ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್ ಸಿಟಿ: ‘ಮಳೆಗಾಲದ ಒಳಗೆ ಕಾಮಗಾರಿ ಪೂರ್ಣಗೊಳಿಸಿ’

ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲಿಸಿದ ರಾಕೇಶ್ ಸಿಂಗ್
Last Updated 11 ಜೂನ್ 2021, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕು. 27 ರಸ್ತೆ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವುದಕ್ಕೆ ಮುನ್ನವೇ ಪೂರ್ಣಗೊಳಿಸಬೇಕು’ ಎಂದು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಮುಖ್ಯಸ್ಥ ರಾಕೇಶ್ ಸಿಂಗ್ ಅವರು ಗುತ್ತಿಗೆದಾರರಿಗೆ ಸೂಚಿಸಿದರು.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಅವರು ಶುಕ್ರವಾರ ಪರಿಶೀಲಿಸಿದರು.

‘ಕಾಮಗಾರಿ ವೇಳೆ ತೆರವುಗೊಳಿಸಿದ ಮಣ್ಣು ಈಗಲೂ ಕೆಲವೆಡೆ ರಸ್ತೆ ಮೇಲೆಯೇ ಇದೆ. ಇದೇ 14ರಿಂದ ಲಾಕ್‌ಡೌನ್‌ ತೆರವಾಗಲಿದೆ. ಆ ಬಳಿಕ ಸಾರ್ವಜನಿಕರ ಓಡಾಟ ಮತ್ತು ವಾಹನಗಳ ಸಂಚಾರಕ್ಕೆ ಇದರಿಂದ ಅಡ್ಡಿ ಉಂಟಾಗಲಿದೆ. ರಸ್ತೆಯಲ್ಲಿರುವ ಮಣ್ಣು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅಡೆತಡೆ ಉಂಟಾಗದಂತೆ ನೋಡಿಕೊಳ್ಳಬೇಕು. ರಸ್ತೆ ಅಗೆದಿರುವ ಭಾಗಗಳಲ್ಲಿ ಸರಿಯಾಗಿ ಬ್ಯಾರಿಕೇಡ್ ಹಾಕಬೇಕು. ತೆರೆದಿರುವ ಮ್ಯಾನ್ ಹೋಲ್‌ಗಳನ್ನು ಮುಚ್ಚಬೇಕು’ ಎಂದು ಅವರು ಗುತ್ತಿಗೆದಾರರಿಗೆ ಸೂಚಿಸಿದರು.

‘ಕೆಲವೆಡೆ ಕಾಮಗಾರಿಗೆ ಬಳಸಿದ ಸಾಮಗ್ರಿಗಳನ್ನು ರಸ್ತೆಯಲ್ಲಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ರಾಶಿ ಹಾಕಲಾಗಿದೆ. ಅವುಗಳನ್ನೂ ತೆರವುಗೊಳಿಸಬೇಕು. ಕೊಳವೆ ಅಳವಡಿಕೆಗೆ ತೋಡಿರುವ ಗುಂಡಿಗಳನ್ನು ತಕ್ಷಣವೇ ಮುಚ್ಚಬೇಕು. ಕೆಲವೆಡೆ ಸಾರ್ವಜನಿಕರಿಗೆ ಅಡ್ಡಿಯಾಗುವ ಸ್ಥಿತಿಯಲ್ಲಿರುವ ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರ ಕಾರ್ಯ ಪೂರ್ಣಗೊಂಡಿಲ್ಲ. ಈ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು’ ಎಂದು ಅವರು ಸೂಚಿಸಿದರು.

ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ ಹಾಗೂ ರಾಕೇಶ್‌ ಸಿಂಗ್‌ ಅವರು ಕಾಮಗಾರಿ ಪರಿಶೀಲನೆಗೂ ಮುನ್ನ ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಅವರು ಸಭೆ ನಡೆಸಿದರು.

ಮುಖ್ಯ ಎಂಜಿನಿಯರ್‌ ಮಾತೃ ಇಲಾಖೆಗೆ ವಾಪಸ್‌

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಅನುಷ್ಠಾನಗಳ ಕುರಿತು ನಡೆದ ಸಭೆಯಲ್ಲಿ ಸಂಸ್ಥೆಯ ಮುಖ್ಯ ಎಂಜಿನಿಯರ್ ರಂಗನಾಥ ನಾಯ್ಕ್‌ ಕಾರ್ಯವೈಖರಿ ಬಗ್ಗೆ ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ಅನಾಹುತ ಸಂಭವಿಸದಂತೆ ತಡೆಯಲೂ ಅವರು ಕ್ರಮಕೈಗೊಂಡಿಲ್ಲ ಎಂಬ ಆಕ್ಷೇಪವೂ ವ್ಯಕ್ತವಾಯಿತು.

‘ರಂಗನಾಥ್ ನಾಯ್ಕ್‌ ಅವರ ಸೇವೆಯು ಸಂಸ್ಥೆಗೆ ಅಗತ್ಯವಿಲ್ಲ. ಅವರ ಸೇವೆಯನ್ನು ಹಿಂದಕ್ಕೆ ಪಡೆಯಿರಿ’ ಎಂದು ರಾಕೇಶ್‌ ಸಿಂಗ್‌ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಪಿ.ಹೇಮಲತಾ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.

ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಉಸ್ತುವಾರಿಯನ್ನು ರಾಕೇಶ್‌ ಸಿಂಗ್‌ ಅವರು ಸದ್ಯಕ್ಕೆ ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ಅವರಿಗೆ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT