ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಯಲ್ಲಿ ಇಲ್ಲದವರ ವಿವರವನ್ನೂ ಸಂಗ್ರಹಿಸಿ: ಬಿಬಿಎಂಪಿ ಆಯುಕ್ತ ಸೂಚನೆ

ಸಮಗ್ರ ಆರೋಗ್ಯ ಸಮೀಕ್ಷೆ : ಬಿಬಿಎಂಪಿ ಆಯುಕ್ತ ಸೂಚನೆ
Last Updated 12 ಮೇ 2020, 19:34 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಜನರ ಆರೋಗ್ಯ ಸಮೀಕ್ಷೆ ನಡೆಸುವಾಗ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರಿಂದಲೂ ಸಮಗ್ರ ಆರೋಗ್ಯ ಮಾಹಿತಿ ಕಲೆ ಹಾಕಬೇಕು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೋವಿಡ್‌ –19 ನಿಯಂತ್ರಣಕ್ಕೆ ಪರಿಣಾಮಕಾರಿ ಕಾರ್ಯಕ್ರಮ ರೂಪಿಸಲು ಬಿಬಿಎಂಪಿ ಆರೋಗ್ಯ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷೆ ವೇಳೆ ಶಿಕ್ಷಕರು ಹಾಗೂ ಇತರ ಸಿಬ್ಬಂದಿ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರಿಂದ ಯಾವುದೇ ಮಾಹಿತಿ ಕಲೆ ಹಾಕದ ಬಗ್ಗೆ 'ಪ್ರಜಾವಾಣಿ' ಮಂಗಳವಾರದ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಯುಕ್ತರು, ‘ಮತದಾರರ ಪಟ್ಟಿಯಲ್ಲಿರುವ ಮಾಹಿತಿ ಆಧಾರದಲ್ಲಿ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತಿತ್ತು. ನಗರದಲ್ಲಿ ನೆಲೆಸಿರುವ ಅನೇಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರನ್ನೂ ಆರೋಗ್ಯ ಸಮೀಕ್ಷೆಗೆ ಒಳಪಡಿಸಬೇಕು. ಅವರಿಂದಲೂ ಮಾಹಿತಿ ಪಡೆಯಬೇಕು ಎಂದು ಸಮೀಕ್ಷಕರಿಗೆ ನಿರ್ದೇಶನ ನೀಡಿದ್ದೇವೆ’ ಎಂದು ತಿಳಿಸಿದರು.

‘ಜನರು ತಮ್ಮ ಆರೋಗ್ಯದ ಬಗ್ಗೆ, ಕಾಯಿಲೆಗಳ ಹಿನ್ನೆಲೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಮೀಕ್ಷಕರ ಜೊತೆ ಹಂಚಿಕೊಳ್ಳಬೇಕು’ ಎಂದರು.

ಪಾದರಾಯನಪುರ: ಇಂದಿನಿಂದ ವ್ಯಾಪಕ ಆರೋಗ್ಯ ತಪಾಸಣೆ

ಕಂಟೈನ್‌ಮೆಂಟ್‌ ವಲಯದಲ್ಲಿರುವ ಪಾದರಾಯನಪುರ ವಾರ್ಡ್‌ನಲ್ಲಿ ಕೋವಿಡ್‌ 19 ಸೋಂಕಿನ 49 ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ವಾರ್ಡ್‌ನಲ್ಲಿ ಬುಧವಾರದಿಂದ ವ್ಯಾಪಕವಾಗಿ ಆರೋಗ್ಯ ಪರೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.

‘ಈ ವಾರ್ಡ್‌ನ ಯಾವ ರಸ್ತೆಗಳಲ್ಲಿನ ಮನೆಗಳಲ್ಲಿ ಕೋವಿಡ್‌ 19 ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಗುರುತಿಸಲು ಅಲ್ಲಿನ ಎಲ್ಲ ನಿವಾಸಿಗಳ ಗಂಟಲದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಿದ್ದೇವೆ. ಸೋಮವಾರದಿಂದಲೇ ಈ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ಗಂಟಲದ್ರವ ಸಂಗ್ರಹಿಸುವ ಕಿಯೋಸ್ಕ್‌ಗಳನ್ನು ಬೇರೆ ಕಡೆಗಳಿಂದ ತರಿಸಿಕೊಳ್ಳುವಾಗ ವಿಳಂಬವಾಯಿತು. ಬುಧವಾರದಿಂದ ಈ ಪ್ರಕ್ರಿಯೆ ಪ್ರಾರಂಭ ಮಾಡಲಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.

‘ಈ ವಾರ್ಡ್‌ನಲ್ಲಿ ವ್ಯಾಪಕ ಆರೋಗ್ಯ ತಪಾಸಣೆ ನಡೆಸಲು ಸರ್ಕಾರ ಅನುಮತಿ ನೀಡಿದೆ. ಸರ್ಕಾರ ಸೂಚಿಸಿರುವ ವಿಧಾನದಲ್ಲಿ ಗಂಟಲದ್ರವ ಸಂಗ್ರಹಿಸಿ ಸಂಬಂಧಪಟ್ಟ ಪ್ರಯೋಗಾಲಯಗಳಿಗೆ ಕಳುಹಿಸುತ್ತೇವೆ. ಇದಕ್ಕೆ ಬೇಕಾದ ಕಿಟ್‌ಗಳನ್ನು ಸರ್ಕಾರವೇ ಪೂರೈಸಿದೆ’ ಎಂದರು.

’ರಾಯಪುರ ವಾರ್ಡ್‌ನಲ್ಲಿರುವ ಜೆಜೆಆರ್‌ ಜನರಲ್‌ ಆಸ್ಪತ್ರೆಯಲ್ಲಿ ಗಂಟಲದ್ರವ ಸಂಗ್ರಹಿಸುವ ಕೇಂದ್ರ ಆರಂಭಿಸಲಾಗುತ್ತಿದೆ. ಪಾದರಾಯನಪುರದ ನಿವಾಸಿಗಳನ್ನು ಅಲ್ಲಿಗೆ ಕರೆದೊಯ್ದು ಮಾದರಿ ಸಂಗ್ರಹಿಸುತ್ತೇವೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಎಚ್‌.ವಿಜಯೇಂದ್ರ ತಿಳಿಸಿದರು.

‘ಮೊದಲ ದಿನ 25 ಮಂದಿಯ ಗಂಟಲದ್ರವವನ್ನು ಮಾತ್ರ ಸಂಗ್ರಹಿಸುತ್ತೇವೆ. ಕ್ರಮೇಣ ಈ ಸಂಖ್ಯೆಯನ್ನು ಹೆಚ್ಚಿಸುತ್ತೇವೆ. ಗಂಟಲದ್ರವ ಪರೀಕ್ಷೆ ವೇಳೆ ಅನೇಕ ವಿಧಾನಗಳನ್ನು ಅನುಸರಿಸಬೆಕಾಗುತ್ತದೆ. ಹಾಗಾಗಿ ಹೆಚ್ಚು ಮಂದಿಯ ಮಾದರಿ ಸಂಗ್ರಹ ಕಷ್ಟ ಸಾಧ್ಯ. ಅಗತ್ಯ ಬಿದ್ದರೆ ಗಂಟಲ ದ್ರವದ ಮಾದರಿ ಸಂಗ್ರಹಕ್ಕೆ ಹೆಚ್ಚುವರಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹೇರೊಹಳ್ಳಿ ವಾರ್ಡ್‌ನಲ್ಲೂ ಕಂಟೈನ್‌ಮೆಂಟ್‌ ಪ್ರದೇಶ

ಕೋವಿಡ್‌ 19 ಸೋಂಕು ಕಾಣಿಸಿಕೊಂಡಿದ್ದರಿಂದ ಹೇರೊಹಳ್ಳಿ ವಾರ್ಡ್‌ ಅನ್ನು ಕೂಡಾ ನಿಯಂತ್ರಿತ (ಕಂಟೈನ್‌ಮೆಂಟ್‌) ಪ್ರದೇಶಗಳಿರುವ ವಾರ್ಡ್‌ಗಳ ಪಟ್ಟಿಗೆ ಮಂಗಳವಾರ ಸೇರ್ಪಡೆ ಮಾಡಲಾಗಿದೆ. ತನ್ಮೂಲಕ ಇಂತಹ ವಾರ್ಡ್‌ಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ಸುಧಾಮನಗರ ಹಾಗೂ ಛಲವಾದಿಪಾಳ್ಯ ವಾರ್ಡ್‌ಗಳ ಕಂಟೈನ್‌ಮೆಂಟ್‌ ಪ್ರದೇಶಗಳ ಅವಧಿ ಬುಧವಾರಕ್ಕೆ ಕೊನೆಗೊಳ್ಳಲಿದೆ. ಹೊಸ ಪ್ರಕರಣಗಳು ಕಾಣಿಸಿಕೊಳ್ಳದಿದ್ದರೆ ಈ ವಾರ್ಡ್‌ಗಳು ಗುರುವಾರದಿಂದ ಕಂಟೈನ್‌ಮೆಂಟ್‌ ಪ್ರದೇಶಮುಕ್ತವಾಗಲಿವೆ.

‘ಹೊರಜಿಲ್ಲೆಗಳಿಂದ ಬರುವವರಿಗೆ ಕ್ವಾರಂಟೈನ್‌ ಇಲ್ಲ’

‘ರಾಜ್ಯದಲ್ಲಿ ಜಿಲ್ಲೆಗಳ ನಡುವೆ ಓಡಾಡಿದರೆ ಕಡ್ಡಾಯ ಪ್ರತ್ಯೇಕ ವಾಸದ ನಿಯಮ ಅನ್ವಯಿಸುವುದಿಲ್ಲ. ಹೊರ ಜಿಲ್ಲೆಗಳಿಂದ ನಗರಕ್ಕೆ ಬರುವವರಿಗೆ ಪ್ರತ್ಯೇಕವಾಸದ (ಕ್ವಾರಂಟೈನ್‌) ಅಗತ್ಯ ಇಲ್ಲ. ಬೇರೆ ರಾಜ್ಯಗಳಿಂದ ನಗರಕ್ಕೆ ಬರುವ ಪ್ರಯಾಣಿಕರಿಗೆ 14 ದಿನಗಳ ಸಾಂಸ್ಥಿಕ ಪ್ರತ್ಯೇಕ ವಾಸ ಕಡ್ಡಾಯ’ ಎಂದು ಅನಿಲ್‌ ಕುಮಾರ್‌ ತಿಳಿಸಿದರು.

ಇಂದಿನಿಂದ ವ್ಯಾಪಕ ಆರೋಗ್ಯ ತಪಾಸಣೆ

ಕಂಟೈನ್‌ಮೆಂಟ್‌ ವಲಯದಲ್ಲಿರುವ ಪಾದರಾಯನಪುರ ವಾರ್ಡ್‌ನಲ್ಲಿ ಕೋವಿಡ್‌ 19 ಸೋಂಕಿನ 49 ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ವಾರ್ಡ್‌ನಲ್ಲಿ ಬುಧವಾರದಿಂದ ವ್ಯಾಪಕವಾಗಿ ಆರೋಗ್ಯ ಪರೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.

‘ಈ ವಾರ್ಡ್‌ನ ಯಾವ ರಸ್ತೆಗಳಲ್ಲಿನ ಮನೆಗಳಲ್ಲಿ ಕೋವಿಡ್‌ 19 ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಗುರುತಿಸಲು ಅಲ್ಲಿನ ಎಲ್ಲ ನಿವಾಸಿಗಳ ಗಂಟಲದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಿದ್ದೇವೆ. ಸೋಮವಾರದಿಂದಲೇ ಈ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ಗಂಟಲದ್ರವ ಸಂಗ್ರಹಿಸುವ ಕಿಯೋಸ್ಕ್‌ಗಳನ್ನು ಬೇರೆ ಕಡೆಗಳಿಂದ ತರಿಸಿಕೊಳ್ಳುವಾಗ ವಿಳಂಬವಾಯಿತು. ಬುಧವಾರದಿಂದ ಈ ಪ್ರಕ್ರಿಯೆ ಪ್ರಾರಂಭ ಮಾಡಲಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.

‘ಈ ವಾರ್ಡ್‌ನಲ್ಲಿ ವ್ಯಾಪಕ ಆರೋಗ್ಯ ತಪಾಸಣೆ ನಡೆಸಲು ಸರ್ಕಾರ ಅನುಮತಿ ನೀಡಿದೆ. ಸರ್ಕಾರ ಸೂಚಿಸಿರುವ ವಿಧಾನದಲ್ಲಿ ಗಂಟಲದ್ರವ ಸಂಗ್ರಹಿಸಿ ಸಂಬಂಧಪಟ್ಟ ಪ್ರಯೋಗಾಲಯಗಳಿಗೆ ಕಳುಹಿಸುತ್ತೇವೆ. ಇದಕ್ಕೆ ಬೇಕಾದ ಕಿಟ್‌ಗಳನ್ನು ಸರ್ಕಾರವೇ ಪೂರೈಸಿದೆ’ ಎಂದರು.

’ರಾಯಪುರ ವಾರ್ಡ್‌ನಲ್ಲಿರುವ ಜೆಜೆಆರ್‌ ಜನರಲ್‌ ಆಸ್ಪತ್ರೆಯಲ್ಲಿ ಗಂಟಲದ್ರವ ಸಂಗ್ರಹಿಸುವ ಕೇಂದ್ರ
ಆರಂಭಿಸಲಾಗುತ್ತಿದೆ. ಪಾದರಾಯನಪುರದ ನಿವಾಸಿಗಳನ್ನು ಅಲ್ಲಿಗೆ ಕರೆದೊಯ್ದು ಮಾದರಿ ಸಂಗ್ರಹಿಸುತ್ತೇವೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಎಚ್‌.ವಿಜಯೇಂದ್ರ ತಿಳಿಸಿದರು.

‘ಮೊದಲ ದಿನ 25 ಮಂದಿಯ ಗಂಟಲದ್ರವವನ್ನು ಮಾತ್ರ ಸಂಗ್ರಹಿಸುತ್ತೇವೆ. ಕ್ರಮೇಣ ಈ ಸಂಖ್ಯೆಯನ್ನು ಹೆಚ್ಚಿಸುತ್ತೇವೆ. ಗಂಟಲದ್ರವ ಪರೀಕ್ಷೆ ವೇಳೆ ಅನೇಕ ವಿಧಾನಗಳನ್ನು ಅನುಸರಿಸಬೆಕಾಗುತ್ತದೆ. ಹಾಗಾಗಿ ಹೆಚ್ಚು ಮಂದಿಯ ಮಾದರಿ ಸಂಗ್ರಹ ಕಷ್ಟ ಸಾಧ್ಯ. ಅಗತ್ಯ ಬಿದ್ದರೆ ಗಂಟಲ ದ್ರವದ ಮಾದರಿ ಸಂಗ್ರಹಕ್ಕೆ ಹೆಚ್ಚುವರಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅಂಕಿ ಅಂಶ

182:ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ ಪತ್ತೆಯಾದ ಕೋವಿಡ್‌ 19 ಪ್ರಕರಣಗಳು

88:ಚಿಕಿತ್ಸೆ ಬಳಿಕ ಗುಣಮುಖರಾದವರು

90:ಚಿಕಿತ್ಸೆ ಪಡೆಯುತ್ತಿರುವವರು

08:ಕೋವಿಡ್‌ 19 ಕಾಣಿಸಿಕೊಂಡ ಬಳಿಕ ಮೃತಪಟ್ಟವರು

12,629:ಬಿಬಿಎಂಪಿ ವ್ಯಾಪ್ತಿಯಲ್ಲಿ ಗಂಟಲ ದ್ರವ ಪರೀಕ್ಷೆಗೆ ಒಳಪಟ್ಟವರು

50:ಕೋವಿಡ್‌ 19 ಪ್ರಕರಣಗಳು ಕಾಣಿಸಿಕೊಂಡ ವಾರ್ಡ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT