ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾಖೆಯಲ್ಲಿ ಶೀತಲ ಸಮರ?

ರಾವ್‌ ಕಾರ್ಯವೈಖರಿಗೆ ಪೊಲೀಸ್‌ ಮಹಾನಿರ್ದೇಶಕ ಸೂದ್‌ ಅಸಮಾಧಾನ
Last Updated 22 ಏಪ್ರಿಲ್ 2020, 5:44 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಲಾಕ್‌ಡೌನ್‌ ಪರಿಣಾಮಕಾರಿಯಾಗಿ ಜಾರಿಯಾಗದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಪೊಲೀಸ್‌ ಕಮಿಷನರ್‌ ಭಾಸ್ಕರರಾವ್‌ ಅವರಿಗೆ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಬರೆದಿರುವ ಪತ್ರದ ಬಗ್ಗೆ ಪೊಲೀಸ್‌ ಇಲಾಖೆಯಲ್ಲಿ ಬಿಸಿಬಿಸಿ ಚರ್ಚೆಗಳು ನಡೆಯುತ್ತಿದ್ದು, ಅನೇಕ ಹಿರಿಯ ಅಧಿಕಾರಿಗಳು ಇದನ್ನು ‘ಶೀತಲ ಸಮರ’ ಎಂದೇ ವ್ಯಾಖ್ಯಾನಿಸುತ್ತಿದ್ದಾರೆ.

ಪ್ರವೀಣ್‌ ಸೂದ್‌ ಸೋಮವಾರ ಭಾಸ್ಕರರಾವ್‌ ಅವರಿಗೆ ಬರೆದ ಪತ್ರದಲ್ಲಿ ನಗರದಲ್ಲಿ ಲಾಕ್‌ಡೌನ್‌ ಅನ್ನು ಸರಿಯಾಗಿ ಜಾರಿ ಮಾಡದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಹೆಸರು ಬರೆಯಬಾರದು ಎಂಬ ಷರತ್ತಿನ ಮೇಲೆ ಮಾತನಾಡಿದ ಕೆಲ ಹಿರಿಯ ಅಧಿಕಾರಿಗಳು, ಈ ಪತ್ರ ಬರೆಯುವ ಅಗತ್ಯ ಇರಲಿಲ್ಲ. ಏಕೆಂದರೆ, ಕಮಿಷನರ್‌ ಹುದ್ದೆಗೂ ಅದರದೇ ಮಹತ್ವವಿದೆ. ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಗರ ಪೊಲೀಸರು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಕಮಿಷನರ್‌ ಅವರನ್ನು ಕರೆಸಿಕೊಂಡು ಮಾತನಾಡಬಹುದಿತ್ತು. ಏನು ಮಾಡಬಹುದೆಂಬ ಸಲಹೆಗಳನ್ನು ಕೊಡಬಹುದಿತ್ತು. ಆದರೆ, ಇಷ್ಟೊಂದು ಕಠಿಣ ಭಾಷೆ ಬಳಸಿ ಪತ್ರ ಬರೆಯಬೇಕಿರಲಿಲ್ಲ. ಪತ್ರದ ಭಾಷೆ ಸದಭಿರುಚಿಯಿಂದ ಕೂಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡಿಜಿ ಮತ್ತು ಐಜಿ ಇಲಾಖೆ ಮುಖ್ಯಸ್ಥರು. ಎಲ್ಲೋ ಏನೋ ತಪ್ಪಾಗುತ್ತಿದೆ ಎಂದು ಕಂಡುಬಂದಾಗ ಹಸ್ತಕ್ಷೇಪ ಮಾಡುವ ಅಧಿಕಾರ ಅವರಿಗಿದೆ. ನಗರದ ಲಾಕ್‌ಡೌನ್‌ ವಿಷಯದಲ್ಲೂ ಅವರಿಗೆ ಹಾಗೆ ಅನಿಸಿರಬಹುದು. ಹೀಗಾಗಿ, ಹಸ್ತಕ್ಷೇಪ ಮಾಡಿದ್ದಾರೆ ಇದು ತಪ್ಪಲ್ಲ. ಆದರೆ, ಪತ್ರ ಗೋಪ್ಯವಾಗಿ ಇರಬೇಕಾಗಿತ್ತು. ಅದು ಬಹಿರಂಗಗೊಂಡಿದ್ದು ಹೇಗೆ ಎಂದು ಕೆಲವು ಅಧಿಕಾರಿಗಳು ಹೇಳಿದ್ದಾರೆ.

ಸಾರ್ವಜನಿಕ ವಿಷಯಗಳಿಗೆ ಸಂಬಂಧಿಸಿದ ಪತ್ರಗಳು ಬಹಿರಂಗಗೊಂಡರೆ ಪರವಾಗಿಲ್ಲ. ಇದು ಇಲಾಖೆಯ ಕಾರ್ಯವೈಖರಿ ಕುರಿತಾದ ಪತ್ರ. ಇಂಥ ಪತ್ರಗಳು ಬಹಿರಂಗಗೊಂಡರೆ ಪರಿಣಾಮ ಇಲಾಖೆ ಮೇಲೆ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪೊಲೀಸ್‌ ಕಮಿಷನರ್‌ ಕಾರ್ಯವೈಖರಿ ಬಗ್ಗೆ ಬಹುತೇಕರಿಗೆ ಅಸಮಾಧಾನವಿದೆ. ಲಾ‌ಕ್‌ಡೌನ್‌ ಜಾರಿಗೊಳಿಸಿರುವ ವಿಧಾನದ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗಿವೆ. ಬೇಕಾಬಿಟ್ಟಿ ಪಾಸ್‌ಗಳನ್ನು ವಿತರಿಸಲಾಗಿದೆ. ಅಗತ್ಯವಿದ್ದವರಿಗೆ ಪಾಸ್‌ಗಳನ್ನು ಕೊಟ್ಟಿಲ್ಲ. ಬಹುಶಃ ಪಾದರಾಯನಪುರದ ಘಟನೆಯನ್ನು ನಿರ್ವಹಿಸಿದ ರೀತಿಯಿಂದ ಅಸಮಾಧಾನಗೊಂಡು ಸೂದ್‌ ಪತ್ರ ಬರೆದಿರಬಹುದು ಎಂದು ಅವರು
ವಿಶ್ಲೇಷಿಸುತ್ತಾರೆ.

ವಿಚಾರಣೆ ನಡೆಸಿ: ಭಾಸ್ಕರರಾವ್‌

ಕೊರೊನಾ ವೈರಸ್‌ ನಿಯಂತ್ರಣದ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾರ್ಚ್‌ 26ರಂದು ಕರೆದಿದ್ದ ಸಭೆಯಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಪೊಲೀಸರ ವಿರುದ್ಧ ಮಾಡಿದ್ದಾರೆನ್ನಲಾದ ಲಂಚದ ಆರೋಪ ಕುರಿತು ವಿಚಾರಣೆ ನಡೆಸುವಂತೆ ಭಾಸ್ಕರ್‌ರಾವ್‌ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಉಪ ಮುಖ್ಯಮಂತ್ರಿ ಆರೋಪದ ಬಳಿಕ ಸಭೆಯಿಂದ ಹೊರನಡೆದಿದ್ದ ಪೊಲೀಸ್‌ ಕಮಿಷನರ್‌, ಇದಾದ ಬಳಿಕ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಆರೋಪ ಕುರಿತು ವಿಚಾರಣೆ ನಡೆಸುವಂತೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಭಾಸ್ಕರ್‌ ರಾವ್‌ ಅವರನ್ನು ಸಂಪರ್ಕಿಸಿದಾಗ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT