ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಬೇಟೆಗೆ ಕಾಂಗ್ರೆಸ್‌ ತಂತ್ರಗಾರಿಕೆ

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪೂರ್ವ ತಯಾರಿ l ತಂತ್ರಗಾರನಿಂದ ನೀಲನಕ್ಷೆ
Last Updated 16 ಆಗಸ್ಟ್ 2022, 20:28 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಜ್ಜುಗೊಳ್ಳುವ ಉದ್ದೇಶದಿಂದ ರೂಪಿಸಿ, ಅಳವಡಿಸಿಕೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ರಾಜ್ಯ ಕಾಂಗ್ರೆಸ್‌ ನಾಯಕರ ಮಹತ್ವದ ಸಭೆ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆಯಿತು.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ನೇತೃತ್ವದಲ್ಲಿ ಗೌಪ್ಯವಾಗಿ ನಡೆದ ಸಭೆಯಲ್ಲಿ ಚುನಾವಣಾ ತಂತ್ರಗಾರ ಸುನಿಲ್ ಕನುಗೋಳು ಸಿದ್ಧಪಡಿಸಿದ್ದ ನೀಲನಕ್ಷೆ ಬಗ್ಗೆ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿನ ಕೋಮು ಸಂಘರ್ಷಗಳ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಪಕ್ಷದ ನಾಯಕರು ಎಚ್ಚರಿಕೆ ವಹಿಸಬೇಕು. ಅನವಶ್ಯಕವಾಗಿವ್ಯತಿರಿಕ್ತ ಹೇಳಿಕೆ ನೀಡುವುದರಿಂದ ಗೊಂದಲಗಳು ಸೃಷ್ಟಿಯಾಗುತ್ತಿವೆ ಎನ್ನುವ ವಿಷಯ ಚರ್ಚೆಗೆ ಬಂದಿದೆ. ಇಂಥ ವಿಚಾರಗಳನ್ನು ಸಮರ್ಪಕವಾಗಿ ಎದುರಿಸುವುದು ಹಾಗೂ ವಿವಾದ ಆಗದ ರೀತಿ ಯಲ್ಲಿ ನೋಡಿಕೊಳ್ಳಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಕೋಮು ಗಲಭೆಗಳ ನಡೆದಿ ವೆ, ಆ ಗಲಭೆಗಳು ಚುನಾವಣೆಗಳಲ್ಲಿ ಯಾವ ರೀತಿಯ ಪರಿಣಾಮ ಬೀರಲಿವೆ ಎನ್ನುವ ಬಗ್ಗೆ ಪ್ರಾತ್ಯಕ್ಷಿಕೆಯನ್ನೂ ಸಭೆಯಲ್ಲಿ ನೀಡಲಾಗಿದೆ.

ರಾಜ್ಯದ 4 ವಿಭಾಗಗಳಲ್ಲಿ ಕಾಂಗ್ರೆಸ್‌ ಪಕ್ಷದ ಶಕ್ತಿ ಮತ್ತು ದೌರ್ಬಲ್ಯದ ಬಗ್ಗೆಯೂ ಸುನಿಲ್ ಮಾಹಿತಿ ನೀಡಿದ್ದಾರೆ. ಎಲ್ಲ ನಾಯಕರು ಒಗ್ಗಟ್ಟಿನಿಂದ ಹೋಗಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ನೀಡಬಾರದು‌. ಮುಂದಿನ ದಿನಗಳಲ್ಲಿ ವಲಯವಾರು ವಿಂಗಡಣೆ ಮಾಡಿ ಪ್ರಚಾರದ ತಂತ್ರಗಾರಿಕೆ ರೂಪಿಸಿ, ಒಬ್ಬೊಬ್ಬ ನಾಯಕರಿಗೆ ಜವಾಬ್ದಾರಿ ಹಂಚಬೇಕು. ಯಾವ ಭಾಗದಲ್ಲಿ ಯಾವ ವಿಷಯ ಮುಂದಿಟ್ಟುಕೊಂಡು ಪ್ರಚಾರ ಮಾಡಬೇಕು, ಎಲ್ಲೆಲ್ಲಿ–ಏನೇನು ಸರಿಪಡಿಸಿಕೊಳ್ಳಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿದೆ.

ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶೇ 40 ಕಮಿಷನ್‌ ಸರ್ಕಾರ ಎನ್ನುವುದು ಜನರ ಮನಸ್ಸಿನಲ್ಲಿದೆ. ಈ ಭಾವನೆ ಚುನಾವಣೆಯವರೆಗೆ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡಬೇಕು. ಬಿಜೆಪಿ ಸಚಿವರು, ಶಾಸಕರು ಸರ್ಕಾರದ ವಿರುದ್ಧ ಮಾತನಾಡುತ್ತಿರುವುದನ್ನೂ ಲಾಭ ಮಾಡಿಕೊಳ್ಳಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಷಯ ಮುಂದಿಟ್ಟು ಮಹಿಳಾ ಮತದಾರರನ್ನು ತಲುಪಲು ಕಾರ್ಯ ತಂತ್ರ ರೂಪಿಸಬೇಕು ಎಂದೂ ಸಲಹೆ ನೀಡಿದ್ದಾರೆ. ಪ್ರವಾಹದಿಂದ ಆಗಿರುವ ಹಾನಿಗೆ ಸರ್ಕಾರ ಸರಿ ಯಾಗಿ ಸ್ಪಂದಿಸಿಲ್ಲ. ಈ ವಿಚಾರದ ಮೂಲಕ ಸ್ಥಳೀಯ ನಾಯಕರು ಜನರ ಬಳಿ ತಲುಪಬೇಕು. ಸೆ. 15ರ ವೇಳೆಗೆ ಇನ್ನೊಂದು ಸಮೀಕ್ಷಾ ವರದಿ ಬರಲಿದ್ದು, ಆಗ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿ, ನಿರ್ಣಯ ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ನಾಯಕರಾದ ಎಚ್.ಕೆ. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT