ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಕಟ್ಟಡದ ಪಾರ್ಕಿಂಗ್‌ ಜಾಗವೂ ಲಾಭಕ್ಕಾಗಿ ಬಳಕೆ!

ಗ್ರಾಹಕರ ವಾಹನ ವಾಹನ ನಿಲುಗಡೆಗೂ ಕೊಡಬೇಕಾಗಬಹುದು ಶುಲ್ಕ
Last Updated 14 ಫೆಬ್ರುವರಿ 2021, 20:27 IST
ಅಕ್ಷರ ಗಾತ್ರ

ಬೆಂಗಳೂರು: ವಸತಿ ‍ಪ್ರದೇಶದಲ್ಲಿ ರಸ್ತೆಯಲ್ಲಿ ವಾಹನಗಳ ನಿಲ್ಲಿಸುವವರಿಂದ ಶುಲ್ಕ ಸಂಗ್ರಹಿಸುವ ಬಗ್ಗೆ ಸಮಗ್ರವಾಗಿ ಚರ್ಚಿಸುವ ‘ಪಾರ್ಕಿಂಗ್ ನೀತಿ 2.0’ ವಾಣಿಜ್ಯ ಕಟ್ಟಡಗಳಲ್ಲಿ ತಳ ಮಹಡಿಯನ್ನು ವಾಹನ ನಿಲುಗಡೆಗೆ ಕಡ್ಡಾಯವಾಗಿ ಮೀಸಲಿಡುವ ನಿಯಮ ಉಲ್ಲಂಘನೆಯನ್ನು ಮಟ್ಟಹಾಕುವ ಬಗ್ಗೆ ಮೌನ ವಹಿಸುತ್ತದೆ. ಅದರ ಬದಲು ಅದನ್ನೂ ವಾಣಿಜ್ಯ ಉದ್ದೇಶಕ್ಕೆ ಬಳಸುವುದಕ್ಕೆ ಉತ್ತೇಜನ ನೀಡುತ್ತದೆ.

ನಗರ ಮಹಾಯೋಜನೆಯ ವಲಯ ನಿಬಂಧನೆಗಳನ್ನು ಉಲ್ಲಂಘಿಸುವ ವಸತಿ ಕಟ್ಟಡಗಳ ಮಾಲೀಕರಿಗೆ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಲು ಪರವಾನಗಿ ನೀಡಬಾರದು ಎಂದು ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌) ಅಂತಿಮಗೊಳಿಸಿರುವ ನೀತಿಯಲ್ಲೇ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ವಾಣಿಜ್ಯ ಕಟ್ಟಡಗಳು ವಲಯ ನಿಬಂಧ ಉಲ್ಲಂಘನೆಗೆ ಮಾಡಿದರೆ, ನಿಯಮಬದ್ಧವಾಗಿ ಪಾರ್ಕಿಂಗ್‌ಗೆ ಬಿಟ್ಟುಕೊಡಬೇಕಾದ ಜಾಗವನ್ನು ಅನ್ಯ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿದ್ದರೆ ಅದಕ್ಕೆ ಹೇಗೆ ಕಡಿವಾಣ ಹಾಕಬೇಕು ಎಂಬ ಬಗ್ಗೆ ನೀತಿ ಎಲ್ಲೂ ಸೊಲ್ಲೆತ್ತುವುದೇ ಇಲ್ಲ. ಅದರ ಬದಲು ವಾಣಿಜ್ಯ ಕಟ್ಟಡದಲ್ಲಿ ಪಾರ್ಕಿಂಗ್‌ ಕಾಯ್ದಿರಿಸಿದ ಜಾಗವು ಆ ಉದ್ದೇಶಕ್ಕೆ ಸಂಪೂರ್ಣವಾಗಿ ಬಳಕೆ ಆಗದಿದ್ದರೆ, ಆ ಪಾರ್ಕಿಂಗ್‌ ನಿರ್ವಹಣೆ ಮಾಡುವ ಸ್ಥಳವನ್ನು ಏಜೆನ್ಸಿಗೆ ವಹಿಸಬಹುದು.

ಆ ಜಾಗಕ್ಕೆ ಶುಲ್ಕ ನಿಗದಿಪಡಿಸಿ ಇತರ ಕಟ್ಟಡಗಳ ಗ್ರಾಹಕರ ವಾಹನ ನಿಲುಗಡೆಗೆ ಬಳಸುವುದಕ್ಕೆ ಅವಕಾಶ ಕಲ್ಪಿಸಬಹುದು. ಇಂತಹ ಪಾರ್ಕಿಂಗ್‌ ಜಾಗಗಳ ಬಗ್ಗೆ ಬಿಬಿಎಂಪಿಯ ಪಾರ್ಕಿಂಗ್‌ ಪೋರ್ಟಲ್‌ನಲ್ಲಿ ಮಾಹಿತಿ ಹಂಚಿಕೊಳ್ಳಬಹುದು ಎಂದು ನೀತಿಯಲ್ಲಿ ಸಲಹೆ ನೀಡಲಾಗಿದೆ. ಕಾನೂನು ಬದ್ಧವಾಗಿ ಗ್ರಾಹಕರ ವಾಹನಗಳ ಉಚಿತ ಪಾರ್ಕಿಂಗ್‌ಗೆ ನೀಡಬೇಕಾದ ಜಾಗಗಳನ್ನೂ ವ್ಯಾಪಾರಿ ಉದ್ದೇಶಕ್ಕೆ ಬಳಸಿ ಗ್ರಾಹಕರ ಸುಲಿಗೆಗೆ ಬಳಸಬಹುದು ಎಂಬುದು ಇದರ ತಾತ್ಪರ್ಯವಲ್ಲವೇ ಎಂದು ಪ್ರಶ್ನಿಸುತ್ತಾರೆ ನಾಗರಿಕರು.

ರಸ್ತೆಯನ್ನು ವಾಹನ ನಿಲುಗಡೆಗೆ ಬಳಸುವುದಕ್ಕೆ ಉತ್ತೇಜನ ನೀಡಬಾರದು. ಇದನ್ನು ಜಾರಿಗೊಳಿಸಲು ಪ್ರತ್ಯೇಕವಾಗಿ ಪಾರ್ಕಿಂಗ್‌ ತಾಣಗಳನ್ನು (ಬಹು ಅಂತಸ್ತುಗಳ ಪಾರ್ಕಿಂಗ್‌ ತಾಣ) ಅಭಿವೃದ್ಧಿಪಡಿಸಬೇಕು ಹಾಗೂ ರಸ್ತೆಯಲ್ಲಿ ವಾಹನ ನಿಲ್ಲಿಸುವುದಕ್ಕೆ ವಿಧಿಸುವ ಶುಲ್ಕವು ಪ್ರತ್ಯೇಕ ಪಾರ್ಕಿಂಗ್‌ ತಾಣಗಳಲ್ಲಿ ವಿಧಿಸುವ ಶುಲ್ಕಕ್ಕಿಂತ ದುಬಾರಿ ಆಗಿರಬೇಕು. ರಸ್ತೆಯಲ್ಲಿ ವಾಹನ ನಿಲ್ಲಿಸುವುದಕ್ಕೆ ದುಬಾರಿ ಶುಲ್ಕ ವಿಧಿಸಿದರೆ ವಲಯ ನಿಬಂಧನೆಗಳ ಪ್ರಕಾರ ಪಾರ್ಕಿಂಗ್‌ಗೆ ಕಾಯ್ದಿರಿಸಿದ ಜಾಗವು ಅದೇ ಉದ್ದೇಶಕ್ಕೆ ಬಳಸುವುದಕ್ಕೆ ಒತ್ತಡ ಸೃಷ್ಟಿಯಾಗುತ್ತದೆ. ರಸ್ತೆಯಲ್ಲಿ ವಾಹನ ನಿಲುಗಡೆಗೆ ಶುಲ್ಕ ವಿಧಿಸಿದರೆ ಪಾರ್ಕಿಂಗ್‌ಗೆ ಮೀಸಲಿಟ್ಟ ಜಾಗವನ್ನು ಅದೇ ಉದ್ದೇಶಕ್ಕೆ ಬಳಸುವ ಬಗ್ಗೆ ತಂತ್ರಜ್ಞಾನದ ಮೊರೆ ಹೋಗುವುದಕ್ಕೆ ಉತ್ತೇಜನ ಸಿಗುತ್ತದೆ ಎಂದು ಹೊಸ ನೀತಿಯು ತರ್ಕಿಸುತ್ತದೆ!

ಪಾರ್ಕಿಂಗ್‌ ನೀತಿಯ ಈ ಅಂಶದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ‘ಸಿಟಿಜನ್ಸ್‌ ಆ್ಯಕ್ಷನ್‌ ಫೋರಮ್‌’ನ ಡಿ.ಎಸ್‌.ರಾಜಶೇಖರ್‌, ‘ನಗರ ಮಹಾಯೋಜನೆ ಪ್ರಕಾರ ಪ್ರತಿಯೊಂದು ವಾಣಿಜ್ಯ ಕಟ್ಟಡದಲ್ಲಿ ಪಾರ್ಕಿಂಗ್‌ಗೆ ಸ್ಥಳಾವಕಾಶ ಕಲ್ಪಿಸುವುದು ಕಡ್ಡಾಯ. ಆದರೆ, ನಗರದಾದ್ಯಂತ ಹೆಚ್ಚಿನ ವಾಣಿಜ್ಯ ಮಳಿಗೆಗಳು ವಾಸ್ತವದಲ್ಲಿ ವಾಹನ ಪಾರ್ಕಿಂಗ್‌ ಜಾಗವನ್ನೇ ಕಾಯ್ದಿರಿಸಿಲ್ಲ. ಇದನ್ನು ಪರಿಣಾಮಕಾರಿ ಜಾರಿಗೆ ತರುವ ಬಗ್ಗೆ ಪಾರ್ಕಿಂಗ್‌ ನೀತಿಯಲ್ಲೇ ಉಲ್ಲೇಖಿಸುವುದನ್ನು ಬಿಟ್ಟು, ಅವುಗಳನ್ನೂ ವ್ಯಾಪಾರಿ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸಿದರೆ ಹೇಗೆ’ ಎಂದು ಪ್ರಶ್ನಿಸಿದರು.

‘ವಸತಿ ಪ್ರದೇಶದಲ್ಲಿ ರಸ್ತೆಗಳಲ್ಲಿ ಕಾರು ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗುವುದಕ್ಕೂ ಪರೋಕ್ಷವಾಗಿ ಬಿಬಿಎಂಪಿ ಅಧಿಕಾರಿಗಳೇ ಕಾರಣ. ಮಂಜೂರಾತಿ ಪಡೆದ ನಕ್ಷೆಯ ಪ್ರಕಾರವೇ ಕಟ್ಟಡ ನಿರ್ಮಾಣವಾಗುವಂತೆ ನೋಡಿಕೊಂಡರೆ, ಅರ್ಧದಷ್ಟು ಸಮಸ್ಯೆ ಬಗೆಹರಿಯುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಪಾರ್ಕಿಂಗ್‌ ಅಧ್ವಾನ– ಅಧಿಕಾರಿಗಳೇಕೆ ಪರಿಶೀಲಿಸಿಲ್ಲ’
‘ವಾಣಿಜ್ಯ ಕಟ್ಟಡ ಯೋಜನೆಗೆ ಮಂಜೂರಾತಿ ನೀಡುವಾಗ ಅದರಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆಯೋ ಇಲ್ಲವೋ ಎಂಬುದನ್ನು ಬಿಬಿಎಂಪಿ ಅಧಿಕಾರಿಗಳು ಏಕೆ ಪರಿಶೀಲಿಸಿಲ್ಲ. ಕನಿಷ್ಠಪಕ್ಷ ಕಟ್ಟಡಕ್ಕೆ ಪ್ರಾರಂಭಿಕ ಪ್ರಮಾಣಪತ್ರ ಹಾಗೂ ಸ್ವಾಧೀನಾನುಭವ ಪ್ರಮಾಣಪತ್ರ ನೀಡುವಾಗಲಾದರೂ ಈ ಬಗ್ಗೆ ಪರಿಶೀಲಿಸಬಹುದಿತ್ತು. ಬಿಬಿಎಂಪಿ ಅಧಿಕಾರಿಗಳು ಮನಸ್ಸು ಮಾಡಿದರೆ ಕಟ್ಟಡ ಯೋಜನೆಯಲ್ಲಿ ನಿಗದಿ ಪಡಿಸಿರುವಂತೆ ಪಾರ್ಕಿಂಗ್‌ಗೆ ಸ್ಥಳಾವಕಾಶ ಕಲ್ಪಿಸದೇ ಇದ್ದರೆ ಈಗಲೂ ಅಂತಹ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬಹುದು. ಪಾರ್ಕಿಂಗ್‌ ಜಾಗ ಅನ್ಯ ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುತಿದ್ದರೆ, ಅವುಗಳನ್ನು ತೆರವುಗೊಳಿಸಬಹುದು. ಅದು ಬಿಟ್ಟು ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ಸರ್ಕಾರವೇ ಗೋಗರೆಯುವುದರಲ್ಲಿ ಅರ್ಥವಿಲ್ಲ’ ಎಂದು ರಾಜಶೇಖರ್‌ ಅಭಿಪ್ರಾಯಪಟ್ಟರು.

‘ಈಗಲೂ ಯಾವುದೇ ವಾಣಿಜ್ಯ ಸಂಕೀರ್ಣಗಳಿಗೆ ಭೇಟಿ ನೀಡಿ ನೋಡಿ; ಅಲ್ಲಿ ತಳ ಮಹಡಿಯನ್ನೂ ಮಳಿಗೆಗಳನ್ನಾಗಿ ಪರಿವರ್ತಿಸಲಾಗುತ್ತದೆ. ಆಸ್ಪತ್ರೆ ಕಟ್ಟಡಗಳ ತಳಮಹಡಿಯನ್ನು ಆಕ್ಸಿಜನ್‌ ಸಿಲಿಂಡರ್‌ ಹಾಗೂ ಬಳಕೆಯಾಗದ ವಸ್ತುಗಳನ್ನು ಸಂಗ್ರಹಿಸುವ ಗೋದಾಮುಗಳನ್ನಾಗಿ ಮಾಡಿಕೊಂಡಿರುತ್ತಾರೆ. ಇಂತಹ ಉಲ್ಲಂಘನೆಗಳು ಕಣ್ಣಿಗೆ ರಾಚುವಂತಿವೆ. ಅವುಗಳ ಬಗ್ಗೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಸರ್ಕಾರ ಪಾರ್ಕಿಂಗ್‌ಗೂ ಪರ್ಮಿಟ್‌ರಾಜ್‌ ವ್ಯವಸ್ಥೆ ರೂಪಿಸಲು ಉತ್ಸುಕವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT