ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲಿ ನೀರು ನಿಲ್ಲುವುದನ್ನು ತಡೆಯಿರಿ: ಗೌರವ್ ಗುಪ್ತ

ಹಲಸೂರು ವಾರ್ಡ್: ರಸ್ತೆಗಳ ತಪಾಸಣೆ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ
Last Updated 7 ಆಗಸ್ಟ್ 2021, 16:31 IST
ಅಕ್ಷರ ಗಾತ್ರ

ಬೆಂಗಳೂರು: ಹಲಸೂರು ವಾರ್ಡ್‌ನಲ್ಲಿ ತಿರುವಳ್ಳುವರ್ ಪ್ರತಿಮೆ ವೃತ್ತದ ಗಂಗಾಧರ ಚೆಟ್ಟಿ ರಸ್ತೆಯಲ್ಲಿ ಮಳೆ ನೀರು ನಿಂತು ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದಿದ್ದರಿಂದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಅವರು ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‌

‘ಮಳೆಯಾದಾಗ ಇಲ್ಲಿನ ರಸ್ತೆಯಲ್ಲಿ ನೀರು ನಿಲ್ಲುತ್ತಿರುವುದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.

‘ಡಿಕನ್ಸನ್ ರಸ್ತೆ ಕಡೆಯಿಂದ ಹಲಸೂರು ಕೆರೆಯ ಕಡೆಗೆ ಸಾಗುವ ಪ್ರಮುಖ ರಾಜಕಾಲುವೆಗೆ ಜೋಡಣೆಯಾಗುವ ಚರಂಡಿಗಳಲ್ಲಿ ಹೂಳು ತುಂಬಿದೆ. ಈ ಹೂಳನ್ನು ತೆರವುಗೊಳಿಸಿದರೆ ಮಳೆ ನೀರು ಸರಾಗವಾಗಿ ಹರಿಯುತ್ತದೆ’ ಎಂದು ಸಲಹೆ ನೀಡಿದರು.

‘ಇಲ್ಲಿರುವ ನೀರುಗಾಲುವೆಯಲ್ಲಿ ಹೂಳು ತೆರವು ಮಾಡಬೇಕು. ರಸ್ತೆ ಬದಿಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ಅಣ್ಣಸ್ವಾಮಿ ಮೊದಲಿಯಾರ್ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಸೆಂಟ್ ಜಾನ್ಸ್ ರಸ್ತೆಯನ್ನು ಸಂಪರ್ಕಿಸುವ ರಸ್ತೆಯಲ್ಲಿ 150 ಮೀಟರ್ ಉದ್ದದಷ್ಟು ವೈಟ್ ಟಾಪಿಂಗ್ ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಳ್ಳಬೇಕಿದೆ.

ಗುರುದ್ವಾರದ ಮುಂಭಾಗ ರಸ್ತೆ ಕೆಳಭಾಗದಲ್ಲಿ ಹಾದು ಹೋಗಿರುವ ರಾಜಕಾಲುವೆಯ ಹೂಳನ್ನು ತೆರವುಗೊಳಿಸಿ ಸರಾಗವಾಗಿ ನೀರು ಹರಿಯುವುದಕ್ಕೆ ವ್ಯವಸ್ಥೆ ಕಲ್ಪಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.

ವಲಯದ ಜಂಟಿ ಆಯುಕ್ತರಾದ ಪಲ್ಲವಿ, ಜಂಟಿ ಆಯುಕ್ತ (ಕಸ ನಿರ್ವಹಣೆ) ಸರ್ಫರಾಜ್ ಖಾನ್, ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಪ್ರಭಾಕರ್, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್, ರಸ್ತೆ ಮೂಲಭೂತ ಸೌಕರ್ಯ ಮತ್ತು ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಉಪಸ್ಥಿತರಿದ್ದರು.

‘ಕಟ್ಟಡ ವ್ಯರ್ಥವಾಗಲು ಬಿಡಿಬೇಡಿ’

ಆರ್.ಕೆ.ಮಠ ರಸ್ತೆಯಲ್ಲಿ ಪಾಲಿಕೆಯ ಕಟ್ಟಡ ಬಳಕೆಯಾಗದೇ ಇರುವುದನ್ನು ಸ್ಥಳ ಪರಿಶೀಲನೆ ವೇಳೆ ಮುಖ್ಯ ಆಯುಕ್ತರು ಗಮನಿಸಿದರು.

‘ಈ ಕಟ್ಟಡ ವ್ಯರ್ಥವಾಗಲು ಬಿಡಬಾರದು. ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಲು ಈ ಕಟ್ಟಡವನ್ನು ಉಪಯೋಗಿಸಿಕೊಳ್ಳಬೇಕು’ ಎಂದು ವಲಯದ ಜಂಟಿ ಆಯುಕ್ತರಾದ ಪಲ್ಲವಿ ಅವರಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT