ಶುಕ್ರವಾರ, ಫೆಬ್ರವರಿ 26, 2021
30 °C
ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅಭಿಮತ

ರಸ್ತೆ ಸುರಕ್ಷತೆ ಮೇಲೂ ಕಾಳಜಿ ಇರಲಿ: ಪುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದಲ್ಲಿ ರಸ್ತೆ ಸಾರಿಗೆ ಸುರಕ್ಷತೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಏಷಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟ್ರಾನ್ಸ್‌ಪೋರ್ಟ್‌ ಡೆವಲಪ್‌ಮೆಂಟ್‌ನ  (ಎಐಟಿಡಿ) ನಿರ್ದೇಶಕ ಬಿ.ಎನ್‌.ಪುರಿ ಹೇಳಿದರು.

ಎಐಟಿಡಿ, ಲೋಕೋಪಯೋಗಿ ಇಲಾಖೆ, ಭಾರತೀಯ ರೋಡ್‌ ಕಾಂಗ್ರೆಸ್‌ ಆಶ್ರಯದಲ್ಲಿ ನಗರದಲ್ಲಿ ಶನಿವಾರ ‘ಸುಗಮ ಸಂಚಾರ ಕ್ರಮಗಳ ಮೂಲಕ ರಸ್ತೆ ಸುರಕ್ಷತೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪುರಿ ಅವರ ವಿಶ್ಲೇಷಣೆ ಹೀಗಿತ್ತು. ‘ರೈಲು, ವಿಮಾನಯಾನ ಸುರಕ್ಷತೆಗೆ ವಹಿಸುವ ಕಾಳಜಿಗೆ ಹೋಲಿಸಿದರೆ ರಸ್ತೆ ಸಾರಿಗೆ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಜಾಗೃತಿಯೂ ಇಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ಕ್ರಮ ಇದೆ. ಇದಕ್ಕೊಂದು ಏಕರೂಪತೆ ತಂದು ಸುರಕ್ಷತೆ ಸಂಬಂಧಿಸಿದ ವಿಭಾಗವನ್ನೇ ಸ್ಥಾಪಿಸಬೇಕು.

‘ದೇಶದಲ್ಲಿ 5,500 ಮಂದಿಗೆ ರಸ್ತೆ ಸುರಕ್ಷತೆ ಸಂಬಂಧಿಸಿದ ತರಬೇತಿ ನೀಡಿ ದೇಶದಾದ್ಯಂತ ನೇಮಿಸಬೇಕು. ಅವರು ಆ ತರಬೇತಿಯನ್ನು ಇತರರಿಗೆ ನೀಡಬೇಕು. ಹೀಗೆ ತರಬೇತಾದವರಲ್ಲಿ 1,500 ಮಂದಿಯನ್ನು ರಸ್ತೆ ಸುರಕ್ಷತೆ ಲೆಕ್ಕ ಪರಿಶೋಧನೆಗೆ (ಆಡಿಟಿಂಗ್‌) ನೇಮಿಸಬೇಕು. ಸದ್ಯ ಎಐಟಿಡಿ 1,100 ಎಂಜಿನಿಯರ್‌ಗಳಿಗೆ ತರಬೇತಿ ನೀಡಿದೆ. ದೇಶದ ವಿವಿಧ ಭಾಗಗಳಲ್ಲಿ 20 ಕೇಂದ್ರಗಳನ್ನು ಹೊಂದಿದ್ದು ಅಲ್ಲಿಯೂ ತರಬೇತಿ ನೀಡಲಾಗುತ್ತಿದೆ’ ಎಂದರು.

ಕರ್ನಾಟಕದ ಸ್ಥಿತಿಗತಿ

ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಐಆರ್‌ಸಿ ಅಧ್ಯಕ್ಷ ಕೆ.ಎಸ್‌.ಕೃಷ್ಣರೆಡ್ಡಿ ರಾಜ್ಯದ ರಸ್ತೆ ಸುರಕ್ಷತೆ ಕುರಿತು ವಿವರ ನೀಡಿದರು.

‘ಸುಪ್ರೀಂ ಕೋರ್ಟ್‌ ರಸ್ತೆ ಸುರಕ್ಷತೆ ಸಂಬಂಧಿಸಿದಂತೆ ಅವಲೋಕಿಸಲು ಸಮಿತಿಯೊಂದನ್ನು ರಚಿಸಿದೆ. ಅದರ ಸೂಚನೆ ಪ್ರಕಾರ ಅಪಘಾತ ವಲಯಗಳನ್ನು (ಕಪ್ಪು ಪ್ರದೇಶ) ಗುರುತಿಸಿ, ಸುಧಾರಣೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ರಾಜ್ಯ ಸರ್ಕಾರವು ರಸ್ತೆ ಸುರಕ್ಷತಾ ನೀತಿ –2015ನ್ನು ಅಂಗೀಕರಿಸಿದೆ. ಅದರ ಪ್ರಕಾರ 2020ರ ವೇಳೆಗೆ ಅಪಘಾತಗಳ ಪ್ರಮಾಣವನ್ನು ಶೇ 25ಕ್ಕೆ ಇಳಿಸುವುದು, ಅಪಘಾತಗಳಲ್ಲಿ ಸಾವಿನ ಪ್ರಮಾಣವನ್ನು ಶೇ 30ಕ್ಕೆ ಇಳಿಸುವ ಗುರಿ ಹೊಂದಿದ್ದೇವೆ’ ಎಂದರು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.