ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾವಂತರಿಂದಲೇ ಹೆಚ್ಚಿದ ಜಾತೀಯತೆ: ಸಿದ್ದರಾಮಯ್ಯ ಬೇಸರ

Last Updated 4 ಜನವರಿ 2022, 18:37 IST
ಅಕ್ಷರ ಗಾತ್ರ

ಬೆಂಗಳೂರು: ‘ಶಿಕ್ಷಣ ವೈಚಾರಿಕತೆಯಿಂದ ಕೂಡಿರಬೇಕು. ಸ್ನಾತಕೋತ್ತರ ಪದವಿಗಳನ್ನು ಪೂರೈಸಿ ಜಾತೀಯತೆ ಮಾಡುವುದು ನಿಜವಾದ ಶಿಕ್ಷಣ ಅಲ್ಲ. ಇಂದು ವಿದ್ಯಾವಂತರಿಂದಲೇ ಜಾತೀಯತೆಹೆಚ್ಚಾಗಿ ಬೆಳೆಯುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸವಿತಾ ಸಮಾಜವು ಗಾಂಧಿಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಂ.ಎಸ್.ಮುತ್ತುರಾಜ್ ಅವರ ‘ನಾನು ಸ್ವಾಭಿಮಾನಿ ಕ್ಷೌರಿಕ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಬಂದಾಗ ಸಾಕ್ಷರತೆ ಪ್ರಮಾಣ ಶೇ 18ರಷ್ಟಿತ್ತು. ಈಗ ಶೇ 78ಕ್ಕೆ ಏರಿದೆ. ಆದರೂ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳು ಆಗಿಲ್ಲ. ವಿದ್ಯೆ ಕಲಿತವರು ಜಾತಿಗಳ ಪರ ನಿಂತರೆ, ಅವರು ಪಡೆದ ಶಿಕ್ಷಣಕ್ಕೆ ಅರ್ಥವೇನು’ ಎಂದು ಪ್ರಶ್ನಿಸಿದರು.

ಜಾತಿ ಪರಿಶೀಲಿಸಿ ಬಾಡಿಗೆಗೆ ಮನೆ: ‘ನಗರ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಮಾನಸಿಕ ರೂಪದಲ್ಲಿದ್ದು, ಮನೆ ಬಾಡಿಗೆ ಕೊಡುವ ಮುನ್ನ ಜಾತಿ ಪರಿಶೀಲನೆ ಮಾಡುತ್ತಾರೆ. ತಬ್ಬಲಿ ಜಾತಿಯವರು ತಮ್ಮ ಜಾತಿಯ ಹೆಸರು ಮುಚ್ಚಿಟ್ಟು, ಮನೆಗಳನ್ನು ಬಾಡಿಗೆಗೆ ಪಡೆಯುವ ಪರಿಸ್ಥಿತಿ ಇನ್ನೂ ಇದೆ’ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.

‘ಕ್ಷೌರಿಕನ ಮುಂದೆ ತಲೆ ತಗ್ಗಿಸದೆ ವಿಧಿಯಿಲ್ಲ. ಹಳ್ಳಿಗಳಲ್ಲಿ ಕ್ಷೌರಿಕರು ದಲಿತರಿಗೆ ಕ್ಷೌರ ಮಾಡಿದರೆ, ಮೇಲ್ವರ್ಗದವರು ಮುನಿಸಿಕೊಳ್ಳುತ್ತಾರೆ. ಶೂದ್ರರಲ್ಲೇ ಇರುವಂತಹ ಅಸ್ಪೃಶ್ಯ ಭಾವನೆ ತುಂಬಾ ಅಪಾಯಕಾರಿ. ಒಬ್ಬ ವ್ಯಕ್ತಿ ತನ್ನ ಜಾತಿಯ ಬಗ್ಗೆ ನಿರ್ಭಯದಿಂದ ಹೇಳಬೇಕು. ಜಾತಿಯ ಬಗ್ಗೆ ಹಿಂಜರಿಕೆ ಏಕೆ? ಅದೊಂದು ಕಠೋರ ವಾಸ್ತವವಾಗಿದ್ದು, ಅದನ್ನು ಮುಚ್ಚಿಟ್ಟು ಏನು ಮಾಡಬೇಕು. ಆ ಕಾರಣದಿಂದಲೇ ಈ ಪುಸ್ತಕಕ್ಕೆ ‘ನಾನು ಸ್ವಾಭಿಮಾನಿ ಕ್ಷೌರಿಕ’ ಎಂಬ ಹೆಸರು ಸೂಚಿಸಿದೆ’ ಎಂದರು.

‘ಹಳ್ಳಿಗಳಲ್ಲಿ ಅಸ್ಪೃಶ್ಯತೆ ಯಾವ ರೀತಿ ಇದೆ, ಭೂಮಾಲೀಕರು, ಜಮೀನ್ದಾರರು ಹಾಗೂ ಸಿರಿವಂತ ಸವರ್ಣೀಯರು ಅಸ್ಪೃಶ್ಯತೆಯನ್ನು ಯಾವ ರೀತಿ ಆಚರಿಸುತ್ತಾರೆ. ಅದು, ತಲೆಮಾರಿನಿಂದ ತಲೆಮಾರಿಗೆ ಹೇಗೆ ಸಾಗಿ ಬಂದಿದೆ. ಮೊದಲ ತಲೆಮಾರಿನಲ್ಲಿದ್ದ ಅಸ್ಪೃಶ್ಯತೆಯ ವಿಧೇಯತೆ, ಎರಡನೇ ತಲೆಮಾರಿನಲ್ಲಿ ಪ್ರತಿಭಟನೆಯಾಗಿ ರೂಪುಗೊಂಡ ಬಗೆಯನ್ನುಮುತ್ತುರಾಜ್ ಈ ಪುಸ್ತಕದಲ್ಲಿ ಚಿತ್ರಿಸಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಎಚ್‌.ಎಂ.ರೇವಣ್ಣ, ‘ಈಗ ಕ್ಷೌರ ಮತ್ತು ಕೇಶಾಲಂಕಾರದ ವಿನ್ಯಾಸಗಳು ಬದಲಾಗಿವೆ. ಆಧುನಿಕತೆಗೆ ಒಳಗಾಗಿ ಕ್ಷೌರಿಕ ವೃತ್ತಿಯೂ ಅವನತಿಯತ್ತ ಸಾಗುತ್ತಿದೆ ಎನ್ನುವುದು ನನ್ನ ಅನಿಸಿಕೆ’ ಎಂದರು.

‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಉಪಸ್ಥಿತರಿದ್ದರು.

‘ಕ್ಷೌರಿಕನ ಮುಖ ನೋಡಿಯೇ ಇಲ್ಲಿವರೆಗೆ ಬಂದೆ’

‘ನನ್ನ ಅಜ್ಜಿ ಮನೆ ಪಕ್ಕದಲ್ಲೇ ಕ್ಷೌರಿಕರ ಮನೆ ಇತ್ತು. ಅಲ್ಲಿ ನಾರಾಯಣ ಎಂಬ ಹುಡುಗ ಇದ್ದ.ನನ್ನ ಪುಸ್ತಕಗಳನ್ನು ಅವನಿಗೆ ನೀಡುತ್ತಿದ್ದೆ. ‘ಎದ್ದ ತಕ್ಷಣ ಅವನ ಮುಖ ನೋಡಬೇಡ’ ಎಂದು ಅಜ್ಜಿ ನನಗೆ ಹೇಳುತ್ತಿದ್ದರು. ಆದರೆ, ನಾವಿಬ್ಬರೂ ಆಪ್ತ ಸ್ನೇಹಿತರಾದೆವು. ಅವನನ್ನು ಬಿಟ್ಟು ನಾನು ಇರುತ್ತಿರಲಿಲ್ಲ. ರಜೆ ದಿನಗಳಲ್ಲಿ ಊರಿಗೆ ಹೋದಾಗ ನಾರಾಯಣನ ಜೊತೆಗೇ ಇರುತ್ತಿದ್ದೆ. ಅವನನ್ನು ನೋಡಿ, ಜೊತೆಯಲ್ಲೇ ಇದ್ದುದರಿಂದ ಇಂದು ಈ ಸ್ಥಿತಿಗೆ ಬರಲು ಸಾಧ್ಯವಾಯಿತು. ಮನುಷ್ಯರನ್ನು ಮನುಷ್ಯರಿಂದ ದೂರ ಮಾಡುವ ಇಂತಹ ಹುನ್ನಾರಗಳನ್ನು ಖಂಡಿಸಬೇಕು’ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT