ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಪ್ರಕರಣದಲ್ಲೂ ರಾಜಿ ಮಾನ್ಯ: ಹೈಕೋರ್ಟ್‌

Last Updated 1 ಜೂನ್ 2022, 20:22 IST
ಅಕ್ಷರ ಗಾತ್ರ

ಬೆಂಗಳೂರು: ‘ಅತ್ಯಾಚಾರ ಆರೋಪ ಪ್ರಕರಣದಲ್ಲಿದೂರುದಾರ ಮಹಿಳೆ ಮತ್ತು ಆರೋಪಿಗಳ ನಡುವೆ ರಾಜಿಯಾದರೆ ವಿಚಾರಣೆ ಮುಕ್ತಾಯಗೊಳಿಸಬಹುದು‘ ಎಂದು ಹೈಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ತಮ್ಮ ಕುಟುಂಬದ ಸದಸ್ಯರ ವಿರುದ್ಧಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಆರೋಪ ಪ್ರಕರಣವನ್ನು ರದ್ದುಪಡಿಸಿರುವನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ದೂರುದಾರಳು ವಿವಾಹಿತೆಯಾಗಿದ್ದು, ಗಂಡನ ಜೊತೆಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಆರೋಪಿಗಳು ದೂರುದಾರಳ ಕುಟುಂಬದ ಸದಸ್ಯರೇ ಆಗಿದ್ದು, ಆರೋಪಿಗಳು ಮತ್ತು ದೂರುದಾರರು ರಾಜಿಯಾಗಲು ಸಲ್ಲಿಸಿರುವ ಜ್ಞಾಪನಾ ಪತ್ರವನ್ನು (ಮೆಮೊ) ಪರಿಗಣಿಸಬಹುದಾಗಿದೆ’ ಎಂದು ಹೇಳಿದೆ.

‘ಅತ್ಯಾಚಾರ ಪ್ರಕರಣದಲ್ಲಿ ಉಭಯ ಪಕ್ಷದವರು ರಾಜಿಯಾಗಲು ಒಪ್ಪಿದ ಸಂದರ್ಭದಲ್ಲಿ ಆ ಪ್ರಕರಣವನ್ನು ನ್ಯಾಯಾಲಯ ಮುಕ್ತಾಯಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲಾಗಿದೆ’ ಎಂದು ನ್ಯಾಯಪೀಠ ಆದೇಶಿಸಿದೆ.

‘ನನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ, ಜೀವಕ್ಕೆ ಬೆದರಿಕೆ ಉಂಟು ಮಾಡಿ ಅವಮಾನ ಪಡಿಸಲಾಗಿದೆ ಮತ್ತು ಹಣ ವಸೂಲಿ ಮಾಡಲಾಗಿದೆ’ ಎಂದು ಆರೋಪಿಸಿ ನಗರದ 34 ವರ್ಷದ ಮಹಿಳೆಯೊಬ್ಬರು ತಮ್ಮ ಕುಟುಂಬದ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರ ವಿರುದ್ಧ2022ರ ಫೆಬ್ರುವರಿ 16ರಂದು ಪೊಲೀಸರಿಗೆ ದೂರು ನೀಡಿದ್ದರು.ಈ ದೂರಿನ ಅನುಸಾರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆಎಲ್ಲ ಆರೋಪಿಗಳು ಮತ್ತು ದೂರುದಾರ ಮಹಿಳೆ ಹೈಕೋರ್ಟ್‌ಗೆ ಹಾಜರಾಗಿ, ‘ಪ್ರಕರಣವನ್ನು ರಾಜಿ ಮೂಲಕ ಮುಕ್ತಾಯಗೊಳಿಸಲು ಉದ್ದೇಶಿಸಿದ್ದೇವೆ’ ಎಂಬ ಜಂಟಿ ಮೆಮೊ ಸಲ್ಲಿಸಿದರು. ಅದನ್ನು ಮಾನ್ಯ ಮಾಡಿದ ನ್ಯಾಯಪೀಠಪ್ರಕರಣವನ್ನು ವಿಲೇವಾರಿ ಮಾಡಿದೆ. ಆರೋಪಿಗಳ ಪರ ಡಿ.ಮೋಹನಕುಮಾರ್ ಹಾಗೂದೂರುದಾರ ಮಹಿಳೆಯ ಪರ ಕೆ.ರಾಘವೇಂದ್ರಗೌಡ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT