ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

357 ಕಡೆ ಕಾಂಗ್ರೆಸ್ ಮೌನ ಪ್ರತಿಭಟನೆ

ಭ್ರಷ್ಟಾಚಾರ ತೊಲಗಿಸಿ, ಬೆಂಗಳೂರು ಉಳಿಸಿ: ಫಲಕಗಳ ಪ್ರದರ್ಶನ
Last Updated 23 ಜನವರಿ 2023, 19:16 IST
ಅಕ್ಷರ ಗಾತ್ರ

ಬೆಂಗಳೂರು: ‘ಭ್ರಷ್ಟಾಚಾರ ತೊಲಗಿಸಿ, ಬೆಂಗಳೂರು ಉಳಿಸಿ’ ಘೋಷವಾಕ್ಯದೊಂದಿಗೆ ನಗರದ 357 ಸ್ಥಳಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಮೌನ ಪ್ರತಿಭಟನೆ ನಡೆಸಿದರು.

280 ವೃತ್ತಗಳು, 51 ಮೆಟ್ರೊ ನಿಲ್ದಾಣಗಳು ಹಾಗೂ 26 ಮೇಲ್ಸೇತುವೆ ಬಳಿ ಸೇರಿದ್ದ ಕಾರ್ಯಕರ್ತರು, ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ಶಾಸಕರು ಹಾಗೂ ಪಕ್ಷದ ಮುಖಂಡರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಟ್ರಿನಿಟಿ ವೃತ್ತದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ ಪಾಲ್ಗೊಂಡಿದ್ದರು.

‘ಬಿಜೆಪಿ ನೇತೃತ್ವದ ಸರ್ಕಾರ, ಶೇ 40 ಕಮಿಷನ್ ಸರ್ಕಾರ. ಈ ಸರ್ಕಾರದ ಭ್ರಷ್ಟಾಚಾರವನ್ನು ಜನರ ಎದುರು ತೆರೆದಿಡಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜನರ ಧ್ವನಿಯಾಗಿ ಕೆಲಸ ಮಾಡಲು ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವೆ’ ಎಂದು ಮುಖಂಡರು ಹೇಳಿದರು.

‘ಬೆಂಗಳೂರಿನ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು, ಮೇಲಿಂದ ಮೇಲೆ ಸಾವು–ನೋವುಗಳು ಸಂಭವಿಸುತ್ತಿವೆ. ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದು, ಅವರ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಕಸದ ಸಮಸ್ಯೆ ವಿಪರೀತವಾಗಿದ್ದು, ಅಭಿವೃದ್ಧಿ ಕೆಲಸಗಳೇ ಮರಿಚಿಕೆಯಾಗಿವೆ. ದುಡಿಯುವ ವರ್ಗದಿಂದ ಸುಲಿಗೆ ಮಾಡುವ ವ್ಯವಸ್ಥೆ ರಾಜ್ಯದಲ್ಲಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರೂ ಜೀವನ ನಡೆಸುವುದೇ ಕಷ್ಟವಾಗಿದೆ’ ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಮಾತನಾಡಿ, ‘ಕೆಲ ದಿನಗಳ ಹಿಂದೆ ಬೀದಿಬದಿ ವ್ಯಾಪಾರಿಗಳ ಸಮಾವೇಶದಲ್ಲಿ ಭಾಗವಹಿಸಿದ್ದೆ. ಅವರ ವ್ಯಾಪಾರಕ್ಕೆ ನಿತ್ಯವೂ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಬೀದಿ ವ್ಯಾಪಾರಿಗಳಿಂದ ತಿಂಗಳಿಗೆ ಒಂದು ಕೋಟಿಯಷ್ಟು ಹಣ ಸುಲಿಗೆ ಮಾಡಲಾಗುತ್ತಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT