ಸೋಮವಾರ, ಸೆಪ್ಟೆಂಬರ್ 16, 2019
27 °C

‘ಬಿಜೆಪಿಯವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದವರು’

Published:
Updated:
Prajavani

ಬೆಂಗಳೂರು: ‘ದೇಶದ ಅಭಿವೃದ್ಧಿ ಮಾಡಿದವರು ನಾವು (ಕಾಂಗ್ರೆಸ್ಸಿಗರು). ಸುಳ್ಳು ಹೇಳಿ, ಹೇಳಿ ಅಧಿಕಾರಕ್ಕೆ ಬಂದವರು ಅವರು (ಬಿಜೆಪಿಯವರು)’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನರೇಂದ್ರ ಮೋದಿ ಮೊದಲ ಬಾರಿ ಸಂಸತ್‌ ಒಳಗೆ ತಲೆಬಾಗಿ ಕಾಲಿಟ್ಟಿದ್ದರು. ಈ ಬಾರಿ ಸಂವಿಧಾನಕ್ಕೆ ನಮಸ್ಕರಿಸಿ ಹೋಗಿದ್ದಾರೆ. ಸಂದರ್ಭಕ್ಕೆ ತಕ್ಕಂತ ಬಿಜೆಪಿ ನಾಯಕರು ನಾಟಕ ಆಡುತ್ತಾರೆ’ ಎಂದು ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.

ಮತ್ತೊಬ್ಬ ಮುಖಂಡ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಸೂರ್ಯ ಮೇಲಿದ್ದಾನೆ. ಕೆಳಗೂ ಬರುತ್ತಾನೆ. ಕತ್ತಲು ಇದೆ. ಬೆಳಕೂ ಬರುತ್ತದೆ. ಹಾಗೆಯೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ’ ಎಂದರು.

‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರದ ನಿರ್ಧಾರವನ್ನು ನಮ್ಮ ಪಕ್ಷದ ಕೆಲವು ನಾಯಕರು ಒಪ್ಪಿದ್ದಾರೆ. ಆದರೆ, ಒಪ್ಪಿದವರಿಗೆ ಇತಿಹಾಸ ಗೊತ್ತಿಲ್ಲ’ ಎಂದು ಟೀಕಿಸಿದರು.

ಎಂ.ವೀರಪ್ಪ ಮೊಯಿಲಿ, ‘ಕಾಂಗ್ರೆಸ್‌ನಲ್ಲಿರುವ ನಿರಂಕುಶವಾದ ಕಿತ್ತುಹಾಕಿದಾಗ ಮಾತ್ರ ಪಕ್ಷ ಬಲಿಷ್ಠವಾಗಲು ಸಾಧ್ಯ. ಪಕ್ಷದಲ್ಲಿ ಜಾತಿಯ ಮುಖಂಡತ್ವ ಬಂದಿದೆ.  ಇದನ್ನೂ ತೊಲಗಿಸಬೇಕು. ರಾಜ್ಯ ಕಾಂಗ್ರೆಸ್ ನಾಯಕರು ಇದನ್ನು ಕಾರ್ಯಗತಗೊಳಿಸಬೇಕು’ ಎಂದರು.

‘ನಮ್ಮ ಶಾಸಕರೇ ಕೆಲವರು ಬಿಜೆಪಿಗೆ ಹೋಗಿದ್ದಾರೆ. ಅವರು ಎಷ್ಟು ತೆಗೆದುಕೊಂಡು ಹೋಗಿದ್ದಾರೆ ಎನ್ನುವುದೂ ಗೊತ್ತಿದೆ. ಬಿಜೆಪಿ ಸರ್ಕಾರ ಕೂಡ ಅಸ್ತಿತ್ವಕ್ಕೆ ಬಂದಿದೆ. ಆದರೆ, ಈ ಸರ್ಕಾರ ಆರೇಳು ತಿಂಗಳು ಇರುವುದಿಲ್ಲವೆಂದು ಜನರೇ ಹೇಳುತ್ತಿದ್ದಾರೆ’ ಎಂದು ಜಿ. ‌ಪರಮೇಶ್ವರ ಹೇಳಿದರು.

‘ಕಾರ್ಯಕರ್ತರನ್ನು ಉಳಿಸಿದರೆ ಮಾತ್ರ ಪಕ್ಷ ಉಳಿಯುತ್ತದೆ. ಬಿಜೆಪಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ’ ಎಂದು ಕೆ.ಎಚ್. ಮುನಿಯಪ್ಪ ಭವಿಷ್ಯ ನುಡಿದರೆ, ‘ಸರ್ಕಾರ ಇದ್ದಾಗ ಬರುವವರು ಬೇರೆ. ಇವತ್ತು ಕಾರ್ಯಕ್ರಮದಲ್ಲಿ ಉಳಿದವರು ಬೇರೆ’ ಎಂದು ಹೇಳುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸದವರನ್ನು ಎಚ್‌.ಕೆ. ಪಾಟೀಲ ಪರೋಕ್ಷವಾಗಿ ಚುಚ್ಚಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎಚ್‌. ಆಂಜನೇಯ, ಬಿ.ಕೆ. ಹರಿಪ್ರಸಾದ್, ರಾಮಲಿಂಗಾರೆಡ್ಡಿ ಇದ್ದರು.

Post Comments (+)