ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಬ್ಯಾಂಕ್‌ಗಳ ಅವ್ಯವಹಾರ: ದೆಹಲಿಯಲ್ಲಿ ಪ್ರತಿಭಟನೆಗೆ ಷೇರುದಾರರ ನಿರ್ಧಾರ

Last Updated 9 ಜುಲೈ 2022, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಸೇರಿದಂತೆ ಕೆಲವು ಸಹಕಾರ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು, ಈ ಬ್ಯಾಂಕ್‌ಗಳ ಷೇರುದಾರರಿಗೆ ನ್ಯಾಯ ಕಲ್ಪಿಸಲು ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ’ ಎಂದು ಗುರು ರಾಘವೇಂದ್ರ ಕೋ–ಆಪರೇಟಿವ್ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆ ಮಹಾಪೋಷಕ ಶಂಕರ್ ಗುಹಾ ದ್ವಾರಕಾನಾಥ್ ಬೆಳ್ಳೂರು ಹೇಳಿದರು.

ನಗರದ ಅನ್ನಪೂರ್ಣ ಭವನದಲ್ಲಿ ಶನಿವಾರ ನಡೆದ ಸಮಾಲೋಚನಾ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸರ್ಕಾರದಿಂದ ನ್ಯಾಯ ದೊರೆಯಲಿದೆ ಎಂದು ತಾಳ್ಮೆ ವಹಿಸಿದ್ದೆವು. ಆದರೆ, ಹಗರಣವು ಬೆಳಕಿಗೆ ಬಂದು ಎರಡೂವರೆ ವರ್ಷವಾದರೂ ನ್ಯಾಯ ಸಿಕ್ಕಿಲ್ಲ. ಸಂಸತ್‌ ಅಧಿವೇಶನದ ವೇಳೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಸಿಬಿಐ ತನಿಖೆಗೆ ಆಗ್ರಹಿಸಲಾಗುವುದು’ ಎಂದರು.

‘ಷೇರುದಾರರಿಗೆ ವಂಚನೆಯಾಗಿದ್ದರೂ ಸರ್ಕಾರವು ಯಾವುದೇ ದಾರಿ ತೋರಿಸುತ್ತಿಲ್ಲ. ಗುರು ರಾಘವೇಂದ್ರ, ಸಾರ್ವಭೌಮ, ವಸಿಷ್ಠ ಹಾಗೂ ಗಣಪತಿ ಬ್ಯಾಂಕ್‌ಗಳಲ್ಲೂ ವಂಚನೆ ನಡೆದಿದೆ’ ಎಂದು ಆರೋಪಿಸಿದರು.

‘ಹಗರಣ ಬೆಳಕಿಗೆ ಬಂದಮೇಲೆ ತನಿಖೆಗೆ ಆಗ್ರಹಿಸುತ್ತಲೇ ಬಂದಿದ್ದೇವೆ. ಆದರೂ, ಪರಿಹಾರ ಲಭಿಸಿಲ್ಲ. ಸಿಬ್ಬಂದಿ ವಿರುದ್ಧವೂ ಕ್ರಮ ಆಗಿಲ್ಲ. ಅವರೆಲ್ಲರೂ ಐಷಾರಾಮಿ ಕಾರಿನಲ್ಲಿ ಸಂಚರಿಸುತ್ತಿದ್ದಾರೆ. ಷೇರುದಾರರು ಮಾತ್ರ ಸಾಲ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ’
ಎಂದು ಹೇಳಿದರು.

‘ವಂಚನೆಗೆ ಒಳಗಾದವರ ಮಹಾಒಕ್ಕೂಟ ರಚಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ ವಂಚನೆಗೆ ಒಳಗಾದವರಿಗೆ ಪರಿಹಾರ ನೀಡಬೇಕೆಂದು ದೆಹಲಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಆಗ್ರಹಿ
ಸಲಾಗುವುದು’ ಎಂದರು.

ಉಪವಾಸ ಸತ್ಯಾಗ್ರಹ: ‘ದೆಹಲಿಯಲ್ಲಿ ರಾಜ್ಯದ ಸಂಸದರೊಂದಿಗೂ ಚರ್ಚಿಸಿ ಪರಿಹಾರ ಕಲ್ಪಿಸಲು ಮನವಿ ಮಾಡಲಾಗುವುದು. ಆಗಲೂ ನ್ಯಾಯ ಸಿಗದಿದ್ದರೆ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ‘ಬ್ಯಾಂಕ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮೂರು ಬಾರಿ ಸಂಸತ್‌ನಲ್ಲಿ ಧ್ವನಿ ಎತ್ತಿದ್ದೇನೆ. ಆದರೂ, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ’ ಎಂದರು.

ರಿಸರ್ವ್‌ಬ್ಯಾಂಕ್‌ನ ನಿವೃತ್ತ ಒಂಬುಡ್ಸ್‌ಮನ್‌ ಪಳನಿ ಸ್ವಾಮಿ ಉಪಸ್ಥಿತರಿದ್ದರು.

ಗುರು ಸಾರ್ವಭೌಮ ಸೌಹಾರ್ದ ಸಹಕಾರ ಬ್ಯಾಂಕ್, ಗುರು ರಾಘವೇಂದ್ರ ಸಹಕಾರ ಬ್ಯಾಂಕ್, ಬೆಳ್ಳಿ–ಬೆಳಕು ಸೌಹಾರ್ದ ಸಹಕಾರ ಬ್ಯಾಂಕ್, ಕಣ್ವ ಸೌಹಾರ್ದ ಸಹಕಾರ ಬ್ಯಾಂಕ್, ವಸಿಷ್ಠ ಸೌಹಾರ್ದ ಸಹಕಾರ ಬ್ಯಾಂಕ್, ಸಿರಿ-ವೈಭವ ಸಹಕಾರ ಬ್ಯಾಂಕ್, ಶೈಲಗಿರಿ ಸೌಹಾರ್ದ ಬ್ಯಾಂಕ್‌ನಲ್ಲಿ ವಂಚನೆಗೊಳಾಗದ ಠೇವಣಿದಾರರು, ಷೇರುದಾರರು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT