ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸಕ್ಕೆ ಬರುವಂತೆ ಒತ್ತಾಯ: ಉಪನ್ಯಾಸಕರ ಆರೋಪ

‘ಕರ್ತವ್ಯಕ್ಕೆ ಹಾಜರಾಗುವಂತೆ ಬಲವಂತ’
Last Updated 17 ಜುಲೈ 2020, 9:57 IST
ಅಕ್ಷರ ಗಾತ್ರ

ಬೆಂಗಳೂರು:ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಕಾಲೇಜುಗಳಿಗೆ ಜುಲೈ 31ರವರೆಗೆ ರಜೆ ಘೋಷಿಸುವಂತೆ ಸೂಚಿಸಿದೆ. ಕಾಲೇಜು ಶಿಕ್ಷಣ ಇಲಾಖೆ ಕೂಡ ತನ್ನ ವ್ಯಾಪ್ತಿಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ಆದರೂ, ಕೆಲವು ಅನುದಾನಿತ ಮತ್ತು ಖಾಸಗಿ ಕಾಲೇಜುಗಳು ಕೆಲಸಕ್ಕೆ ಬರುವಂತೆ ಒತ್ತಾಯ ಮಾಡುತ್ತಿವೆ ಎಂದು ಉಪನ್ಯಾಸಕರು ಆರೋಪಿಸಿದ್ದಾರೆ.

‘ಬಹುತೇಕ ಶಾಲಾ–ಕಾಲೇಜುಗಳ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿಯೂ ಕರ್ತವ್ಯಕ್ಕೆ ಹಾಜರಾಗುವಂತೆ ಬಲವಂತ ಮಾಡುತ್ತಿವೆ’ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಪಿ. ಕರಬಸಪ್ಪ ದೂರಿದರು.

‘ಕೊರೊನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಬೋಧನಾ ಕಾರ್ಯವೂ ಇರದ ಈ ಸಂದರ್ಭದಲ್ಲಿ ಶಿಕ್ಷಕರು, ಉಪನ್ಯಾಸಕರಿಗೆ ಕೆಲಸಕ್ಕೆ ಬರುವಂತೆ ಸೂಚಿಸುವುದು ಸರಿಯಲ್ಲ’ ಎಂದು ಅವರು ಹೇಳಿದರು.

‘ಕೋವಿಡ್‌ ಕರ್ತವ್ಯಕ್ಕೆ 50 ವರ್ಷಕ್ಕಿಂತ ಮೇಲ್ಪಟ್ಟವರನ್ನು ಕರೆಯುವುದಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೂ, 54ರಿಂದ 55 ವರ್ಷದವರನ್ನೂ ಈ ಕಾರ್ಯಕ್ಕೆ ನಿಯೋಜಿಸಲಾಗಿದೆ’ ಎಂದು ಅವರು ಆರೋಪಿಸಿದರು.

‘ಜುಲೈ 30ರವರೆಗೆ ಶಾಲಾ–ಕಾಲೇಜು ರಜೆ ಎಂದರೆ ಅದು ವಿದ್ಯಾರ್ಥಿಗಳಿಗೆ ಮಾತ್ರ. ಈಗ ದಾಖಲಾತಿ ಪ್ರಕ್ರಿಯೆ ಮತ್ತಿತರ ಆಡಳಿತಾತ್ಮಕ ಕಾರ್ಯಗಳಿರುವುದರಿಂದ ಉಪನ್ಯಾಸಕರು ಕೆಲಸಕ್ಕೆ ಹಾಜರಾಗಬೇಕಾಗುತ್ತದೆ’ ಎಂದುಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರಿ, ಅನುದಾನಿತ ಕಾಲೇಜುಗಳಿಗೆ ಜುಲೈ 15ರವರೆಗೆ ನಾವೂ ರಜೆ ಘೋಷಿಸಿದ್ದೆವು. ಈಗ ಕರ್ತವ್ಯಕ್ಕೆ ಬರಬೇಕು. ಕೋವಿಡ್‌ ಕಾರ್ಯಕ್ಕೂ ಉಪನ್ಯಾಸಕರನ್ನು ನಿಯೋಜಿಸಲಾಗುತ್ತಿದೆ’ ಎಂದು ಅವರು ಹೇಳಿದರು.

‘50 ವರ್ಷಕ್ಕಿಂತ ಮೇಲ್ಪಟ್ಟವರನ್ನು ಕೋವಿಡ್‌ ಕಾರ್ಯಕ್ಕೆ ನಿಯೋಜಿಸಬಾರದು ಎಂದು ಸೂಚನೆ ಕೊಟ್ಟಿದ್ದೇವೆ. 50 ವರ್ಷಕ್ಕಿಂತ ಮೇಲ್ಪಟ್ಟವರ ಹೆಸರನ್ನು ತೆಗೆದುಹಾಕಿ ಪಟ್ಟಿ ಕಳುಹಿಸಲಾಗಿತ್ತು. ಆದರೆ, ಹೊಸ ಪಟ್ಟಿ ಬದಲು, ಹಳೆಯ ಪಟ್ಟಿಯನ್ನು ಬಳಸಿಕೊಂಡಿರುವುದರಿಂದ ಎಲ್ಲರನ್ನೂ ಕರ್ತವ್ಯಕ್ಕೆ ಬರಲು ಹೇಳಿರಬಹುದು. ಬಿಬಿಎಂಪಿಗೆ ಈ ಬಗ್ಗೆ ತಿಳಿಸಿದ್ದೇವೆ. 50 ವರ್ಷ ಮೇಲ್ಪಟ್ಟವರಿಗೆ ಈ ಕಾರ್ಯಕ್ಕೆ ನಿಯೋಜಿಸುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT