ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಸಂಚಾರ ಯೋಜನೆಗೆ 420 ಪ್ರತಿಕ್ರಿಯೆ: ತಿಂಗಳಲ್ಲಿ ಅಂತಿಮ ರೂಪ

ಪ್ರತಿಕ್ರಿಯೆ ಸಲ್ಲಿಸುವ ಕಾಲಾವಕಾಶ ಮುಕ್ತಾಯ
Last Updated 22 ಜನವರಿ 2020, 22:46 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಪರಿಣಾಮಕಾರಿ ಹಾಗೂ ಸುಸ್ಥಿರ ಸಾರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೂಪಿಸಿದ್ದ ‘ಸಮಗ್ರ ಸಂಚಾರ ಯೋಜನೆ’ಯ (ಸಿಎಂಪಿ) ಕರಡಿಗೆ ಸಾರ್ವಜನಿಕರಿಂದ ಒಟ್ಟು 420 ಪ್ರತಿಕ್ರಿಯೆಗಳು ಬಂದಿವೆ.

ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌) ಸೇರಿ ಈ ಕರಡನ್ನು ಸಿದ್ಧಪಡಿಸಿದ್ದವು. ಇದನ್ನು ಬಿಎಂಆರ್‌ಸಿಎಲ್‌ ವೆಬ್‌ಸೈಟ್‌ನಲ್ಲಿ(kannada.bmrc.co.in) 2019ರ ಡಿ.6ರಂದು ಪ್ರಕಟಿಸಲಾಗಿತ್ತು. ಇ–ಮೇಲ್‌ (cmpcomments@bmrc.co.in ) ಮೂಲಕ ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಲಾಗಿತ್ತು.

ಪ್ರತಿಕ್ರಿಯೆ ಸಲ್ಲಿಸಲು ಮೊದಲು 30 ದಿನಗಳ ಕಾಲಾವಕಾಶ ನೀಡಲಾಗಿತ್ತು. ಬಳಿಕ ಈ ಅವಧಿಯನ್ನು 2020ರ ಜ.20ರವರೆಗೆ ವಿಸ್ತರಿಸಲಾಗಿತ್ತು. ಈ ಕರಡಿನ ಕುರಿತು ವ್ಯಕ್ತವಾಗಿರುವ ಸಲಹೆ ಹಾಗೂ ಆಕ್ಷೇಪಣೆಗಳನ್ನು ಬಿಎಂಆರ್‌ಸಿಎಲ್‌ ಹಾಗೂ ಡಲ್ಟ್‌ ಅಧಿಕಾರಿಗಳು ಪರಿಶೀಲಿಸಲಿದ್ದು, ಬಳಿಕ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದ್ದಾರೆ.

‘110 ಮಂದಿ ಪತ್ರ ಬರೆಯುವ ಮೂಲಕ ಸಿಎಂಪಿ ಕರಡಿಗೆ ಪ್ರತಿಕ್ರಿಯಿಸಿದ್ದಾರೆ. 310 ಪ್ರತಿಕ್ರಿಯೆಗಳು ಇ–ಮೇಲ್‌ ಮೂಲಕ ಬಂದಿವೆ. ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಲಿದ್ದೇವೆ. ಉತ್ತಮ ಸಲಹೆಗಳನ್ನು ಯೋಜನೆಯಲ್ಲಿ ಅಳವಡಿಸಿಕೊಳ್ಳುತ್ತೇವೆ. ಸಲಹೆಗಳನ್ನು ಪರಿಶೀಲಿಸಲು ಒಂದು ತಿಂಗಳು ಕಾಲಾವಕಾಶ ಬೇಕು. ಅವುಗಳನ್ನು ಆಧರಿಸಿ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಅಂತಿಮ ಯೋಜನೆ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರ ಮಹಾ ಯೋಜನೆ (ಸಿಡಿಪಿ) ಮತ್ತು ಇತರ ಆರ್ಥಿಕ ಅಧ್ಯಯನಗಳನ್ನು ಆಧರಿಸಿ ಸಿಎಂಪಿ ಕರಡು ರಚಿಸಲಾಗಿತ್ತು. ನಗರದ ಪ್ರಸ್ತುತ ಜನಸಂಖ್ಯೆ, ಜನ ಸಾಂದ್ರತೆ, ಭೂಬಳಕೆ ವಿಧಾನಗಳಿಗೆ ಸಂಬಂಧಿಸಿದ ಅಂಶಗಳಿಗೆ ಅನುಗುಣವಾಗಿ ಸಾರ್ವಜನಿಕ ಸಾರಿಗೆ, ಅಂತರ್ಜಾಲ ಸಂಪರ್ಕ, ಸಮೂಹ ಸಾರಿಗೆಯ ಮೂಲಸೌಕರ್ಯಗಳು ಎಷ್ಟಿವೆ ಎಂಬುದನ್ನು ಅದರಲ್ಲಿ ವಿಶ್ಲೇಷಿಸಲಾಗಿತ್ತು.ಈಗಿರುವ ಸಾರಿಗೆ ವಿನ್ಯಾಸ ಆಧರಿಸಿ ಭವಿಷ್ಯದಲ್ಲಿ ಆಗಬೇಕಾದ ಕಾರ್ಯಗಳನ್ನು ಪಟ್ಟಿ ಮಾಡಲಾಗಿತ್ತು.

ರಸ್ತೆ ಜಾಲ, ರಸ್ತೆಯಲ್ಲಿ ನಿರ್ದಿಷ್ಟ ಅವಧಿಯಲ್ಲಿ ಸಾಗುವ ವಾಹನಗಳ ಸಂಖ್ಯೆ, ಅವುಗಳ ವೇಗ, ಸಂಚಾರ ವಿಳಂಬಕ್ಕೆ ಕಾರಣ, ಪಾದಚಾರಿ ಸೌಕರ್ಯ ಹಾಗೂ ಅವುಗಳನ್ನು ಬಳಸುವವರ ಪ್ರಮಾಣ, ಬಸ್‌ ಪ್ರಯಾಣದ ವಿನ್ಯಾಸ, ನಮ್ಮ ಮೆಟ್ರೊ ಮತ್ತು ರೈಲು ಬಳಸುವವರ ಪ್ರಮಾಣಗಳ ಬಗ್ಗೆ ವಿಶ್ಲೇಷಣೆ ನಡೆಸಲಾಗಿತ್ತು. ‘ನಮ್ಮ ಮೆಟ್ರೊ ಕಾಮಗಾರಿ’, ಸಬ್ ಅರ್ಬನ್‌ ರೈಲು, ಬಸ್‌ ಆದ್ಯತಾ ಪಥಗಳ ಗುರುತಿಸುವಿಕೆ, ಬಸ್‌ ಸಂಚಾರ ಹೆಚ್ಚಳ, ಕಾರಿಡಾರ್‌ಗಳ ಅಭಿವೃದ್ಧಿ, ಜಂಕ್ಷನ್‌ಗಳ ಅಭಿವೃದ್ಧಿ, ಪಾದಚಾರಿ ಮೇಲ್ಸೇತುವೆ ಅಭಿವೃದ್ಧಿ, ರಸ್ತೆ ವಿಸ್ತರಣೆ, ಪೆರಿಫೆರಲ್‌ ರಸ್ತೆ ನಿರ್ಮಾಣ, ವಾಹನ ನಿಲುಗಡೆಗೆ ಮೂಲಸೌಕರ್ಯ, ಪಾದಚಾರಿ ಮಾರ್ಗ ನಿರ್ಮಾಣ, ಬೈಸಿಕಲ್‌ ಹಂಚಿಕೊಳ್ಳುವ ವ್ಯವಸ್ಥೆ ಜಾರಿ, ಎತ್ತರಿಸಿದ ಪಾದಚಾರಿ ಮಾರ್ಗಗಳು, ಟರ್ಮಿನಲ್‌ಗಳ ಅಭಿವೃದ್ಧಿ ಕುರಿತೂ ಚರ್ಚಿಸಲಾಗಿತ್ತು.

ಒಟ್ಟು ₹ 2.30 ಲಕ್ಷ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸುವ ಉದ್ದೇಶವನ್ನು ಕರಡಿನಲ್ಲಿ ತಿಳಿಸಲಾಗಿತ್ತು.

ಕನ್ನಡದಲ್ಲಿ ಏಕಿಲ್ಲ ಸಿಎಂಪಿ‍ ಮಾಹಿತಿ?
ಸಿಎಂಪಿಯನ್ನು ಕನ್ನಡ ಭಾಷೆಯಲ್ಲಿ ಸಿದ್ಧಪಡಿಸದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ‘ನೀತಿ ನಿರೂಪಣೆಗೆ ಸಂಬಂಧಿಸಿದ ವಿಚಾರಗಳಿಗೆ ಬಗ್ಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆಯುವಾಗ ಈ ಕುರಿತ ಮಾಹಿತಿ ಜನರ ಆಡುಭಾಷೆಯಾದ ಕನ್ನಡದಲ್ಲಿ ಇರಬೇಕು ಎಂಬ ಕನಿಷ್ಠ ಪರಿಜ್ಞಾನವೂ ಸರ್ಕಾರಕ್ಕೆ ಇಲ್ಲ. ಸಿಎಂಪಿ ಕರಡನ್ನು ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಿದರೆ ಎಷ್ಟು ಮಂದಿಗೆ ಜನರಿಗೆ ಅರ್ಥವಾಗುತ್ತದೆ. ಅಷ್ಟಕ್ಕೂ ಈ ಕರಡನ್ನು ರೂಪಿಸಿದ್ದು ಬೆಂಗಳೂರಿಗೋ ಅಥವಾ ಲಂಡನ್‌ಗೋ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು’ ಎಂದು ಕನ್ನಡ ಗ್ರಾಹಕರ ಕೂಟದ ಅರುಣ್‌ ಜಾವಗಲ್‌ ಹೇಳಿದರು.

ಎಲಿವೇಟೆಡ್‌ ಕಾರಿಡಾರ್‌ಗೆ ವಿರೋಧ
ಎಲಿವೇಟೆಡ್‌ ಕಾರಿಡಾರ್ ಬಗ್ಗೆ ಸಿಎಂಪಿಯಲ್ಲಿ ಮತ್ತೆ ಪ್ರಸ್ತಾಪಿಸಿರುವ ಬಗ್ಗೆಯೂ ಅನೇಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಈ ಕುರಿತು ಪ್ರತಿಕ್ರಿಯಿಸಿದ ಅಜಯ್‌ಸೇಠ್‌, ‘ನಗರದ ಸಮಗ್ರ ಸಂಚಾರ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ನಾವು ರೂಪರೇಷೆ ಸಿದ್ಧಪಡಿಸಿದ್ದೆವು. ಎಲಿವೇಟೆಡ್‌ ಕಾರಿಡಾರ್‌ ಇರಲಿ ಅಥವಾ ಅಗಲಗೊಳ್ಳುವ ರಸ್ತೆಗಳೇ ಇರಲಿ, ಅವುಗಳಲ್ಲಿ ಅರ್ಧದಷ್ಟು ಜಾಗವನ್ನು ಸಾರ್ವಜನಿಕ ಸಾರಿಗೆಗೆ ಕಾಯ್ದಿರಿಸಬೇಕು ಎಂದು ಕರಡಿನಲ್ಲಿ ನಿರ್ದಿಷ್ಟಪಡಿಸಲಾಗಿದೆ. ಎಲಿವೇಟೆಡ್‌ ಕಾರಿಡಾರ್‌ನ ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ ‘ನಮ್ಮ ಮೆಟ್ರೊ’ ಮಾರ್ಗವೂ ಹಾದುಹೋಗುವುದರಿಂದ, ಆ ಪ್ರಸ್ತಾವ ಕೈಬಿಡುವಂತೆಯೂ ಸಲಹೆ ನೀಡಲಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಬಂದ ಅಭಿಪ್ರಾಯಗಳನ್ನು ಪರಿಗಣಿಸಿ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಎಲಿವೇಟೆಡ್‌ ಕಾರಿಡಾರ್‌ ಕುರಿತು ಅಂತಿಮ ನಿರ್ಧಾರವನ್ನು ಸರ್ಕಾರವೇ ತೆಗೆದುಕೊಳ್ಳಲಿದೆ’ ಎಂದರು.

‘ಸಿಎಂಪಿ ಕೇವಲ ಕಾಗದದ ಕಸರತ್ತು’

ಸಿಎಂಪಿ ಬಗ್ಗೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಸಿಟಿಜನ್ಸ್‌ ಅಜೆಂಡಾ ಫಾರ್‌ ಬೆಂಗಳೂರು ಸಂಘಟನೆಯು ‘ಸಿಎಂಪಿ ಕೇವಲ ಕಾಗದದ ಕಸರತ್ತು’ ಎಂದು ಆರೋಪಿಸಿದೆ.

‘ಈಗ ರೂಪಿಸಿರುವ ಕರಡನ್ನು ರದ್ದುಪಡಿಸಬೇಕು. ಅದರ ಬದಲು ಮಹಾನಗರ ಯೋಜನಾ ಸಮಿತಿ (ಎಂಪಿಸಿ) ರಚಿಸಿ ಅದರ ಮೂಲಕ ನಗರ ಮಹಾ ಯೋಜನೆ ಮತ್ತು ಸಮಗ್ರ ಸಂಚಾರ ಯೋಜನೆಯನ್ನು ರೂಪಿಸಬೇಕು. ಏಕೀಕೃತ ನಗರ ಸಾರಿಗೆ ಪ್ರಾಧಿಕಾರ (ಉಮ್ಟಾ) ರಚಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಒತ್ತಾಯಿಸಿ ಸಂಘಟನೆಯು ಆನ್‌ಲೈನ್‌ನಲ್ಲಿ (change.org) ಅಭಿಯಾನ ಆರಂಭಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT