ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪ ಎಂದರೆ...

Last Updated 15 ಜೂನ್ 2018, 20:24 IST
ಅಕ್ಷರ ಗಾತ್ರ

ಅಪ್ಪ ರೂಪಿಸಿಕೊಂಡ ವ್ಯಾವಹಾರಿಕ ಜಗತ್ತು ಆತನನ್ನು ಹೊರಗಿನ ಪ್ರಪಂಚದೊಂದಿಗೆ ಆತ್ಮೀಯತೆ ಸಾಧಿಸುವಂತೆ ಮಾಡುತ್ತದೆ. ಸ್ವಾರ್ಥಪರತೆ ಬಿಟ್ಟು ನೋಡುವುದು ಆತನ ಸ್ವಭಾವಗಳಲ್ಲೊಂದು.

‘ನಾನು ಚಿಕ್ಕವನಿದ್ದಾಗ, ನನ್ನ ತಂದೆ ‘ನಿನಗೆ ಕೋಪ ಬಂದ ಯಾವುದೇ ಸಂದರ್ಭದಲ್ಲಿ ತಕ್ಷಣ ಪ್ರತಿಕ್ರಿಯೆ ನೀಡಬೇಡ. ಕನಿಷ್ಠ 24 ಗಂಟೆ ಮೌನವಹಿಸು. ನಂತರ ಪ್ರತಿಕ್ರಿಯಿಸು’ ಎಂದಿದ್ದರು. ಚಿಕ್ಕವನಿದ್ದಾಗ ಅವರ ಈ ಆಶಯ ಅರ್ಥವಾಗಿರಲಿಲ್ಲ. ಆದರೆ ಈ ಮಾತು ನನ್ನ ಬದುಕನ್ನೇ ಬದಲಿಸಿತು’ ಎನ್ನುತ್ತಾರೆ ಜಗತ್ತು ಕಂಡ ಪ್ರಮುಖ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾದ ಜಾರ್ಜ್‌ ಗುರ್ಜೀಫ್.

ಅಂದರೆ ತಂದೆ ಒಬ್ಬ ಅದ್ಬುತ ಮಾರ್ಗದರ್ಶಕ, ಮಗ ಹೊರಗೆ ಜಗಳವಾಡಿಕೊಂಡು ಬಂದರೆ, ‘ನಿನ್ನ ತಪ್ಪೇನು?’ ಎಂದು ಕೇಳುವ ನಿಷ್ಠುರವಾದಿ.

ಮಗು ಅಮ್ಮನ ಎದೆಯಾಳದಲ್ಲಿ ಸಿಕ್ಕ ಮೀನಾಗಿರಬಹುದು; ಆದರೆ ಈ ಜಗತ್ತನ್ನು ನೋಡುವುದಕ್ಕೆ ಅಪ್ಪನ ಹೆಗಲು ಮುಖ್ಯ. ಅಪ್ಪ ಅಂದರೆ ಜವಾಬ್ದಾರಿಗಳ ಮೂಟೆ. ತನ್ನ ಕುಟುಂಬಕ್ಕೆ ಅಗತ್ಯವಾದ ಅಕ್ಷರ ಮತ್ತು ಅನ್ನವನ್ನು ನೀಡುವ ಗುರುತರ ಕಾಳಜಿ ಆತನಿಗೆ ಹೇಗೋ ಬಂದುಬಿಟ್ಟಿದೆ. ಮಕ್ಕಳ ಓದು, ಭವಿಷ್ಯ, ಆರೋಗ್ಯವನ್ನು ಪೊರೆಯುವ ಜೀವ ಅಪ್ಪ.

ಅಪ್ಪ ತನ್ನ ಮಗುವನ್ನು ತಿದ್ದುವ ಗುರುವಷ್ಟೇ ಅಲ್ಲ. ತನ್ನ ಮಗುವಿನಿಂದ ಕಲಿಯುವ, ಬದಲಾಗುವ ಶಿಷ್ಯ ಕೂಡ. ಹೀಗಾಗಿಯೇ ಕವಿ ವರ್ಡ್ಸ್‌ವರ್ಥ್‌ನಿಗೆ ‘ಮಗುವೇ ಮನುಷ್ಯನ ತಂದೆ’ (ಚೈಲ್ಡ್‌ ಇಸ್‌ ದಿ ಫಾದರ್‌ ಆಫ್‌ ದಿ ಮ್ಯಾನ್‌) ಅನಿಸಿದ್ದು. ಗ್ರಾಮೀಣ ಬದುಕಿನಲ್ಲಿ, ಬೇಜಾಬ್ದಾರಿಯಿಂದಿರುವ ಅವಿವಾಹಿತ ಹುಡುಗನನ್ನು ಕಂಡು ಹಿರಿಯರು ಹೇಳುತ್ತಾರೆ: ‘ಇವನಿಗೊಂದು ಮದುವೆ ಮಾಡಿ. ಒಂದು ಮಗುವಾದರೆ ಬುದ್ಧಿ ಕಲಿಯಬಹುದು’. ಅದು ನಿಜವೂ ಇರಬಹುದೇನೋ?

ಅಮ್ಮನ ಜವಾಬ್ದಾರಿ ಒಂದು ತೆರನದ್ದಾದರೆ, ಅಪ್ಪನದ್ದು ಬೇರೆ. ಆತ ಸದಾ ಕೋರ್ಟ್‌, ಕಚೇರಿ ಅಲೆಯುತ್ತಾನೆ. ಮನೆ, ಭೂಮಿ ರಕ್ಷಣೆಗಾಗಿ ಹೊಡೆದಾಡುತ್ತಾನೆ. ‘ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ’ ಎಂದು ಶಿವರಾಮ ಕಾರಂತರು ಹೇಳುತ್ತಾರೆ. ಆದರೆ ಸಾಮಾನ್ಯ ಮನುಷ್ಯನ ತುಡಿತ ತನ್ನ ಮಕ್ಕಳಿಗೆ ಆರ್ಥಿಕ ಭದ್ರತೆಯನ್ನೇ ನೀಡುವುದಾಗಿರುತ್ತದೆ. ಮಕ್ಕಳಿಗಾಗಿ ಸೂರು ಕಟ್ಟುವ ಗುರಿ ಪ್ರತಿ ತಂದೆಯದ್ದಾಗಿರುತ್ತದೆ. ಮಕ್ಕಳನ್ನೇ ಆಸ್ತಿಯನ್ನಾಗಿಸುತ್ತಾ, ಮಕ್ಕಳಿಗಾಗಿ ಆಸ್ತಿಯನ್ನು ಮಾಡುವ ವಿಸ್ಮಯ ಅಪ್ಪ ಅನಿಸುತ್ತದೆ.

ಇಂತಹ ಅಪ್ಪಂದಿರ ನೆನೆಯುವ ದಿನ (ಜೂನ್‌ 17) ಬಂದಿದೆ. ಅಮೆರಿಕದ ಯುವತಿ ಸೋನಾರಾ ಲೂಯಿಸ್‌, ಅಮ್ಮಂದಿರ ದಿನದಂತೆ ‘ಅಪ್ಪನ ದಿನ’ವನ್ನು ಆಚರಿಸಬೇಕು ಎಂದು ಚಿಂತಿಸಿದಳು. ಆಕೆಯ ಆಲೋಚನೆಯಂತೆ 1910, ಜೂನ್‌ 19ರಂದು ‘ಅಪ್ಪನ ದಿನ’ ಎಂಬ ಆಚರಣೆ ರೂಪುಪಡೆದುಕೊಂಡಿತು. ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಜೂನ್ 3ನೇ ಭಾನುವಾರವನ್ನು ಆಚರಿಸಲಾಗುತ್ತಿದ್ದರೂ ಹಲವು ರಾಷ್ಟ್ರಗಳು ಬೇರೆ ಬೇರೆ ದಿನವನ್ನು ಅಪ್ಪಂದಿರ ದಿನವೆಂದು ಪರಿಗಣಿಸಿದ್ದಾರೆ. ಈ ಸಂದರ್ಭದಲ್ಲಿ ಅಪ್ಪನ ಕುರಿತು ಭಾವುಕವಾಗಬಹುದು. ಸೋಶಿಯಲ್ ಮೀಡಿಯಾ ಬೆಳೆದ ಮೇಲಂತೂ ಅಪ್ಪನ ಹಿರಿಮೆಯನ್ನು ಹಾಡಿ ಹೊಗಳುವ ‘ಅಪ್ಪಾಯಣ’ ಕಥನಗಳಿಗೇನೂ ಕಡಿಮೆ ಇಲ್ಲ.

ಅಷ್ಟಾದರೂ ಅಪ್ಪನ ಕುರಿತು ನಾವೆಷ್ಟು ಅರಿತೆವು? ಆತನ ಚಡಪಡಿಕೆ ನಮಗೆ ಅರ್ಥವಾಯಿತೆ? ಬದುಕಿಗಾಗಿ ಉದ್ಯೋಗ, ನಗರೀಕರಣ, ಆತುರದ ಬೆನ್ನು ಹತ್ತಿದ ಮಕ್ಕಳು ಹೆತ್ತವರ ಸಂಕಟವನ್ನು ಎಷ್ಟು ಆಲಿಸಿಯಾರು? ಅಪ್ಪನ ಮಾರ್ಗದರ್ಶನದಂತೆ ನಡೆದರೆ? ಲಂಕೇಶರ ‘ಅಪ್ಪನ ನೆನಪು’ ಲೇಖನದ ಕೊನೆಯ ಸಾಲುಗಳನ್ನು ನೆನೆಯುವುದು ಸೂಕ್ತವೆನಿಸುತ್ತಿದೆ.

ಲಂಕೇಶ್ ತಮ್ಮ ತಂದೆ ತೀರಿಕೊಂಡಾಗ ‘ಹೆಣವನ್ನು ಮಣ್ಣು ಮಾಡುವ ಸಮಯ. ಮಳೆ ಹೆಚ್ಚಾಯಿತು. ನಾನು ನಿಂತಲ್ಲಿಂದ ಕದಲಲಿಲ್ಲ. ಇದ್ದಕ್ಕಿದ್ದಂತೆ ನನ್ನ ಕಣ್ಣುಗಳಿಂದ ನೀರು ಸುರಿಯತೊಡಗಿತು. ಆತನನ್ನು ಸಮಾಧಿ ಮಾಡುತ್ತಿದ್ದ ಗದ್ದೆ ಅವನು ಮಾಡಿದ್ದು. ಆತನಲ್ಲಿ ದುಡಿಯುವ ಶಕ್ತಿ ಇದ್ದಾಗ ಎಂದೂ ಅದನ್ನು ಬೀಳುಬಿಟ್ಟಿರಲಿಲ್ಲ. ಈಗ ಬೀಳಾಗಿದೆ. ಮಳೆ ಬರಲಿಲ್ಲ ಎಂದಲ್ಲ, ಅದನ್ನು ಉಳುತ್ತಿದ್ದ ಮಗ, ಮೊಮ್ಮಗ ಪುಢಾರಿಯಾದರು. ದೇಶವನ್ನು ಕಬಳಿಸುತ್ತಿದ್ದ ಹೆಂಡ, ಸೋಮಾರಿತನ, ನೀಚತನವೆಲ್ಲ ನಮ್ಮೂರನ್ನು ಸೇರಿದವು ...ಮುಪ‍್ಪಿನ ವೇಳೆಯಲ್ಲಿ ತನ್ನ ಊರನ್ನು, ತನ್ನ ಗದ್ದೆಯನ್ನು ಕಂಡು ರೇಗುತ್ತಿದ್ದ ಈ ಮುದುಕ ಅದನ್ನೆಲ್ಲ ಹೇಳಬಲ್ಲವನಾಗಿರಲಿಲ್ಲ. ಅದಕ್ಕೇ ಹೇಳಿದೆ’ ಬಹುತೇಕ ಅಪ್ಪಂದಿರು ಹೀಗೆಯೇ ಇರಬಹುದಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT