ಸೋಮವಾರ, ನವೆಂಬರ್ 28, 2022
20 °C
ಬಿಡಿಎ: ಕಟ್ಟಡಗಳಿರುವ ‍ಪ್ರದೇಶ ಭೂಸ್ವಾಧೀನಕ್ಕೆ ಅಧಿಸೂಚನೆ

ಭೂ ಸ್ವಾಧೀನ ವಿಳಂಬ: ಬಿಡಿಎ ಅಧಿಕಾರಿಗಳ ಅಮಾನತಿಗೆ ಸಿಎಂ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಾ. ಶಿವರಾಮ ಕಾರಂತ ಬಡಾವಣೆಗಾಗಿ ಕಟ್ಟಡಗಳು ಇರುವ ಪ್ರದೇಶವನ್ನೂ ಭೂಸ್ವಾಧೀನ ಪಡಿಸಿಕೊಳ್ಳಲೆಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಕಾರಣರಾದ ಬಿಡಿಎ ಅಧಿಕಾರಿಗಳನ್ನು ಅಮಾನತು ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಶಿವಾರಮ ಕಾರಂತ ಬಡಾವಣೆ ಪ್ರಕರಣವನ್ನು ಆಲಿಸುತ್ತಿರುವ ಸುಪ್ರೀಂ ಕೋರ್ಟ್‌, 245 ಎಕರೆಯನ್ನು ಕೈಬಿಟ್ಟ ಬಗ್ಗೆ ಪರಿಶೀಲಿಸಿತು. ಬಿಡಿಎ ಬಿಟ್ಟಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಆದೇಶಿಸಿತು. ಇದರಂತೆ ಬಡಾವಣೆ ನಿರ್ಮಿಸಲು ಹೆಚ್ಚುವರಿಯಾಗಿ 245 ಎಕರೆ ಪ್ರದೇಶ ಭೂ ಸ್ವಾಧೀನಪಡಿಸಿಕೊಳ್ಳಲು ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.

ಎರಡು ತಿಂಗಳ ನಂತರ ಅಂತಿಮ ಅಧಿಸೂಚನೆ ಹೊರಡಿಸಲು ಸಿದ್ಧಪಡಿಸಲಾಗಿದ್ದ ಕರಡಿನಲ್ಲಿ 52 ಎಕರೆಯನ್ನು ಕೈಬಿಡಲಾಗಿತ್ತು. ಮುಖ್ಯಮಂತ್ರಿಯವರ ಸಹಿಗೆ ಈ ಕರಡು ಪ್ರತಿ ತಲುಪಿದ್ದಾಗ ಅಧಿಕಾರಿಗಳ ಲೋಪ ಕಂಡುಬಂದಿದೆ.

ಬೆಂಗಳೂರು ಉತ್ತರದ ಯಶವಂತಪುರ, ಹೆಸರಘಟ್ಟ ಮತ್ತು ಯಲಹಂಕ ಹೋಬಳಿಯ 52 ಎಕರೆ ಡಿನೋಟಿಫಿಕೇಷನ್‌ಗೆ ಕರಡು ಸಿದ್ಧವಾಗಿತ್ತು. 193 ಎಕರೆ ಪ್ರದೇಶದ ಸ್ವಾಧೀನಕ್ಕೆ ನಿರ್ಧರಿಸಲಾಗಿತ್ತು. ‘ಪ್ರಾಥಮಿಕ ಅಧಿಸೂಚನೆ ಮಾಡುವಾಗ ಈ ಕಟ್ಟಡಗಳು ಗಮನಕ್ಕೆ ಬಂದಿರಲಿಲ್ಲವೇ’ ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಅವರು, ‘ಎಲ್ಲ 245 ಎಕರೆ ಪ್ರದೇಶ ಅಂತಿಮ ಅಧಿಸೂಚನೆಯಲ್ಲಿರಲಿ’ ಎಂದು ಸೂಚಿಸಿದ್ದಾರೆ.

ಅ.27ರಂದು ಬಿಡಿಎಗೆ ಪತ್ರ ಬರೆದಿರುವ ಮುಖ್ಯಮಂತ್ರಿಯವರು, ಕಟ್ಟಡ ಇದ್ದರೂ ಭೂಸ್ವಾಧೀನಕ್ಕೆ ಅಧಿಸೂಚಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿ. ಪ್ರಾಥಮಿಕ ಅಧಿಸೂಚನೆಯಲ್ಲಿ ಭೂಸ್ವಾಧೀನಕ್ಕಾಗಿ ಸ್ಥಳ ಗುರುತಿಸಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಸೂಚಿಸಿದ್ದಾರೆ.

ಬಿಡಿಎ ಈ ಬಗ್ಗೆ ಈವರೆಗೆ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಬದಲಿಗೆ, ಪ್ರಾಥಮಿಕ ಅಧಿಸೂಚನೆಯಲ್ಲಿರುವ 245 ಎಕರೆ ಪ್ರದೇಶದಲ್ಲಿರುವ ಕಟ್ಟಡಗಳನ್ನು ಕ್ರಮಬದ್ಧಗೊಳಿಸಲು ಕ್ರಮ ಕೈಗೊಂಡಿದೆ.

ಬಿಡಿಎ ಭೂಸ್ವಾಧೀನ ವಿಭಾಗದ ಉಪ ಆಯುಕ್ತೆ ಡಾ. ಸೌಜನ್ಯ ಅವರನ್ನು ಈ ಬಗ್ಗೆ ಸಂಪರ್ಕಿಸಿದಾಗ, ‘ಇದು ಆಂತರಿಕ ವಿಷಯ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು