ಬೆಂಗಳೂರು: ಐಬಿಎಂ, ಮೈಕ್ರೊಸಾಫ್ಟ್, ವೊಲ್ವೊ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಆಕಾಂಕ್ಷಿಗಳಿಂದ ಹಣ ಪಡೆದು ವಂಚಿಸಿದ್ದ ಆರೋಪದಡಿ ಶ್ರೀನಿವಾಸ್ ರಾಘವನ್ ಅಯ್ಯಂಗಾರ್ (55) ಎಂಬಾತನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.
‘ಬಸವನಗುಡಿ ಆರ್ಮುಗಂ ವೃತ್ತದ ಶ್ರೀನಿವಾಸ್, ‘ವಿಆರ್‌ಆರ್ ವೆಂಚರ್ಸ್’ ಕಂಪನಿ ಸ್ಥಾಪಿಸಿ ಆಕಾಂಕ್ಷಿಗಳನ್ನು ಸಂಪರ್ಕಿಸಿ ವಂಚನೆ ಮಾಡುತ್ತಿದ್ದ. ಆತನಿಗೆ ಹಣ ಕೊಟ್ಟು ವಂಚನೆಗೀಡಾಗಿದ್ದ ವಿದ್ಯಾರಣ್ಯಪುರದ ಡಿ.ವಿ. ಅರುಣಾ ದೂರು ನೀಡಿದ್ದರು. ಅದರನ್ವಯ ಶ್ರೀನಿವಾಸ್‌ನನ್ನು ಸೆರೆ ಹಿಡಿಯಲಾಗಿದೆ. ಮೈಕ್ರೊಸಾಫ್ಟ್ ಕಂಪನಿ ಉದ್ಯೋಗಿ ನಕಲಿ ಗುರುತಿನ ಚೀಟಿ ಹಾಗೂ ಪರಿಚಯ ಚೀಟಿ ಆರೋಪಿ ಬಳಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಬಿಟ್ಟಿದ್ದ ಆರೋಪಿ, ವಿಆರ್‌ಆರ್ ವೆಂಚರ್ಸ್ ಕಂಪನಿ ತೆರೆದಿದ್ದ. ಪರಿಚಯಸ್ಥರಾದ ರಾಮಕೃಷ್ಣ, ಸಂತೋಷ್ ಕುಮಾರ್ ಮತ್ತು ರಾಜೀವ್ ರಾವ್ ಎಂಬುವರನ್ನು ನಿರ್ದೇಶಕರನ್ನಾಗಿ ಮಾಡಿಕೊಂಡಿದ್ದ. ಅಂತರರಾಷ್ಟ್ರೀಯ ಕಂಪನಿಗಳಿಗೆ ಮಾನವ ಸಂಪನ್ಮೂಲ ಒದಗಿಸುವ ಕಂಪನಿ ತನ್ನದೆಂದು ಹೇಳುತ್ತಿದ್ದ ಆರೋಪಿ, ಜಾಹೀರಾತುಗಳನ್ನು ನೀಡಿ ಆಕಾಂಕ್ಷಿಗಳನ್ನು ಸಂಪರ್ಕಿಸುತ್ತಿದ್ದ’ ಎಂದೂ ತಿಳಿಸಿದರು.
ನಕಲಿ ಇ–ಮೇಲ್ ಐಡಿ ಸೃಷ್ಟಿ: ‘ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಇ–ಮೇಲ್ ಐಡಿ ಸೃಷ್ಟಿಸುತ್ತಿದ್ದ ಆರೋಪಿ, ಅವುಗಳ ಮೂಲಕ ಆಕಾಂಕ್ಷಿಗಳನ್ನು ಸಂಪರ್ಕಿಸುತ್ತಿದ್ದ. ನಕಲಿ ಉದ್ಯೋಗ ಆಹ್ವಾನ ಪತ್ರಿಕೆ, ನೇಮಕಾತಿ ಆದೇಶ, ಗುರುತಿನ ಚೀಟಿಗಳನ್ನು ಮೇಲ್ ಮೂಲಕ ಕಳುಹಿಸುತ್ತಿದ್ದ’ ಎಂದೂ ಪೊಲೀಸರು ಹೇಳಿದರು.
‘ಸಂದರ್ಶನ, ವೀಸಾ ಹಾಗೂ ವಿವಿಧ ಶುಲ್ಕದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಪಡೆಯುತ್ತಿದ್ದ ಆರೋಪಿ, ಯಾವುದೇ ಉದ್ಯೋಗ ಕೊಡಿಸುತ್ತಿರಲಿಲ್ಲ. ಆ ಬಗ್ಗೆ ಆಕಾಂಕ್ಷಿಗಳು ವಿಚಾರಿಸಿದಾಗಲೂ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದೇ ರೀತಿಯಲ್ಲೇ ಆರೋಪಿ, 40 ಆಕಾಂಕ್ಷಿಗಳಿಂದ ಹಣ ಪಡೆದು ವಂಚಿಸಿರುವ ಮಾಹಿತಿ ಇದೆ’ ಎಂದೂ ತಿಳಿಸಿದರು.
ಕೆನಡಾದಲ್ಲಿ ಉದ್ಯೋಗ ಆಮಿಷ: ‘ದೂರುದಾರರಾದ ಅರುಣಾ ಅವರಿಗೆ ಐಬಿಎಂ ಕೆನಡಾ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಆರೋಪಿ ಹೇಳಿದ್ದ. ಅದನ್ನು ನಂಬಿದ್ದ ಅರುಣಾ, ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ನೀಡಿದ್ದರು’ ಎಂದೂ ಪೊಲೀಸರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.