ಮಂಗಳವಾರ, ನವೆಂಬರ್ 19, 2019
28 °C

ಸ್ನೇಹಿತರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಜಗಳ: ಕ್ಯಾಬ್ ಚಾಲಕನ ಕೊಲೆ

Published:
Updated:

ಬೆಂಗಳೂರು: ಸ್ನೇಹಿತರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ಕ್ಯಾಬ್ ಚಾಲಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಅಮ್ಮಳ್ಳಿ ದೊಡ್ಡಿಯ ಸುಹಾಸ್ (35) ಮೃತ ದುರ್ದೈವಿ. ಕ್ಯಾಬ್ ಚಾಲಕರಾಗಿರುವ ಸುಹಾಸ್ ಅವಿವಾಹಿತ. ಎರಡು ವರ್ಷಗಳಿಂದ ತಾಯಿ ಮತ್ತು ಸಹೋದರನ ಜತೆ ಕೋಣನ ಕುಂಟೆಯ ದೊಡ್ಡಲ್ಲಾಳಸಂದ್ರದಲ್ಲಿ ನೆಲೆಸಿದ್ದರು.

‘ಘಟನೆಗೆ ಸಂಬಂಧಿಸಿ ಜೆ.ಪಿ. ನಗರ ಠಾಣೆಯ ಗೃಹರಕ್ಷಕ ಚಂದ್ರ ಮೂರ್ತಿ (28) ಮತ್ತು ನವೀನ್ (30) ಎಂಬುವರನ್ನು ಬಂಧಿಸ
ಲಾಗಿದೆ. 4–5 ವರ್ಷಗಳಿಂದ ಜೆ.ಪಿ.ನಗರ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಚಂದ್ರಮೂರ್ತಿ ಕೆಲಸ ಮಾಡುತ್ತಿದ್ದಾನೆ. ಗೂಡ್ಸ್ ಆಟೊ ಚಾಲಕನಾಗಿದ್ದ ನವೀನ್‌ನನ್ನು ಇತ್ತೀಚೆಗೆ ಕೆಲಸದಿಂದ ತೆಗೆದು ಹಾಕಲಾಗಿತ್ತು. ಇಬ್ಬರೂ ಅಂಜನಾಪುರ ನಿವಾಸಿಗಳು’ ಎಂದು ಪೊಲೀಸರು ತಿಳಿಸಿದರು. 

ಭಾನುವಾರ ಮಧ್ಯಾಹ್ನ ಅಂಜನಾಪುರ 5ನೇ ಕ್ರಾಸ್‌ನ ಮೂರನೇ ಮುಖ್ಯರಸ್ತೆಯ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ನಿರ್ಜನ ಪ್ರದೇಶದಲ್ಲಿ ಸ್ನೇಹಿತರಾದ ಸುಹಾಸ್, ಚಂದ್ರಮೂರ್ತಿ, ನವೀನ್ ಮತ್ತು ಮೋಹನ್ ಪಾರ್ಟಿ ಮಾಡಿದ್ದಾರೆ. ಮದ್ಯಸೇವನೆ ವೇಳೆ ಸುಹಾಸ್, ನವೀನ್‌
ನನ್ನು ಕೆಲಸದಿಂದ ತೆಗೆದು ಹಾಕಿದ್ದ ವಿಷಯ ಪ್ರಸ್ತಾಪಿಸಿದ್ದ. ಈ ವಿಚಾರಕ್ಕೆ ನವೀನ್, ಚಂದ್ರಮೂರ್ತಿ ಹಾಗೂ ಸುಹಾಸ್ ಮಧ್ಯೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಅಲ್ಲಿಯೇ ಇದ್ದ ದೊಣ್ಣೆಯಿಂದ ಮೂವರೂ ಹೊಡೆದಾಡಿಕೊಂಡಿದ್ದಾರೆ. ಈ ವೇಳೆಗೆ ಸುಹಾಸ್‌ಗೆ ಬಲವಾದ ಪೆಟ್ಟು ಬಿದ್ದಿದೆ. ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರತಿಕ್ರಿಯಿಸಿ (+)