ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಸುಧಾರಣೆ ವಿಳಂಬ ಬೇಡ

Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಕ್ರಿಮಿನಲ್‌ ಹಿನ್ನೆಲೆ ಹೊಂದಿರುವ ವ್ಯಕ್ತಿಗಳ ರಾಜಕೀಯ ಪ್ರವೇಶಕ್ಕೆ ತಡೆಯೊಡ್ಡುವ ಅಗತ್ಯದ ಕುರಿತು ಹಲವು ವರ್ಷಗಳಿಂದಲೂ ಚರ್ಚೆ ನಡೆಯುತ್ತಿದೆ. ಆದರೂ ಇಂಥ ವ್ಯಕ್ತಿಗಳ ಸ್ಪರ್ಧೆ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಿರುವುದು ವಿಪರ್ಯಾಸವೇ ಸರಿ. ಇದೇ 12ರಂದು ರಾಜ್ಯ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಒಟ್ಟು 2,560 ಅಭ್ಯರ್ಥಿಗಳಲ್ಲಿ 391 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದು ಕಳವಳಪಡಬೇಕಾದ ವಿಚಾರ. ಇದರಲ್ಲಿ ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೂ ಇರುವುದನ್ನು ಗಮನಿಸಿದರೆ, ಅಪರಾಧ ಹಿನ್ನೆಲೆಯವರಿಗೆ ಮಣೆ ಹಾಕುವುದರಲ್ಲಿ ಯಾವ ಪಕ್ಷವೂ ಹಿಂದೆ ಬಿದ್ದಿಲ್ಲ ಎಂಬ ಭಾವನೆ ಮೂಡುತ್ತದೆ. ಅಭ್ಯರ್ಥಿಗಳ ಅಪರಾಧ ಹಿನ್ನೆಲೆ, ಹಣಕಾಸು ಸ್ಥಿತಿ, ವಿದ್ಯಾರ್ಹತೆ ಮತ್ತಿತರ ಅಂಶಗಳನ್ನು ವಿಶ್ಲೇಷಣೆ ಮಾಡಿ ‘ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌’ (ಎಡಿಆರ್‌) ವರದಿ ಬಿಡುಗಡೆ ಮಾಡಿದೆ. ನಮ್ಮ ಸಂಸತ್ತು ಹಾಗೂ ಶಾಸನ
ಸಭೆಗಳಲ್ಲಿ ಮೂರನೇ ಒಂದರಷ್ಟು ಸಂಸದರು ಹಾಗೂ ಶಾಸಕರು ಅಪರಾಧದ ಹಿನ್ನೆಲೆಯವರಿದ್ದಾರೆ ಎಂದೂ ಅಂದಾಜಿಸಲಾಗಿದೆ.

ಚುನಾವಣೆ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಈಚೆಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ‘ರಾಜಕಾರಣಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ಕೋರ್ಟ್‌ ತೆರೆಯುವಂತೆ ಪ್ರಕರಣವೊಂದರಲ್ಲಿ ಆದೇಶಿಸಿದೆ. ಅಪರಾಧಿಗಳಿಂದ ರಾಜಕಾರಣವನ್ನು ಮುಕ್ತಗೊಳಿಸಲು ಇದು ನೆರವಾಗಲಿದೆ’ ಎಂದೂ ಅಭಿಪ್ರಾಯಪಟ್ಟಿದೆ. ಈ ಪ್ರಕ್ರಿಯೆ, ಕರ್ನಾಟಕವೂ ಸೇರಿದಂತೆ ಈಗ ವಿವಿಧ ರಾಜ್ಯಗಳಲ್ಲಿ ಚಾಲನೆಯಲ್ಲಿದೆ. ಅಪರಾಧ ಪ್ರಕರಣಗಳಲ್ಲಿ ಎರಡು ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಶಿಕ್ಷೆಗೊಳಗಾಗುವ ಚುನಾಯಿತ ಪ್ರತಿನಿಧಿಗಳು ತಕ್ಷಣವೇ ಸದಸ್ಯತ್ವ ಕಳೆದುಕೊಳ್ಳುತ್ತಾರೆ. ಸುಪ್ರೀಂ ಕೋರ್ಟ್‌ ಈ ಸಂಬಂಧ ಮಹತ್ವದ ತೀರ್ಪು ನೀಡಿದೆ. ಅಲ್ಲದೆ, ಈ ಅಪರಾಧಿಗಳು ಕನಿಷ್ಠ ಆರು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಆದರೆ, ಇಂಥವರ ಸ್ಪರ್ಧೆಗೆ ಶಾಶ್ವತವಾಗಿ ನಿಷೇಧ ಹೇರುವಂತೆ ಚುನಾವಣಾ ಆಯೋಗವೂ ಹೇಳಿದೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳು ದುಬಾರಿ ವ್ಯವಹಾರವಾಗಿವೆ. ಜನರ ಮತ ಸೆಳೆಯಲು ಕೋಟಿಗಟ್ಟಲೆ ಹಣ ವ್ಯಯಿಸುವಷ್ಟು ಸ್ಪರ್ಧಾತ್ಮಕತೆ ರಾಜಕೀಯ ಪಕ್ಷಗಳ ನಡುವೆ ಸೃಷ್ಟಿಯಾಗಿದೆ. ಹಣ ಬಲ ಹಾಗೂ ತೋಳ್ಬಲ ಇದ್ದವರು ಮಾತ್ರ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವಂಥ ಪರಿಸ್ಥಿತಿ ಎದುರಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶುದ್ಧ ಹಿನ್ನೆಲೆಯವರು, ಸುಶಿಕ್ಷಿತರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗುವಂಥ ಪರಿಸ್ಥಿತಿ ನಿರ್ಮಾಣವಾಗಬೇಕು. ರಾಜಕಾರಣವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ಬಿರುಸಾಗಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ, ಕೇಂದ್ರ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರ ನಿರ್ವಹಿಸಬೇಕು. ಕಳಂಕಿತರಿಗೆ  ಮತ ನೀಡದಿರುವಷ್ಟು ಜಾಗೃತಿಯನ್ನು ಮತದಾರರೂ ಪ್ರದರ್ಶಿಸಬೇಕು. ಇಲ್ಲವಾದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT