ಗುರುವಾರ , ನವೆಂಬರ್ 26, 2020
22 °C
ಚರ್ಚ್‌ಸ್ಟ್ರೀಟ್‌: ವಾರಾಂತ್ಯದಲ್ಲಿ ವಾಹನ ಸಂಚಾರ ನಿರ್ಬಂಧ

ನ. 7ರಿಂದ ‘ಶುದ್ಧ ಗಾಳಿಯ ಬೀದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಕಾಣಿಸಿಕೊಂಡ ಬಳಿಕ ವಾಹನ ಸಂಚಾರ ಇಳಿಮುಖವಾಗಿ ವಾತಾವರಣಕ್ಕೆ ಸೇರುವ ಹೊಗೆ ಪ್ರಮಾಣ ಕಡಿಮೆಯಾಗಿದೆ. ಈ ಅಭೂತಪೂರ್ವ ಅವಕಾಶವನ್ನು ಬಳಸಿಕೊಂಡು ಮಾಲಿನ್ಯದ ಮಟ್ಟವನ್ನು ಮತ್ತಷ್ಟು ತಗ್ಗಿಸುವ ಪ್ರಯತ್ನಕ್ಕೆ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌) ಮುಂದಾಗಿದೆ. ಈ ಸಲುವಾಗಿ ಪ್ರಾಯೋಗಿಕವಾಗಿ ಚರ್ಚ್‌ಸ್ಟ್ರೀಟ್‌ನಲ್ಲಿ ‘ಶುದ್ಧ ಗಾಳಿಯ ಬೀದಿ’ ಎಂಬ ಕಾರ್ಯಕ್ರಮ ಪರಿಚಯಿಸುತ್ತಿದೆ.

ಶುದ್ಧ, ಆರೋಗ್ಯಕರ ಹಾಗೂ ಸಮೃದ್ಧವಾದ ಸಾರ್ವಜನಿಕ ಸ್ಥಳಗಳನ್ನು ಕಾಯ್ದುಕೊಳ್ಳುವ ಸಲುವಾಗಿ ಚರ್ಚ್‌ಸ್ಟ್ರೀಟ್‌ನಲ್ಲಿ ವಾರಾಂತ್ಯಗಳಲ್ಲಿ ಪ್ರಾಯೋಗಿಕವಾಗಿ ವಾಹನ ಸಂಚಾರ ನಿರ್ಬಂಧಿಸುವ ಪ್ರಸ್ತಾಪವನ್ನು ನಿರ್ದೇಶನಾಲಯ ಮುಂದಿಟ್ಟಿದೆ.

ಸುಸ್ಥಿರ ನಡವಳಿಕೆಗೆ ಉತ್ತೇಜನ ನೀಡುವುದರಿಂದ ಆಗುವ ಸಕಾರಾತ್ಮಕ ಪರಿಣಾಮಗಳನ್ನು ತೋರಿಸಿಕೊಡಬೇಕಿದೆ. ಈ ಪರಿಕಲ್ಪನೆಯ ಆಧಾರದಲ್ಲಿ ನಮ್ಮ ಬೀದಿಗಳ ವಿನ್ಯಾಸವನ್ನು ಸುಧಾರಿಸಿ, ನಗರದಾದ್ಯಂತ ಇಂತಹ ಇನ್ನಷ್ಟು ಬೀದಿಗಳ ನಿರ್ಮಾಣಕ್ಕೆ ನೀಲನಕಾಶೆ ತಯಾರಿಸುವ ಉದ್ದೇಶ ನಮ್ಮದು ಎಂದು ಡಲ್ಟ್‌ ವೆಬ್‌ಸೈಟ್‌ನಲ್ಲಿ (www.urbantransport.kar.gov.in) ಹೇಳಿಕೊಂಡಿದೆ. 

ಸುರಕ್ಷಿತ, ಹಸಿರಿನಿಂದ ಕೂಡಿದ ಹಾಗೂ ಸಕ್ರಿಯ ಸಾರಿಗೆ ವ್ಯವಸ್ಥೆ ಕಟ್ಟಲು ಶುದ್ಧ ಸಂಚಾರ ವ್ಯವಸ್ಥೆಗೆ ಮತ್ತೆ ಆದ್ಯತೆ ಸಿಗುವಂತೆ ಹಾಗೂ ಬೀದಿಗಳಲ್ಲಿ ಜನ ಕೇಂದ್ರಿತ ಪರಿಸರ ರೂಪಿಸುವಂತೆ ನೋಡಿಕೊಳ್ಳಬೇಕಿದೆ. ಈ ಉದ್ದೇಶವನ್ನು ಸಾಕಾರಗೊಳಿಸಲು ಆಸಕ್ತ ನಾಗರಿಕರು ಹಾಗೂ ಸಂಘಟನೆಗಳು ಕೈ ಜೋಡಿಸಬಹುದು ಎಂದು ಡಲ್ಟ್ ಹೇಳಿದೆ. 

‘ಚರ್ಚ್‌ಸ್ಟ್ರೀಟ್‌ನಲ್ಲಿ ವಾರಾಂತ್ಯದಲ್ಲಿ ವಾಹನ ನಿರ್ಬಂಧಿಸಿ ‘ಶುದ್ಧ ಗಾಳಿಯ ಬೀದಿ’ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದ್ದೇವೆ. ನ.7ರಿಂದ ವಾರಾಂತ್ಯದ ಕಾರ್ಯಕ್ರಮ ಆರಂಭವಾಗಲಿದೆ. ಇದಿನ್ನೂ ಸಿದ್ಧತೆ ಹಂತದಲ್ಲಿದೆ. ಕನಿಷ್ಠ ಐದು ತಿಂಗಳ ಕಾಲ ಇದನ್ನು ಮುಂದುವರಿಸುವ ಇರಾದೆ ನಮ್ಮದು’ ಎಂದು ಡಲ್ಟ್‌ ಆಯುಕ್ತರಾದ ವಿ.ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಕ್ರಮದಿಂದ ಏನುಪಯೋಗ?

ಶುದ್ಧ ಗಾಳಿಯ ಬೀದಿ ಕಾರ್ಯಕ್ರಮದಲ್ಲಿ ಅನೇಕ ನವೋದ್ಯಮಗಳು, ವಾಣಿಜ್ಯ ಸಂಸ್ಥೆಗಳು, ಸರ್ಕಾರೇತರ ಸಂಘಟನೆಗಳು, ಸಮುದಾಯ ಸಂಘಟನೆಗಳು ಭಾಗವಹಿಸಲಿವೆ. ಅನೇಕ ವಾರಾಂತ್ಯಗಳಲ್ಲಿ ತಮ್ಮ ವಹಿವಾಟು ಬೆಳೆಸಲು ಇಲ್ಲಿ ಮುಕ್ತ ಅವಕಾಶ ಸಿಗಲಿದೆ ಎಂದು ಡಲ್ಟ್‌ ಹೇಳಿದೆ.

ಚರ್ಚ್‌ಸ್ಟೀಟ್‌ ಆಯ್ಕೆ ಏಕೆ?

ಚರ್ಚ್‌ಸ್ಟ್ರೀಟ್‌ ನಗರದ ಕೇಂದ್ರ ಪ್ರದೇಶದ ಪ್ರಮುಖ ವಾಣಿಜ್ಯ ಚಟುವಟಿಕೆಯ ತಾಣವಾಗಿದೆ. ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಕಾಬಲ್‌ಸ್ಟೋನ್‌ಗಳನ್ನು ಬಳಸಿ ನಿರ್ಮಿಸಿರುವ ಅತ್ಯಾಧುನಿಕ ರಸ್ತೆ ಹಾಗೂ ವಿಸ್ತಾರವಾದ ಪಾದಚಾರಿ ಮಾರ್ಗಗಳಿಂದಾಗಿ ಇಲ್ಲಿನ ಪರಿಸರ ಆಕರ್ಷಕವಾಗಿ ರೂಪುಗೊಂಡಿದೆ. ಜಾಗತಿಕ ಗುಣಮಟ್ಟದ ಬೀದಿಗಳಷ್ಟೇ ಗುಣಮಟ್ಟವನ್ನು ಈ ರಸ್ತೆ ಹೊಂದಿದೆ. ಹಾಗಾಗಿ ‘ಶುದ್ಧ ಗಾಳಿಯ ಬೀದಿ’ ಕಾರ್ಯಕ್ರಮದ ಪ್ರಾಯೋಗಿಕ ಅನುಷ್ಠಾನಕ್ಕೆ ಡಲ್ಟ್‌ ಈ ಬೀದಿಯನ್ನೇ ಆಯ್ಕೆ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು