‘ಮೈತ್ರಿ’ ಜತೆಗೆ ಜಂಟಿ ಪ್ರಚಾರ

7
ಕಾಂಗ್ರೆಸ್‌– ಜೆಡಿಎಸ್‌ ನಾಯಕರ ಸಭೆಯಲ್ಲಿ ತೀರ್ಮಾನ

‘ಮೈತ್ರಿ’ ಜತೆಗೆ ಜಂಟಿ ಪ್ರಚಾರ

Published:
Updated:

ಬೆಂಗಳೂರು: ಉಪ ಚುನಾವಣೆಯಲ್ಲಿ ‘ಮೈತ್ರಿ’ಯ ಜೊತೆಗೆ, ಎಲ್ಲ ಐದೂ ಕ್ಷೇತ್ರಗಳಲ್ಲಿ ಜಂಟಿಯಾಗಿ ಚುನಾವಣಾ ಪ್ರಚಾರ ಕೈಗೊಳ್ಳಲು ಕಾಂಗ್ರೆಸ್‌– ಜೆಡಿಎಸ್‌ ನಾಯಕರು ತೀರ್ಮಾನಿಸಿದರು.

ಉಪಚುನಾವಣೆ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ನಾಯಕರು ಕುಮಾರಕೃಪಾ ಅತಿಥಿಗೃಹದಲ್ಲಿ ಮಂಗಳವಾರ ಸಂಜೆ ಚರ್ಚೆ ನಡೆಸಿದರು.

ಬಳಿಕ ಮಾತನಾಡಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌, ‘ಬಳ್ಳಾರಿ, ಶಿವಮೊಗ್ಗ ಲೋಕಸಭೆ ಮತ್ತು ಜಮಖಂಡಿ ವಿದಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌, ಮಂಡ್ಯ ಲೋಕಸಭೆ ಮತ್ತು ರಾಮನಗರ ವಿಧಾನಸಭೆ ಕ್ಷೇತ್ರದಲ್ಲೆ ಜೆಡಿಎಸ್‌ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ’ ಎಂದರು.

‘ಉಪ ಚುನಾವಣೆಯಲ್ಲಿ ಜಂಟಿಯಾಗಿ ಚುನಾವಣಾ ಪ್ರಚಾರ ಕೈಗೊಳ್ಳುತ್ತೇವೆ. ಎಲ್ಲ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ಇದೆ’ ಎಂದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಿತ್ತುಹಾಕಿ ಜಾತ್ಯತೀತ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಿದೆ. ಈ ಉಪ ಚುನಾವಣೆಯಿಂದಲೇ ಆ ಪ್ರಯತ್ನಕ್ಕೆ ಅಡಿಪಾಯ ಹಾಕಿದ್ದೇವೆ’ ಎಂದರು.

ಸಭೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಮನ್ವಯ ಸಮಿತಿ ಸಂಚಾಲಕ ಡ್ಯಾನಿಶ್ ಆಲಿ ಇದ್ದರು. ಸಭೆಯ ಆರಂಭಕ್ಕೂ ಮೊದಲು ವೇಣುಗೋಪಾಲ್ ಅವರು ದೇವೇಗೌಡರ ಆರೋಗ್ಯ ವಿಚಾರಿಸಿದರು.

ಗುಟ್ಟು ಬಿಚ್ಚಿಟ್ಟ ದೇವೇಗೌಡರು, ‘ಪ್ರತಿದಿನ‌ ಬೆಳಿಗ್ಗೆ ಯೋಗ ಮಾಡುತ್ತೇನೆ. ಯೋಗವೇ ನನ್ನ ಆರೋಗ್ಯದ ಗುಟ್ಟು’ ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.

ರಾಹುಲ್‌ 13ರಂದು ರಾಜ್ಯಕ್ಕೆ: ಇದೇ 13ರಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯಕ್ಕೆ ಬರಲಿದ್ದಾರೆ.

ಅಂದು ಎಚ್‌ಎಎಲ್ ನೌಕರರ ಜೊತೆ ಸಂವಾದ ನಡೆಸಲಿರುವ ರಾಹುಲ್‌ ಬಳಿಕ, ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗ
ವಹಿಸಲಿದ್ದಾರೆ.

ಸಂಪುಟ ವಿಸ್ತರಣೆ, ಮೈತ್ರಿ ಸರ್ಕಾರದ ಸಮನ್ವಯತೆ ಮತ್ತು ಉಪಚುನಾವಣೆ ಬಗ್ಗೆಯೂ ರಾಜ್ಯ ನಾಯಕರ ಜೊತೆ ಅವರು ಮಾತುಕತೆ ನಡೆಸಲಿದ್ದಾರೆ. ರಾಹುಲ್‌ ಭಾಗವಹಿಸುವ ಕಾರ್ಯಕ್ರಮದ ಸಿದ್ಧತೆಗಾಗಿ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಪಕ್ಷದ ಮುಖಂಡರ ಪೂರ್ವಭಾವಿ ಸಭೆ ಮಂಗಳವಾರ ನಡೆಯಿತು.

ಸಂ‍ಪುಟ ಸಭೆಗೆ ಗೈರು: ರಮೇಶ ಜಾರಕಿಹೊಳಿ ವಿರುದ್ಧ ದೂರು

ಬೆಂಗಳೂರು: ಸಚಿವ ಸಂಪುಟ ಸಭೆಗೆ ಗೈರುಹಾಜರಾಗುತ್ತಿರುವ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.

ವಿಧಾನಸಭೆಯ ಕಾರ್ಯವಿಧಾನ, ನಡವಳಿಕೆ ಹಾಗೂ ನಿಯಮಾವಳಿಗಳ ಪ್ರಕಾರ, ಸಮಿತಿಯ ಅಧ್ಯಕ್ಷರ ಅಪ್ಪಣೆ ಇಲ್ಲದೆ ಎರಡು ಅಥವಾ ಹೆಚ್ಚು ಸಭೆಗಳಿಗೆ ಗೈರುಹಾಜರಾದರೆ ಅಂತಹ ಸದಸ್ಯರನ್ನು ಸದಸ್ಯತ್ವದಿಂದಲೇ ತೆಗೆದುಹಾಕಬಹುದು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಇಲ್ಲವೇ ವಿದೇಶ ‍ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಸಂಪುಟ ಸಭೆಗೆ ಹಾಜರಾಗದೆ ಇರುವ ಉದಾಹರಣೆಗಳಿವೆ. ಆದರೆ, ರಾಜ್ಯದಲ್ಲೇ ಇದ್ದುಕೊಂಡು ಆರೋಗ್ಯವಾಗಿದ್ದು, ಪೂರ್ವಾನುಮತಿ ಪಡೆಯದೆ ಸಂಪುಟ ಸಭೆಗೆ ಬಾರದೆ ಇರುವುದು ಸಂವಿಧಾನಕ್ಕೆ ಬಗೆದ ಅಪಚಾರ ಎಂದು ಅವರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !