ತಪ್ಪೊಪ್ಪಿಗೆ ಹೇಳಿಕೆ ನೀಡಿದ ಆರೋಪಿಗಳು

7
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸ್ಫೋಟ ಪ್ರಕರಣ

ತಪ್ಪೊಪ್ಪಿಗೆ ಹೇಳಿಕೆ ನೀಡಿದ ಆರೋಪಿಗಳು

Published:
Updated:

ಬೆಂಗಳೂರು: ಎಂಟು ವರ್ಷಗಳ ಹಿಂದೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳು ಎನ್‌ಐಎ ಕೋರ್ಟ್‌ನಲ್ಲಿ ಬುಧವಾರ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾರೆ.

ಕೇರಳ ಹಾಗೂ ದೆಹಲಿ ಮೂಲದ ಆರೋಪಿಗಳಾದ ಕಮಲ್ ಹಸನ್, ಗೋಹರ್ ಅಜೀಬ್, ಕಪಿಲ್ ಅಖ್ತರ್ ತಪ್ಪೊಪ್ಪಿಕೊಂಡು ಹೇಳಿಕೆ ನೀಡಿದ್ದಾರೆ. ಎನ್‌ಐಎ ಕೋರ್ಟ್ ನ್ಯಾಯಾಧೀಶರಾದ ಸಿದ್ದಲಿಂಗ ಪ್ರಭು ಈ ಮೂವರಿಂದ ಪ್ರತ್ಯೇಕ ಲಿಖಿತ ಹೇಳಿಕೆ ಪಡೆದಿದ್ದಾರೆ.

ಇದೇ ವೇಳೆ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರು, ಮತ್ತೊಬ್ಬ ಆರೋಪಿ ಮೊಹಮ್ಮದ್ ತಾರೀಕ್ ಅಂಜುಂ ತಪ್ಪೊಪ್ಪಿಗೆ ಹೇಳಿಕೆ ನೀಡಲು ನಿರ್ಧರಿಸಿದ್ದು, ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾನೆ. ಈತನನ್ನು ಮತ್ತೊಂದು ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಕರೆದೊಯ್ದಿದ್ದು, ವಿಡಿಯೊ ಕಾನ್ಫರೆನ್ಸ್‌ ಮೂಲಕ ಹೇಳಿಕೆ ಪಡೆಯಬಹುದು ಎಂದರು.

ಇದಕ್ಕೆ ಒಪ್ಪದ ನ್ಯಾಯಾಧೀಶರು, ಆರೋಪಿಯನ್ನು ಖುದ್ದು ಹಾಜರುಪಡಿಸಿದರೆ ಮಾತ್ರ ಹೇಳಿಕೆ ಪರಿಗಣಿಸುವುದಾಗಿ ತಿಳಿಸಿದರು. ಪೊಲೀಸರ ವಿಚಾರಣೆ ಮುಗಿದ ಬಳಿಕ ಹಾಜರುಪಡಿಸುವಂತೆ ಸರ್ಕಾರಿ ಅಭಿಯೋಜಕರಿಗೆ ಸೂಚಿಸಿದರು.

ಜೂ.9ಕ್ಕೆ ಶಿಕ್ಷೆ ಪ್ರಕಟ: ಮೂವರ ಹೇಳಿಕೆ ದಾಖಲಿಸಿದ ನ್ಯಾಯಾಧೀಶರು, ತಪ್ಪೊಪ್ಪಿಗೆ ಹೇಳಿಕೆ ಮತ್ತೊಮ್ಮೆ ಪರಿಶೀಲಿಸಲು ಆರೋಪಿಗಳಿಗೆ ಮೂರು ದಿನಗಳ ಕಾಲಾವಕಾಶ ನೀಡಿದರು. ಈ ಸಂಬಂಧ ಜುಲೈ 9ಕ್ಕೆ ಶಿಕ್ಷೆ ಪ್ರಮಾಣ ಪ್ರಕಟಿಸಲಾಗುವುದು ಎಂದರು.

ಯಾಸಿನ್ ಭಟ್ಕಳ್‌ನಿಂದ ಅರ್ಜಿ: ಪ್ರಕರಣದ ಪ್ರಮುಖ ಆರೋಪಿ ಯಾಸಿನ್ ಭಟ್ಕಳ್ ತನ್ನ ವಿರುದ್ಧ ಯುಎಪಿಎ ಕಾಯ್ದೆಯಡಿ ದಾಖಲಿಸಿರುವ ಪ್ರಕರಣವನ್ನು ಕೈಬಿಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. 

ಆರೋಪಿಗಳು ಹೇಳಿದ್ದೇನು?
‘ಸ್ಫೋಟ ಪ್ರಕರಣದಲ್ಲಿ ನಾವು ನೇರವಾಗಿ ಭಾಗಿಯಾಗಿಲ್ಲ. ನೇರವಾಗಿ ಭಾಗಿಯಾಗಿದ್ದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಬಾಂಬ್ ತಂದೂ ಇಟ್ಟಿಲ್ಲ. ಒಮ್ಮೆ ಮಾತ್ರ ದೆಹಲಿ, ಹೈದರಾಬಾದ್‌ ಅಪಾರ್ಟ್‌ಮೆಂಟ್‌ಗಳಲ್ಲಿ ಯಾಸಿನ್ ಭಟ್ಕಳ್, ರಿಯಾಜ್ ಭಟ್ಕಳ್ ಹಾಗೂ ಇತರ ಆರೋಪಿಗಳ ಜತೆ ಸ್ಫೋಟಕ್ಕೆ ಒಳಸಂಚು ರೂಪಿಸಿದ ಸಭೆಯಲ್ಲಿ ಭಾಗವಹಿಸಿದ್ದೆವು. ಉಳಿದ ಆರೋಪಿಗಳಿಗೆ ಅಗತ್ಯ ನೆರವು ನೀಡಿದ್ದೆವು’ ಎಂದು ಹೇಳಿಕೆ ನೀಡಿದ್ದಾರೆ.

‘ಈ ಪ್ರಕರಣದಲ್ಲಿ, ನಮಗೆ ಕಡಿಮೆ ಶಿಕ್ಷೆ ವಿಧಿಸಬೇಕು. ಉಗ್ರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಿಂದ (ಯುಎಪಿಎ) ಕೈಬಿಡಬೇಕು’ ಎಂದು ಆರೋಪಿಗಳು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !