ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಚಿಕಿತ್ಸೆ: ಕೆ.ಸಿ.ಜನರಲ್ ಆಸ್ಪತ್ರೆ ಸಿದ್ಧತೆ ಪರಿಶೀಲನೆ

ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವರ ಸೂಚನೆ
Last Updated 8 ಜನವರಿ 2022, 20:58 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಮತ್ತು ಓಮೈಕ್ರಾನ್ ಪ್ರಕರಣ ಹೆಚ್ಚಳದಿಂದ ಉಂಟಾಗಬಹುದಾದ ಪರಿಸ್ಥಿತಿ ಎದುರಿಸಲು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮಾಡಿಕೊಳ್ಳಲಾದ ಸನ್ನದ್ಧತೆ ಮತ್ತು ಲಭ್ಯ ಇರುವ ಸೌಕರ್ಯಗಳನ್ನು ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಶನಿವಾರ ಪರಿಶೀಲಿಸಿದರು.

ಆಸ್ಪತ್ರೆಯಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ತೀವ್ರ ಕೊರತೆ ಇದ್ದು, ನೇಮಕಾತಿ ನಡೆಸಲು ಪ್ರಸ್ತಾವ ಸಲ್ಲಿಸಬೇಕು. ಸರ್ಕಾರದಿಂದ ಕೂಡಲೇ ಅನುಮೋದನೆ ಕೊಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

‘ಕೋವಿಡ್ ಪರೀಕ್ಷೆಗೆ ಒಳಗಾಗುವವರ ಗಂಟಲ ದ್ರವದ ಮಾದರಿಯನ್ನು ಅವರ ಮನೆಗೇ ತೆರಳಿ ಸಂಗ್ರಹಿಸುವ ವ್ಯವಸ್ಥೆಯನ್ನುಕ್ಷೇತ್ರದಲ್ಲಿ ಜಾರಿಗೆ ತರಬೇಕು. ಸೋಂಕಿತರಿಗೆ ದಿನದ 24 ಗಂಟೆಯೂ ಚಿಕಿತ್ಸೆ ದೊರಕಿಸುವ ಪ್ರಾಥಮಿಕ ಆರೋಗ್ಯ ಕೇಂದ್ರವೊಂದನ್ನು ಗುರುತಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್ ಎರಡನೇ ಅಲೆ ತೀವ್ರವಾಗಿದ್ದಾಗ ಮಲ್ಲೇಶ್ವರ ವ್ಯಾಪ್ತಿಯಲ್ಲಿ ಸಹಾಯವಾಣಿ ಮತ್ತು ನಿಯಂತ್ರಣಾ ಕೊಠಡಿ ಸ್ಥಾಪಿಸಲಾಗಿತ್ತು. ಅದನ್ನು ಮತ್ತೆ ಸಕ್ರಿಯಗೊಳಿಸಬೇಕು. ‌ಕೋವಿಡ್ ಆರೈಕೆ ಕೇಂದ್ರವನ್ನು ಸಜ್ಜುಗೊಳಿಸಬೇಕು ಎಂದು ಹೇಳಿದರು.

ಸೋಂಕು ಕಂಡುಬಂದವರಿಗೆ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಅದಕ್ಕಾಗಿ ‘ಲೈಫ್ ಸೈನ್ಸ್ ಡಯಾಗ್ನೋಸ್ಟಿಕ್ ಸೆಂಟರ್’ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಬೇಕು. ಆಸ್ಪತ್ರೆಗೆ ದಾಖಲಾಗುವವರಿಗೆ ಪೌಷ್ಟಿಕ ಆಹಾರ ಪೂರೈಸಲು ಹಿಂದಿನಂತೆ ಇಸ್ಕಾನ್ ಸಂಸ್ಥೆಯೊಂದಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ 50 ಹಾಸಿಗೆಗಳ ಸಾಮರ್ಥ್ಯದ ಮಕ್ಕಳ ಚಿಕಿತ್ಸಾ ಕಟ್ಟಡ ಮತ್ತು ಜಯದೇವ ಹೃದ್ರೋಗ ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ 60 ಹಾಸಿಗೆಗಳ ಸಾಮರ್ಥ್ಯದ ಹೃದ್ರೋಗ ಚಿಕಿತ್ಸಾ ಕೇಂದ್ರದ ಕಟ್ಟಡ ಕಾಮಗಾರಿಯನ್ನೂ ಪರಿಶೀಲಿಸಿದ ಸಚಿವರು ಇವುಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಆಕ್ಸಿಜನ್ ಪೂರೈಕೆ ವ್ಯವಸ್ಥೆ, ತೀವ್ರ ನಿಗಾ ಘಟಕ (ಐಸಿಯು), ವೆಂಟಿಲೇಟರ್ ಸೌಲಭ್ಯ ಸಜ್ಜು: ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 106 ಹಾಸಿಗೆಗಳ ಸಾಮರ್ಥ್ಯದ ವೆಂಟಿಲೇಟರ್ ಸಹಿತ ವಾರ್ಡ್, 11 ಹಾಸಿಗೆಗಳಿರುವ ಎಚ್ಎಫ್ಎನ್‌ಸಿ ಆಕ್ಸಿಜನ್ ವ್ಯವಸ್ಥೆ ಸಹಿತ ವಾರ್ಡ್, 60 ಹಾಸಿಗೆಗಳ ಎಚ್ಇ ಮಾನಿಟರ್ ಸಹಿತ ಸ್ಟೆಪ್-ಡೌನ್ ಐಸಿಯು ವಾರ್ಡ್ ಸಜ್ಜಾಗಿವೆ. ಇದರ ಜತೆಗೆ, ಪ್ಯಾಲೇಸ್ ಗುಟ್ಟಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ 30 ಹಾಸಿಗೆಗಳ ಸ್ಟೆಪ್-ಡೌನ್ ಐಸಿಯು ವಾರ್ಡ್, ಮಕ್ಕಳ ಚಿಕಿತ್ಸೆಗೆ 15 ಸಿ-ಟ್ಯಾಪ್ ಯಂತ್ರಗಳ ಸೌಕರ್ಯಗಳಿರುವ ವಾರ್ಡ್ ಮತ್ತು ಹೈಟೆಕ್ ಪ್ರಯೋಗಾಲಯ ಇದೆ ಎಂದು ಸಚಿವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT