ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದ್ರಾ, ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು: ಬಿಜೆಪಿ

Last Updated 3 ಫೆಬ್ರುವರಿ 2023, 2:04 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿದ್ದರಾಮ‌ಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 10 ಬೃಹತ್‌ ಹಗರಣಗಳು ನಡೆದಿದ್ದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಸೇರಿದಂತೆ ಮಾಜಿ ಸಚಿವರು, ಐಎಎಸ್‌ ಅಧಿಕಾರಿಗಳ ಮೇಲೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ’ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್‌ ಎನ್‌.ಆರ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ, ನಕಲಿ ದಾಖಲೆ, ಸರ್ಕಾರಿ ಭೂಮಿ ಕಬಳಿಕೆಗೆ ಸಂಬಂಧಿಸಿದಂತೆ 3,728 ಪುಟಗಳ ದಾಖಲೆ, 62 ಗಂಟೆಗಳ ವಿಡಿಯೊ ತುಣುಕು, 900ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಸಾಕ್ಷಿಯಾಗಿ ಒದಗಿಸಲಾಗಿದೆ’ ಎಂದರು.

‘ಸಿದ್ದರಾಮಯ್ಯ ಅವರ ವಿರುದ್ಧ ಏಳು, ಮಾಜಿ ಸಚಿವ ಕೆ.ಜೆ. ಜಾರ್ಜ್‌ ವಿರುದ್ಧ ನಾಲ್ಕು, ಮಾಜಿ ಸಚಿವರಾದ ಯು.ಟಿ. ಖಾದರ್‌, ಜಮೀರ್‌ ಅಹಮದ್‌, ಕೃಷ್ಣ ಬೈರೇಗೌಡ ಅವರ ವಿರುದ್ಧ ತಲಾ ಎರಡು, ಎಂ.ಬಿ. ಪಾಟೀಲ, ದಿನೇಶ್‌ ಗುಂಡೂರಾವ್‌, ಎಂ. ಕೃಷ್ಣಪ್ಪ, ಎನ್‌.ಎ. ಹ್ಯಾರಿಸ್‌ ವಿರುದ್ಧ ತಲಾ ಒಂದು ದೂರು ದಾಖಲಿಸಲಾಗಿದೆ. ಇದಲ್ಲದೆ, ಒಂಬತ್ತು ಮಂದಿ ಐಎಎಸ್‌ ಹಾಗೂ ಐಎಫ್‌ಎಸ್‌, ಐದು ಕೆಎಎಸ್‌ ಸೇರಿದಂತೆ 21 ಅಧಿಕಾರಿಗಳ ಮೇಲೆ ದೂರು ಸಲ್ಲಿಸಲಾಗಿದೆ’ ಎಂದು ಹೇಳಿದರು.

‘ಕೃಷಿ ಹೊಂಡ, ಇಂದಿರಾ ಕ್ಯಾಂಟೀನ್‌, ಬೆಂಗಳೂರಿನಲ್ಲಿ ಭೂಕಬಳಿಕೆ, ಅಕ್ರಮ ಗುತ್ತಿಗೆ, ಬಸ್‌ ತಂಗುದಾಣ, ಸ್ವಚ್ಛ ಭಾರತ ಅಭಿಯಾನ, ತ್ಯಾಜ್ಯ ವಿಲೇವಾರಿ, ಬೀದಿ ದೀಪ, ಏಡ್ಸ್‌ ನಿಯಂತ್ರಣ ಯೋಜನೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಹಗರಣಗಳ ದಾಖಲೆಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಲಾಗಿದೆ. ಇದಲ್ಲದೆ, ಮುಖ್ಯಮಂತ್ರಿಯವರಿಗೂ ದೂರು ಸಲ್ಲಿಸಲಾಗಿದ್ದು, ಸಿಐಡಿ ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT