ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕಾಮಗಾರಿ ಗಡುವಿನೊಳಗೆ ಪೂರ್ಣಗೊಳಿಸಿ: ಮುಖ್ಯ ಆಯುಕ್ತ ಗೌರವ್ ಗುಪ್ತ

ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಮಗಾರಿಗಳ ಪ್ರಗತಿ ಪರಿಶೀಲನೆ
Last Updated 26 ಅಕ್ಟೋಬರ್ 2021, 19:38 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ, ಡಾಂಬರೀಕರಣ ಹಾಗೂ ಇತರ ಕಾಮಗಾರಿಗಳನ್ನು ಬೆಸ್ಕಾಂ, ಜಲಮಂಡಳಿ, ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಜೊತೆ ಸಮನ್ವಯ ಸಾಧಿಸುವ ಮೂಲಕ ಗಡುವಿನೊಳಗೆ ಪೂರ್ಣಗೊಳಿಸಬೇಕು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಅಧಿಕಾರಿಗಳಿಗೆ ಮಂಗಳವಾರ ಸೂಚಿಸಿದರು.

ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ಬೇರೆ ಬೇರೆ ಕಾಮಗಾರಿಗಳು ನಡೆಯುತ್ತಿರುವಲ್ಲಿ ರಸ್ತೆಗಳು ಹದಗೆಟ್ಟಿವೆ. ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಈ ರಸ್ತೆಗಳನ್ನು ದುರಸ್ತಿಪಡಿಸಬೇಕು’ ಎಂದರು.

ಕುಡಿಯುವ ನೀರು ಹಾಗೂ ಒಳಚರಂಡಿ ಕೊಳವೆ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಿರುವ ಕುರಿತು ಜಲಮಂಡಳಿಯವರು ವಾರ್ಡ್ ವಾರು ನಕ್ಷೆ ಸಮೇತ ಪಾಲಿಕೆಗೆ ವರದಿ ನೀಡಬೇಕು. ಅದರನ್ವಯ ಬಿಬಿಎಂಪಿಯು ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದೆ. ಬಿಬಿಎಂಪಿಗೆ ಮಾಹಿತಿ ನೀಡದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಮನೆ-ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಜಲಮಂಡಳಿ ವೇಗ ನೀಡಬೇಕು. ಬೆಸ್ಕಾಂನವರು 11 ಕೆ.ವಿ ವಿದ್ಯುತ್ ಕೇಬಲ್‌ಗಳನ್ನು ನೆಲದಡಿ ಅಳವಡಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ನಮ್ಮ ಮೆಟ್ರೊ ಮಾರ್ಗದ ಕಾಮಗಾರಿ ನಡೆಯುವಲ್ಲಿ ರಸ್ತೆ ಹಾಳಾಗಿದ್ದು, ಅವುಗಳನ್ನು ಬಿಎಂಆರ್‌ಸಿಎಲ್ ದುರಸ್ತಿ ಪಡಿಸಬೇಕು. ಮಳೆ ಬಂದಾಗ ಕೆಲವೆಡೆ ನೀರು ನಿಲ್ಲುತ್ತಿದೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಶಾಸಕ ಎಂ.ಕೃಷ್ಣಪ್ಪ, ವಲಯ ಆಯುಕ್ತ ಡಾ.ಕೆ.ಹರೀಶ್ ಕುಮಾರ್, ಜಂಟಿ ಆಯುಕ್ತ ರಾಮಕೃಷ್ಣ, ಸೂಪರಿಂಟೆಂಡಿಂಗ್‌ ಎಂಜಿನಿಯರ್ ಶಶಿಕುಮಾರ್, ಬೆಸ್ಕಾಂ, ಜಲಮಂಡಳಿ, ಬಿಎಂಆರ್‌ಸಿಎಲ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.

‘ಒಳಚರಂಡಿ ನೀರು ರಾಜಕಾಲುವೆಗೆ ಬಿಡದಿರಿ’

ಬಿಬಿಎಂಪಿ ವ್ಯಾಪ್ತಿಯಲ್ಲಿರಾಜಕಾಲುವೆಗಳಿಗೆ ಒಳಚರಂಡಿ ನೀರು ಹರಿಯುತ್ತಿರುವುದರಿಂದ ಕೆರೆಗಳು ಕಲುಷಿತಗೊಳ್ಳುತ್ತಿವೆ. ರಾಜಕಾಲುವೆಗಳಿಗೆ ಒಳಚರಂಡಿ ನೀರು ಹರಿಯಬಿಡದಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು. ಬಿಬಿಎಂಪಿ, ಜಲಮಂಡಳಿ ಜಂಟಿಯಾಗಿ ನಗರಾದ್ಯಂತ ಈ ಕುರಿತ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದರು.

ಬನ್ನೇರುಘಟ್ಟ ರಸ್ತೆ ತಪಾಸಣೆ

ಬನ್ನೇರುಘಟ್ಟ ರಸ್ತೆಯಲ್ಲಿ ನೈಸ್ ರಸ್ತೆಯಿಂದ ಮೀನಾಕ್ಷಿ ದೇವಸ್ಥಾನದವರೆಗಿನ ರಸ್ತೆಯನ್ನು (ಗೊಟ್ಟಿಗೆರೆ ರಸ್ತೆ) ಗೌರವ ಗುಪ್ತ ಅವರು ಸ್ಥಳೀಯ ಶಾಸಕ ಎಂ.ಕೃಷ್ಣಪ್ಪ ಜೊತೆ ಪರಿಶೀಲಿಸಿದರು. ಈ ರಸ್ತೆಯ ಡಾಂಬರೀಕರಣವನ್ನು ಶೀಘ್ರವೇ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT