ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಬ್ರೂಯಿ ಜಾಗದಲ್ಲಿ ‘ಕಾನ್‌ಸ್ಟಿಟ್ಯೂಷನ್‌ ಕ್ಲಬ್‌’?

ವಿಧಾನಮಂಡಲ ಸಂಸ್ಥೆಗಳ ಸಭೆ: ಪಾರಂಪರಿಕ ಕಟ್ಟಡದಲ್ಲಿ ಶಾಸಕರ, ಮಾಜಿ ಶಾಸಕರ ಮನರಂಜನಾ ಕ್ಲಬ್‌ ಪ್ರಸ್ತಾವ
Last Updated 20 ಸೆಪ್ಟೆಂಬರ್ 2021, 21:39 IST
ಅಕ್ಷರ ಗಾತ್ರ

ಬೆಂಗಳೂರು:ಪಾರಂಪರಿಕ ಕಟ್ಟಡವಾದ ಬಾಲಬ್ರೂಯಿ ಜಾಗದಲ್ಲಿ ಶಾಸಕರಿಗಾಗಿ ‘ಕಾನ್‌ಸ್ಟಿಟ್ಯೂಷನ್‌ ಕ್ಲಬ್‌’ (ಶಾಸಕರ ಮತ್ತು ಮಾಜಿ ಶಾಸಕರ ಮನರಂಜನಾ ಕ್ಲಬ್‌) ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ವಿಧಾನಸೌಧದಲ್ಲಿ ಸೋಮವಾರ ನಡೆದ ವಿಧಾನಮಂಡಲ ಸಂಸ್ಥೆಗಳ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆ ಕಾರ್ಯದರ್ಶಿ ಕೆ. ವಿಶಾಲಕ್ಷಿ (ಪ್ರಭಾರ) ಇದ್ದರು.

ಬಾಲಬ್ರೂಯಿ ಜಾಗದಲ್ಲಿ ‘ಕಾನ್‌ಸ್ಟಿಟ್ಯೂಷನ್‌ ಕ್ಲಬ್‌’ ಮಾಡುವ ಪ್ರಸ್ತಾವವನ್ನು ವಿಧಾನ ಪರಿಷತ್‌ಸದಸ್ಯರೊಬ್ಬರು ಸರ್ಕಾರಕ್ಕೆ ಸಲ್ಲಿಸಿದ್ದರು. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದ್ದು, ಕ್ಲಬ್‌ ಮಾಡಲು ಸಹಮತ ವ್ಯಕ್ತವಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಆದರೆ, ತನ್ನ ವ್ಯಾಪ್ತಿಯಲ್ಲಿರುವ ಈ ಕಟ್ಟಡವನ್ನು ಕ್ಲಬ್‌ ಮಾಡಲು ಅವಕಾಶ ಇಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಸ್ಪಷ್ಟ ಅಭಿಪ್ರಾಯ ನೀಡಿದೆ. ಈ ಪ್ರಸ್ತಾವದ ವಿರುದ್ಧ ಹಿಂದೊಮ್ಮೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಆಗಿತ್ತು. ಆಗ ಕ್ಲಬ್‌ ಮಾಡುವ ಉದ್ದೇಶ ಇಲ್ಲ ಎಂದು ಕೋರ್ಟ್‌ಗೆ ಸರ್ಕಾರ ಮಾಹಿತಿ ನೀಡಿತ್ತು ಎಂದೂ ಮೂಲಗಳು ಹೇಳಿವೆ.

ಹದಿನಾಲ್ಕು ಎಕರೆ ಪ್ರದೇಶದಲ್ಲಿರುವ ಬಾಲಬ್ರೂಯಿ ಬೆಂಗಳೂರಿನ ಪ್ರಮುಖ ಪಾರಂಪರಿಕ ಕಟ್ಟಡಗಳಲ್ಲಿ ಒಂದು. ರಾಜ್ಯ ಸರ್ಕಾರಿ ಒಡೆತನದಲ್ಲಿರುವ ಈ ಕಟ್ಟಡದಲ್ಲಿ ನೊಬೆಲ್‌ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್‌, ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ತಂಗಿದ್ದ ದಾಖಲೆಯಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಗಣ್ಯರು ಈ ಕಟ್ಟಡದಲ್ಲಿ ತಂಗಿದ್ದರು.

ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಈ ಬಂಗಲೆಯೇ ಅಧಿಕೃತ ನಿವಾಸವಾಗಿತ್ತು. 1850ರಲ್ಲಿ ಬೆಂಗಳೂರಿನ ಮುಖ್ಯ ಕಮಿಷನರ್‌ ಆಗಿದ್ದ ಲಾರ್ಡ್‌ ಕಬ್ಬನ್‌ ಅವರ ಅಧಿಕೃತ ನಿವಾಸವಾಗಿದ್ದ ಹೆಗ್ಗಳಿಕೆಯೂ ಈ ಕಟ್ಟಡಕ್ಕೆ ಇದೆ. ಕುಮಾರಕೃಪದ ನಂತರ ಅತಿ ಹೆಚ್ಚು ಬೇಡಿಕೆ ಇರುವ ಈ ಅತಿಥಿಗೃಹ ಇಂದಿಗೂ ಸರ್ಕಾರಿ ಗಣ್ಯರಿಗೆ ವಸತಿ ನೀಡುತ್ತಿದೆ.

ಈ ಕಟ್ಟಡದ ಸದ್ಯ ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣ ತನಿಖೆ ನಡೆಸುವತಂಡ ಕಾರ್ಯನಿರ್ವಹಿಸುತ್ತಿದೆ. ಈ ಕಟ್ಟಡದ ಹಿಂಭಾಗದಲ್ಲಿ ಮುಖ್ಯ ಕಾರ್ಯದರ್ಶಿಯವರ ಅಧಿಕೃತ ನಿವಾಸವಿದೆ. ಇದೇ ಕಟ್ಟಡವನ್ನು ಶಾಸಕರ ಸಂವಿಧಾನ ಕ್ಲಬ್‌ ಆಗಿ ಪರಿವರ್ತಿಸುವ ಚರ್ಚೆ 15 ವರ್ಷಗಳಿಂದ ಚಾಲ್ತಿಯಲ್ಲಿದೆ.

ವಿಧಾನಸಭಾಧ್ಯಕ್ಷರಾಗಿ ಈಹಿಂದೆ ಕೆಲಸ ಮಾಡಿದ ಎಂ.ವಿ. ವೆಂಕಟಪ್ಪ, ಕೆ.ಆರ್‌. ರಮೇಶ್‌ ಕುಮಾರ್‌, ಕೃಷ್ಣ, ಜಗದೀಶ ಶೆಟ್ಟರ್‌, ಕೆ.ಜಿ.ಬೋಪಯ್ಯ, ಕಾಗೋಡು ತಿಮ್ಮಪ್ಪ, ಕೆ.ಬಿ. ಕೋಳಿವಾಡ ಅವರ ಅಧ್ಯಕ್ಷತೆಯಲ್ಲಿ ಬಾಲಬ್ರೂಯಿ ಅತಿಥಿ ಗೃಹದಲ್ಲಿ ಕ್ಲಬ್‌ ಸ್ಥಾಪಿಸುವ ಕುರಿತಂತೆ ಸಾಕಷ್ಟು ಸಭೆಗಳು ನಡೆದಿದ್ದವು. ಅದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಅದನ್ನು ಕೈಬಿಟ್ಟು ಕಾರ್ಲ್‌ಟನ್‌ ಭವನದಲ್ಲಿ ಕ್ಲಬ್‌ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ, ನಂತರ ಈ ಯೋಜನೆ ನನೆಗುದಿಗೆ ಬಿದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT