ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲಂಬಿಯಾ ಗ್ಯಾಂಗ್ ಸೆರೆ; ₹ 2.50 ಕೋಟಿ ಮೌಲ್ಯದ ಚಿನ್ನ ವಶ

ಈಶಾನ್ಯ ವಿಭಾಗ ಪೊಲೀಸರ ಕಾರ್ಯಾಚರಣೆ * 31 ಕಡೆಗಳಲ್ಲಿ ಕಳವು ಮಾಡಿದ್ದ ಆರೋಪಿಗಳು
Last Updated 30 ಜುಲೈ 2020, 20:17 IST
ಅಕ್ಷರ ಗಾತ್ರ

ಬೆಂಗಳೂರು: ವಾಕಿಟಾಕಿ ಹಿಡಿದು ಪರಸ್ಪರ ಸಂಪರ್ಕ ಸಾಧಿಸಿ ಆಧುನಿಕ ಉಪಕರಣ ಬಳಸಿ ಮನೆಗಳಲ್ಲಿ ಕಳವು ಮಾಡುತ್ತಿದ್ದ ಕೊಲಂಬಿಯಾ ಗ್ಯಾಂಗ್ ಈಶಾನ್ಯ ವಿಭಾಗದ ಪೊಲೀಸರ ಬಲೆಗೆ ಬಿದ್ದಿದೆ. ಗ್ಯಾಂಗ್‌ನ ಮೂವರು ಆರೋಪಿಗಳಿಂದ ₹ 2.50 ಕೋಟಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಕೊಲಂಬಿಯಾ ಪ್ರಜೆಗಳಾದ ವಿಲಿಯನ್ ಪಡಿಲ್ಲಾ ಮಾರ್ಟಿನೆಜ್ (48), ಸ್ಟೆಫನಿಯಾ ಮುನೋಜ್ ಮೋನ್‍ಸಾಲ್ವೆ (23) ಮತ್ತು ಕ್ರಿಶ್ಚಿಯನ್ ಇನೀಸ್ ಒಲಾರ್ತೊ (34) ಬಂಧಿತರು. ಈಶಾನ್ಯ ವಿಭಾಗದ ಠಾಣೆಗಳ ವ್ಯಾಪ್ತಿಯ 31 ಮನೆಗಳಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು. ಅವರಿಂದ ₹ 2.50 ಕೋಟಿ ಮೌಲ್ಯದ 6 ಕೆ.ಜಿ ಚಿನ್ನಾಭರಣ, 9 ಎಂಎಂ ಪಿಸ್ತೂಲ್, 2 ಬೈಕ್, 1 ನಕಲಿ ವೀಸಾ ಹಾಗೂ ಅಂತರರಾಷ್ಟ್ರೀಯ ನಕಲಿ ವಾಹನ ಚಾಲನಾ ಪರವಾನಗಿ ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರವಾಸಿ ವೀಸಾದಡಿ ನಗರಕ್ಕೆ ಬಂದಿದ್ದ ಆರೋಪಿಗಳು, ಸೈಕಲ್‌ನಲ್ಲಿ ಓಡಾಡಿ ಶ್ರೀಮಂತರ ಮನೆಗಳನ್ನು ಗುರುತಿಸುತ್ತಿದ್ದರು. ಸಿನಿಮೀಯ ರೀತಿಯಲ್ಲಿ ಮನೆಗಳಲ್ಲಿ ಕಳವು ಮಾಡಿ ಪರಾರಿಯಾಗುತ್ತಿದ್ದರು. ಗ್ಯಾಂಗ್‌ನ ಪ್ರಮುಖ ಆರೋಪಿ ಗುಸ್ತಾವೋ ಅಲಿಯಾಸ್ ಮುಸ್ತಾಫನ್ ಮತ್ತು ಕಿಂಬರ್ಲಿ ಎಂಬ ಮಹಿಳೆ ಸೇರಿ ಮೂವರು ತಲೆಮರೆಸಿಕೊಂಡಿದ್ದಾರೆ’ ಎಂದೂ ಹೇಳಿದರು.

ಮೂರು ವರ್ಷಗಳಿಂದ ಕೃತ್ಯ: ‘ಗ್ಯಾಂಗ್ ಮುಖಂಡನಾದ ಗುಸ್ತಾವೋ, ಮೂರು ವರ್ಷಗಳ ಹಿಂದೆ ದೇಶಕ್ಕೆ ಬಂದಿದ್ದ. ಈತನ ಸಂಪರ್ಕದ ಮೂಲಕ ಇನ್ನುಳಿದ ಮೂವರು ದೇಶಕ್ಕೆ ಬಂದಿದ್ದರು. ಕೊತ್ತನೂರು ಬಳಿ ಅಪಾರ್ಟ್‍ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಬಾಡಿಗೆಗೆ ಇದ್ದರು. ಬೆಳಿಗ್ಗೆ ಮನೆಗಳನ್ನು ಗುರುತಿಸಿ, ರಾತ್ರಿ ಹೊತ್ತಿನಲ್ಲಿ ಕಳವು ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಕಳವು ಮಾಡಬೇಕಿದ್ದ ಮನೆ ಬಳಿ ಆರೋಪಿಗಳು, ಬೈಕ್ ಮತ್ತು ಕಾರಿನಲ್ಲಿ ಹೋಗುತ್ತಿದ್ದರು. ಮೊದಲಿಗೆ ಆರೋಪಿ ಮಹಿಳೆ ಸ್ಟೆಫನಿಯಾ, ಮನೆಗೆ ಹೋಗಿ ಬೆಲ್ ಮಾಡುತ್ತಿದ್ದಳು. ಮನೆಯಲ್ಲಿ ಯಾರು ಇಲ್ಲ ಎಂಬುದು ಖಚಿತವಾದ ಬಳಿಕ ಉಳಿದವರು ಸ್ಥಳಕ್ಕೆ ಬರುತ್ತಿದ್ದರು. ಪರಸ್ಪರ ಮಾತುಕತೆಗೆ ವಾಕಿಟಾಕಿ ಇಟ್ಟುಕೊಳ್ಳುತ್ತಿದ್ದರು’ ಎಂದರು.

‘ಆರೋಪಿಗಳು, ಪಿಪಿಇ ಮಾದರಿ ಬಟ್ಟೆ, ಕೈಗವಸು, ಕ್ಯಾಪ್, ಮಾಸ್ಕ್ ಧರಿಸಿ ಮನೆ ಬಳಿ ಹೋಗುತ್ತಿದ್ದರು. ಮೊಬೈಲ್ ಜಾಮರ್, ಪೆಪ್ಪರ್ ಸ್ಪ್ರೇ, ಡ್ರಿಲ್ ಮಷಿನ್, ಲೇಸರ್ ಕಟ್ಟಿಂಗ್ ಮಷಿನ್ ಸೇರಿದಂತೆ ಹಲವು ಉಪಕರಣಗಳು ಆರೋಪಿಗಳ ಬಳಿ ಸಿಕ್ಕಿವೆ’ ಎಂದರು.

‘2018ರಲ್ಲಿ ಜಯನಗರ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಆರೋಪಿಗಳು, ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಜೈಲಿಗೆ ಹೋಗಿದ್ದ ಆರೋಪಿಗಳು, ಜಾಮೀನು ಮೇಲೆ ಹೊರಬಂದಿದ್ದರು. ಮಾನ್ಯತಾ ಟೆಕ್‍ಪಾರ್ಕ್ ನ ನಟ ಶಿವರಾಜ್ ಕುಮಾರ್ ಅವರ ಪಕ್ಕದ ಮನೆಯಲ್ಲಿ 2019ರ ಅಕ್ಟೋಬರ್‌ನಲ್ಲಿ ಕಳ್ಳತನವಾಗಿತ್ತು. ತನಿಖೆ ಕೈಗೊಂಡಾಗಕೊಲಂಬಿಯಾ ಗ್ಯಾಂಗ್‌ ಕೈವಾಡವಿರುವುದು ಖಾತ್ರಿಯಾಯಿತು. ಆರೋಪಿಗಳನ್ನು ಕೊತ್ತನೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು’ ಎಂದರು.

‘ಯಲಹಂಕ ಉಪನಗರದ ಯೂಕೊ ಬ್ಯಾಂಕ್‌ನಲ್ಲಿ ಕಳವು ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಅದು ಸಾಧ್ಯವಾಗದಿದ್ದರಿಂದ, ಬ್ಯಾಂಕ್‌ ಪಕ್ಕದ ಮನೆಯಲ್ಲಿ ಕಳವು ಮಾಡಿದ್ದರು’ ಎಂದೂ ತಿಳಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಮನೆಯಲ್ಲೂ ಕಳವು

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಕೌಶಿಕ್ ಮುಖರ್ಜಿ ಅವರಎಚ್‌ಎಸ್‌ಆರ್ ಲೇಔಟ್ 6ನೇ ಹಂತದಲ್ಲಿರುವ ಮನೆಯಲ್ಲೂ 2018ರ ಜೂನ್‌ನಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು. ಅದಾದ ನಂತರ ಜಯನಗರ, ತಿಲಕ್‌ನಗರ ಹಾಗೂ ಬಾಣಸವಾಡಿಯ ಮೂರು ಮನೆಗಳಲ್ಲೂ ಕಳವು ಮಾಡಿದ್ದರು. ದಕ್ಷಿಣ ವಿಭಾಗದ ಅಂದಿನ ಡಿಸಿಪಿ ಎಸ್‌.ಡಿ.ಶರಣಪ್ಪ ಅವರು ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT