೊಝಾರಿಯೋ, ‘ನಗರದ ಪೌರಕಾರ್ಮಿಕರು ಜನವರಿ, ಫೆಬ್ರುವರಿಯ ವೇತನವನ್ನಾದರೂ ಪಡೆಯಬೇಕಿತ್ತು. ಆದರೆ, ಅಧಿಕಾರಿಗಳು ತಮ್ಮ ಮಾತು ಉಳಿಸಿಕೊಂಡಿಲ್ಲ’ ಎಂದರು. 

ಮಹದೇವಪುರ ವಲಯದ ಪೌರಕಾರ್ಮಿಕರಾದ ಎಸ್‌.ರುದ್ರಮ್ಮ ಹೇಳುವಂತೆ, ‘ನಾವು ಜನವರಿ ವೇತನ ಪಡೆದಿದ್ದೇವೆ. ಸಕಾಲಕ್ಕೆ ವೇತನ ಬಾರದಿರುವುದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಸಂಕಟದಿಂದ ಸುಬ್ರಮಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.

ಇಂದಿರಾನಗರದ ಪೌರಕಾರ್ಮಿಕರ ಪುತ್ರಿ ಕವಿತಾ ಹೇಳುವಂತೆ, ‘ಕಳೆದ ಮೂರು ತಿಂಗಳಿನಿಂದ ನನ್ನ ತಾಯಿಗೆ ಸಂಬಳವೇನೊ ಬರುತ್ತಿದೆ. ಆದರೆ, ಸಕಾಲದಲ್ಲಿ ಪಡೆಯಬೇಕಾದರೆ ನೋವು ಅನುಭವಿಸಬೇಕು. 25 ವರ್ಷಗಳಿಂದ ಅಮ್ಮ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ’ ಎಂದರು. 

‘ಬಿಬಿಎಂಪಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜತೆ ‘ಹೊಂದಾಣಿಕೆ’ ಮಾಡಿಕೊಂಡಿರುವುದರಿಂದ ವೇತನ ಪಾವತಿ ವಿಳಂಬವಾಗುತ್ತಿದೆ. ಕಾರ್ಮಿಕರ ಪಟ್ಟಿಯಲ್ಲಿರುವ ನಕಲಿ ಹೆಸರುಗಳನ್ನು ಪರಿಶೀಲಿಸುವಲ್ಲಿ ವಿಳಂಬ ಆಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ರೊಜಾರಿಯೋ ಹೇಳಿದರು. 

ಬಿಬಿಎಂಪಿ ಆರೋಗ್ಯ ಮತ್ತು ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ಪ್ರತಿಕ್ರಿಯಿಸಿ, ‘ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿರುವ ಕಾರ್ಮಿಕರ ವೇತನ ಪಾವತಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಏಳೆಂಟು ತಿಂಗಳಿನಿಂದ ಕೆಲಸ ಮಾಡುತ್ತಿರುವವರಿಗೂ ವೇತನ ಪಾವತಿಸಲಾಗುತ್ತದೆ. ನಕಲಿ ಕಾರ್ಮಿಕರನ್ನು ಪಟ್ಟಿಯಿಂದ ಹೊರಗಿಡಲಾಗುತ್ತಿದೆ’ ಎಂದರು.

 ‘ನಕಲಿ ಕಾರ್ಮಿಕರಿದ್ದಾರೆ ಎಂದು ಬಿಬಿಎಂಪಿ ಈಗ ಹೇಳಲಾಗದು. ಏಕೆಂದರೆ 6 ತಿಂಗಳಿನಿಂದ ಎಲ್ಲ ಕಾರ್ಮಿಕರಿಗೂ ಬಯೋಮೆಟ್ರಿಕ್‌ ಹಾಜರಾತಿ ನೀಡಲಾಗುತ್ತಿದೆ. ನಕಲಿ ಕಾರ್ಮಿಕರನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ಎಂದು ಹೇಳುತ್ತಿರುವುದು ವಿಳಂಬಕ್ಕೆ ಹೇಳುವ ನೆಪ’ ಎಂದು ರೊಜಾರಿಯೋ ಹೇಳಿದರು. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !