ಸೋಮವಾರ, ಜನವರಿ 25, 2021
27 °C
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ

‘ಪೊಲೀಸ್ ಇಲಾಖೆಗೆ ಬಜೆಟ್‍ನಲ್ಲಿ ₹100 ಕೋಟಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪೊಲೀಸ್ ಇಲಾಖೆಯ ಆಧುನೀಕರಣಕ್ಕಾಗಿ ಬಜೆಟ್‍ನಲ್ಲಿ ₹100 ಕೋಟಿ ಮೀಸಲಿಡುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಈ ಕುರಿತು ಮುಂದಿನ ಬಜೆಟ್‍ನಲ್ಲಿ ಗಮನ ಹರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮಡಿವಾಳದಲ್ಲಿ ನಿರ್ಮಾಣಗೊಂಡಿರುವ ನ್ಯಾಯ ವಿಜ್ಞಾನ ಪ್ರಯೋಗಾಲಯ ನಿರ್ದೇಶನಾಲಯದ ನೂತನ ಕಟ್ಟಡ ಉದ್ಘಾಟಿಸಿ ಹಾಗೂ ಪೊಲೀಸ್ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಎಷ್ಟು ಮುಖ್ಯವೋ? ಅಪರಾಧಗಳನ್ನು ತಡೆಯುವುದು ಹಾಗೂ ತಪ್ಪಿತಸ್ಥರು ಪಾರಾಗದಂತೆ ತನಿಖೆ ನಡೆಸುವುದೂ ಅಷ್ಟೇ ಮುಖ್ಯ. ಸರ್ಕಾರವು ಪೊಲೀಸ್ ಇಲಾಖೆಗೆ ಸುಸಜ್ಜಿತ ಕಟ್ಟಡ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒದಗಿಸುವ ಮೂಲಕ ನ್ಯಾಯ ವ್ಯವಸ್ಥೆಯನ್ನು ಬಲಗೊಳಿಸುತ್ತಿದೆ’ ಎಂದು ಹೇಳಿದರು.

ಗೃಹಸಚಿವ ಬಸವರಾಜ ಬೊಮ್ಮಾಯಿ, ‘ಪೊಲೀಸರ ತನಿಖೆಗೆ ಈ ಪ್ರಯೋಗಾಲಯ ಬಲ ತುಂಬಿದೆ. ಫಿಂಗರ್ ಪ್ರಿಂಟ್‍ಗೆ (ಬೆರಳು ಮುದ್ರೆ) ಸೀಮಿತಗೊಂಡಿದ್ದ ಪ್ರಯೋಗಾಲಯವು ಎಲ್ಲ ರೀತಿಯ ಆಧುನಿಕ ತಂತ್ರಜ್ಞಾನಗಳೊಂದಿಗೆ ಸಜ್ಜಾಗಿದೆ. ಇದಕ್ಕಾಗಿ ₹20 ಕೋಟಿ ಖರ್ಚಾಗಿದೆ. ಇಲಾಖೆಗಾಗಿ ಬಜೆಟ್‍ನಲ್ಲಿ ಹೆಚ್ಚಿನ ಹಣ ಮೀಸಲಿಡಲು ಬೇಡಿಕೆ ಇಡಲಾಗಿದೆ’ ಎಂದರು.

‘ಆರೋಪಿಗಳ ಪತ್ತೆಗೆ ಎಫ್‍ಎಸ್‍ಎಲ್ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯದಲ್ಲಿ ಇನ್ನೂ 5 ಪ್ರಯೋಗಾಲಯಗಳನ್ನು ನಿರ್ಮಾಣ ಮಾಡಲಿದ್ದು, ಪ್ರತಿ ಜಿಲ್ಲೆಯಲ್ಲೂ ಒಂದು ಪ್ರಯೋಗಾಲಯ ತೆರೆಯುವ ಚಿಂತನೆ ಇದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು