ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ದೇಶದ ಅಧಿಪತಿ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ರಾಷ್ಟ್ರಪತಿ, ಪ್ರಧಾನಿಗೆ ಸಂವಿಧಾನ ಚರ್ಚೆಯ ವರದಿ
Last Updated 17 ಮಾರ್ಚ್ 2020, 2:23 IST
ಅಕ್ಷರ ಗಾತ್ರ

ಬೆಂಗಳೂರು: ‘ಸೌರಮಂಡಲಕ್ಕೆ ಸೂರ್ಯನೇ ಅಧಿಪತಿ. ನಮ್ಮ ದೇಶಕ್ಕೆ ಅಧಿಪತಿ ಸಂವಿಧಾನ. ಸೌರಮಂಡಲದಲ್ಲಿ ನವಗ್ರಹಗಳಿವೆ. ಅದೇ ರೀತಿ ಸಂವಿಧಾನಕ್ಕೆ ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ ಸಮಭಾವ, ಪ್ರಜಾಸತ್ತಾತ್ಮಕ, ಗಣರಾಜ್ಯ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳೆಂಬಒಂಬತ್ತು ಆದರ್ಶಗಳಿವೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ವಿಧಾನಸಭೆಯಲ್ಲಿ ಸಂವಿಧಾನ ಕುರಿತು ಸಮಾರೋಪ ಭಾಷಣ ಮಾಡಿದ ಅವರು, ‘ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನವು ಇರುವುದರಿಂದ ನಾವಿದ್ದೇವೆ ಎನ್ನುವುದು ನನ್ನ ಪ್ರಾಮಾಣಿಕ ತಿಳುವಳಿಕೆ. ಸಂವಿಧಾನದಿಂದಾಗಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತಾಗಿದೆ’ ಎಂದರು.

‘ಈ ನಿಟ್ಟಿನಲ್ಲಿ ನಾವು ಶಿಕ್ಷಣ, ಆರೋಗ್ಯ, ಆಡಳಿತ, ನ್ಯಾಯ ವಿತರಣೆ ವ್ಯವಸ್ಥೆ, ರಾಜಕೀಯ ಶಿಕ್ಷಣ, ಮೀಸಲಾತಿ ನೀತಿ ರೂಪಿಸಿಕೊಂಡಿದ್ದೇವೆ. ಇಂತಹ ಶಿಸ್ತು ಬದ್ಧ ವ್ಯವಸ್ಥೆ ರೂಪುಗೊಂಡಿರುವುದು ನಮ್ಮ ಸಂವಿಧಾನದ ಸದಾಶಯಗಳಾದ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯಗಳಿಂದ ಹಾಗೂ ಸಂವಿಧಾನದ 448 ವಿಧಿಗಳ ನೀತಿಗಳಿಂದ ಎಂದರೆ ಅತಿಶಯೋಕ್ತಿಯಲ್ಲ’ ಎಂದೂ ಕಾಗೇರಿ ಹೇಳಿದರು.ಸಂವಿಧಾನ ಕುರಿತು ನಡೆದ ಚರ್ಚೆಯ ಎಲ್ಲ ಸಲಹೆ ಸೂಚನೆಗಳನ್ನು ಕ್ರೂಡೀಕರಿಸಿ ರಾಷ್ಟ್ರಪತಿ, ಪ್ರಧಾನಮಂತ್ರಿ, ಲೋಕಸಭಾಧ್ಯಕ್ಷರು ಮತ್ತು ನ್ಯಾಯಾಂಗ ಸೇರಿದಂತೆ ಎಲ್ಲ ಸಂವಿಧಾನಾತ್ಮಕ ಸಂಸ್ಥೆಗಳಿಗೆ ತಲುಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಅವರು ಹೇಳಿದರು.

‘ಅಂಬೇಡ್ಕರ್‌ಗೆ ಬ್ರಾಹ್ಮಣ ಗುರುಗಳು’

‘ಅಂಬೇಡ್ಕರ್‌ ಅವರಿಗೆ ಬಾಲ್ಯದಲ್ಲಿ ಆತ್ಮಸ್ಥೈರ್ಯ ತುಂಬಿ ಮುನ್ನಡೆಸಿದ ಇಬ್ಬರು ಗುರುಗಳು ಬ್ರಾಹ್ಮಣರಾಗಿದ್ದರು. ಈ ಗುರುಗಳು ಮೂಲತಃ ಅಸ್ಪೃಶ್ಯತೆ ವಿರೋಧಿಗಳಾಗಿದ್ದರು’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪೆಂಡ್ಸೆ ಮತ್ತು ಅಂಬೇಡ್ಕರ್‌ ಅವರು ಭೀಮರಾವ್‌ ಅಂಬೇಡ್ಕರ್‌ ಅವರ ಗುರುಗಳಾಗಿದ್ದರು. ಅಸ್ಪೃಶ್ಯರಾಗಿದ್ದ ಭೀಮರಾವ್‌ಗೆ ಗುರುಗಳಾದ ಅಂಬೇಡ್ಕರ್‌ ತಮ್ಮ ಹೆಸರನ್ನೇ ಇಟ್ಟಿದ್ದರು. ಇವರಿಬ್ಬರೂ ಬಾಲಕ ಅಂಬೇಡ್ಕರ್‌ ಮೇಲೆ ಪ್ರಭಾವ ಬೀರಿದ್ದರು ಎಂದು ಸಂವಿಧಾನದ ಕುರಿತ ಚರ್ಚೆಯಲ್ಲಿ ಹೇಳಿದ್ದರು.

ಗಾಂಧಿಯವರು ಆರಂಭದಲ್ಲಿ ಅಂಬೇಡ್ಕರ್‌ ಅವರ ಜ್ಞಾನ, ಪ್ರತಿಭೆ ನೋಡಿ ಬ್ರಾಹ್ಮಣ ಎಂದೇ ಭಾವಿಸಿದ್ದರು ಎಂದು ಸಿದ್ದರಾಮಯ್ಯ ಹೇಳಿದರು. ಆಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ರಮೇಶ್‌ ಕುಮಾರ್‌, ‘ಪರಮೇಶ್ವರ್ ಅವರನ್ನು ನಾನೂ ಬಹಳ ದಿನ ಬ್ರಾಹ್ಮಣ ಅಂದುಕೊಂಡಿದ್ದೆ’ ಎಂದಾಗ, ಇಡಿ ಸದನದಲ್ಲಿ ನಗು ತುಂಬಿತ್ತು.

‘ಬ್ರಾಹ್ಮಣರ ಬುದ್ಧಿವಂತಿಕೆ ಎಲ್ಲರಿಗೂ ಬರಬೇಕು. ಬ್ರಾಹ್ಮಣಿಕೆ ಬರಬಾರದು’ ಎಂದು ಸಿದ್ದರಾಮಯ್ಯ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಆರ್‌.ವಿ.ದೇಶಪಾಂಡೆ, ಬ್ರಾಹ್ಮಣರು ಯಾರ ಶತ್ರುಗಳೂ ಅಲ್ಲ. ಯಾವುದೇ ಜಾತಿಯಲ್ಲೇ ಹುಟ್ಟಿರಲಿ, ಮನುಷ್ಯತ್ವದಿಂದ ಬಾಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT