ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇ – ಸಿಟಿ’ಯಲ್ಲಿ ₹1ಕ್ಕೆ ಸಿಗಲಿದೆ ಬಟ್ಟೆ

‘ಇಮ್ಯಾಜಿನ್‌ ಕ್ಲಾಥ್‌ ಬ್ಯಾಂಕ್‌’: ಬಡವರ ನೆರವಿಗೆ ನಿಂತ ಟ್ರಸ್ಟ್‌
Last Updated 8 ಡಿಸೆಂಬರ್ 2021, 21:08 IST
ಅಕ್ಷರ ಗಾತ್ರ

ಬೆಂಗಳೂರು: ಉಣಲೊಂದು ತುತ್ತು, ಉಡಲೊಂದು ಬಟ್ಟೆ ಮನುಷ್ಯನಿಗೆ ಅನಿವಾರ್ಯ. ಸುಡುವ ಬಿಸಿಲು, ಕೊರೆಯುವ ಚಳಿ ತಡೆಯಲು ಬೇಕಾದ ಬಟ್ಟೆ ಖರೀದಿಸಲು ಬಡವರಿಗೆಸಾಧ್ಯವಿಲ್ಲ. ಕೇವಲ ₹1ಕ್ಕೆ ಬಟ್ಟೆ ಕೊಡಲಾಗುತ್ತಿದೆ ಎಂದರೆ ನಂಬಲೂ ಅಸಾಧ್ಯ.

ಬಡವರಿಗೆ ಉಡುಗೆ ನೀಡುವ ಜತೆಗೆ, ಬಟ್ಟೆಯ ಸದುಪಯೋಗದ ಬಗ್ಗೆ ಸಂದೇಶವನ್ನೂ ನೀಡುವ ‘ಬಟ್ಟೆ ಬ್ಯಾಂಕ್‌’ ಇಲ್ಲಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತಲೆ ಎತ್ತಿದೆ. ಇದು ಬಡವರ ಪಾಲಿಗೆ ಬಂಧುವಾಗಿದೆ.

ನಾಲ್ವರು ಸ್ನೇಹಿತರಾದ ಸಂವಹನ ತಜ್ಞ ವಿನೋದ್ ಪ್ರೇಮ್ ಲೋಬೊ, ಮಾನವ ಸಂಪನ್ಮೂಲ ವೃತ್ತಿಪರರಾಗಿರುವ ಮೆಲಿಶಾ ನೊರೋನ್ಹಾ ಮತ್ತು ನಿತಿನ್ ಕುಮಾರ್ ಹಾಗೂ ಕಲಾ ವಿನ್ಯಾಸಕಾರ ವಿಘ್ನೇಶ್ ಅವರು, ಎಲೆಕ್ಟ್ರಾನಿಕ್ ಸಿಟಿಯ ಬೆರಟೇನ ಅಗ್ರಹಾರದ ಲವಕುಶ ಬಡಾವಣೆಯಲ್ಲಿ ‘ಇಮ್ಯಾಜಿನ್ ಕ್ಲಾಥ್‌ ಬ್ಯಾಂಕ್ ಟ್ರಸ್ಟ್‌’ ಆರಂಭಿಸಿದ್ದಾರೆ. ಈ ಮೂಲಕ ಬಟ್ಟೆಯ ಮರು ಬಳಕೆಗೆ ಮತ್ತು ಉಳ್ಳವರು ಇಲ್ಲದವರಿಗೆ ನೀಡುವ ಜಾಗವೊಂದನ್ನು ಕಟ್ಟಿದ್ದಾರೆ.

ಉತ್ತಮ ಗುಣಮಟ್ಟದ ಬಟ್ಟೆ, ಬೆಡ್‌ಶೀಟ್‌ ಸೇರಿದಂತೆ ವಿವಿಧ ವಸ್ತುಗಳನ್ನು ಈ ಬ್ಯಾಂಕ್‌ಗೆ ಯಾರೂ ಬೇಕಾದರೂ ನೀಡಬಹುದು. ₹1 ನೀಡಿ ಇಲ್ಲಿನ ವಸ್ತುಗಳನ್ನು ಪಡೆಯಬಹುದು. ಮಹಿಳೆಯರ, ಪುರುಷರ, ಮಕ್ಕಳ ಬಟ್ಟೆಗಳು ಇಲ್ಲಿ ಸಿಗುತ್ತದೆ. ಚಿಕ್ಕ ಮಕ್ಕಳ ಬಟ್ಟೆ, ಆಟಿಕೆ, ಟವೆಲ್, ಹೊದಿಕೆ, ಶಾಲಾ ಬ್ಯಾಗ್‌ ಸಹ ಇಲ್ಲಿ ಸಿಗುತ್ತವೆ.

ಒಂದು ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದರೆ, 40 ಬಟ್ಟೆಗಳನ್ನು ನೀಡಲಾಗುತ್ತಿದೆ. ಅದಕ್ಕೆ ₹40 ಕೊಟ್ಟರೆ ಸಾಕು. ಬಟ್ಟೆಗಳನ್ನು ನೀಡುವಾಗ ಆಧಾರ್‌ ಕಾರ್ಡ್‌ ಪರಿಗಣಿಸಲಾಗುತ್ತಿದ್ದು, ಒಂದು ಕಾರ್ಡ್‌ಗೆ ಹತ್ತು ಬಟ್ಟೆಗಳ ಮಿತಿ ಇದೆ.

‘ಕೇವಲ ₹1ಕ್ಕೆ ಒಂದು ಬಟ್ಟೆ ಸಿಕ್ಕಿದರೆ ಬಡವರಿಗೆ ಸಹಾಯವಾಗುತ್ತದೆ ಎಂಬ ಕಾರಣಕ್ಕೆ ಟ್ರಸ್ಟ್‌ ಆರಂಭಿಸಿದೆವು. ವಾರಕ್ಕೊಮ್ಮೆ ಸರಾಸರಿ 130ರಿಂದ 150 ಮಂದಿ ಇಲ್ಲಿಗೆ ಭೇಟಿ ನೀಡಿ ಬಟ್ಟೆ ಖರೀದಿಸುತ್ತಾರೆ’ ಎಂದು ಟ್ರಸ್ಟ್‌ನ ವಿನೋದ್‌ ವಿವರಿಸುತ್ತಾರೆ.

‘2002ರಲ್ಲಿ ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಓದುತ್ತಿದ್ದಾಗ ‘ಕ್ಯಾಂಪಸ್ ಇನಿಷಿಯೇಷನ್’ ಎನ್ನುವ ಯೋಜನೆ ಆರಂಭಿಸಲಾಗಿತ್ತು. ಆಗ ಸ್ನೇಹಿತರ ಬಟ್ಟೆಗಳನ್ನು ಸಂಗ್ರಹಿಸಿ ಬಟ್ಟೆ ಬ್ಯಾಂಕ್ ಮಾಡಲಾಗಿತ್ತು. ಆಗಲೂ ಕೇವಲ ₹1ಕ್ಕೆ ಮಂಗಳೂರಿನಲ್ಲಿ ಮಾರಾಟ ಮಾಡಲಾಗಿತ್ತು. ಅದೇ ಈಗ ಪ್ರೇರಣೆ’ ಎಂದರು.

‘ಕೋವಿಡ್‌ ಕಾಲದಲ್ಲಿ ಉದ್ಯೋಗ ಕಳೆದುಕೊಂಡ ಅನೇಕರು ತೀರ ಸಂಕಷ್ಟ ಅನುಭವಿಸಿದರು. ಕಷ್ಟದಲ್ಲಿದ್ದವರಿಗೆ ನೆರವಾಗಲು ಮತ್ತೆ ಬಟ್ಟೆ ಬ್ಯಾಂಕ್ ಅನ್ನು ಇದೇ ಸೆಪ್ಟೆಂಬರ್‌ನಲ್ಲಿ ಆರಂಭಿಸಿದೆವು. ಈ ಬ್ಯಾಂಕ್‌ ಭಾನುವಾರ ಬೆಳಿಗ್ಗೆ 11 ರಿಂದ ಸಂಜೆ 4ರವರೆಗೆ ಮಾತ್ರ ತೆರೆದಿರುತ್ತದೆ. ಉಳಿದ ದಿನಗಳಲ್ಲಿ ಬಟ್ಟೆ ನೀಡಲು ಸಂಪರ್ಕಿಸಬಹುದು’ ಎಂದ ಇನ್ನೊಬ್ಬ ಸದಸ್ಯ ನಿತಿನ್‌
ತಿಳಿಸಿದ್ದಾರೆ.

‘ಬೆಂಗಳೂರಿನ ಸ್ನೇಹಿತರ ಸಹಾಯದಿಂದ ಇದುವರೆಗೆ 30ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಿಂದ ಬಟ್ಟೆಗಳನ್ನು ಸಂಗ್ರಹಿಸಿದ್ದೇವೆ. ಬಟ್ಟೆಗಳ ಮಾರಾಟದಿಂದ ಸಂಗ್ರಹವಾಗುತ್ತಿರುವ ಹಣವನ್ನು ಬಡ ಕುಟುಂಬಗಳ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ನೀಡುತ್ತೇವೆ. ’ ಎಂದರು.

ಸಂಪರ್ಕಕ್ಕೆ: 9886701145, 9972099323, 9886701148

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT