ಬೆಂಗಳೂರು: ಇನ್‌ಸ್ಟ್ರಕ್ಟ್ ವತಿಯಿಂದ ಇದೇ 12 ಮತ್ತು 13 ರಂದು ಕನಕಪುರ ರಸ್ತೆಯಲ್ಲಿರುವ ಪ್ರೆಸ್ಟೀಜ್ ಶ್ರೀಹರಿ ಖೋಡೆ ಸೆಂಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ‘ನಿರ್ಮಾಣ–2024’ ಅಂತರರಾಷ್ಟ್ರೀಯ ಸಮ್ಮೇಳನ’ ನಡೆಯಲಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮ್ಮೇಳನ ಅಧ್ಯಕ್ಷ ಸಿ.ಆರ್. ಪಾರ್ಥಸಾರಥಿ, ‘ಭಾರತ, ರಸ್ತೆ ಮತ್ತು ಹೆದ್ದಾರಿ, ರೈಲು, ಜಲಮಾರ್ಗಗಳು, ಜಲವಿದ್ಯುತ್ ಸ್ಥಾವರಗಳು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಈ ಹಂತದಲ್ಲಿ ಡಿಜಿಟಲೀಕರಣದ ಜೊತೆಗೆ ತಾಂತ್ರಿಕತೆ ಯೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಿರ್ಮಾಣ ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಹೇಳಿದರು.
‘ಮೂಲಸೌಕರ್ಯ ಅಭಿವೃದ್ಧಿಯ ವಲಯ ಮತ್ತು ನಿರ್ಮಾಣ ಸಲಕರಣೆ ಉದ್ಯಮದಿಂದ ಪ್ರತಿನಿಧಿಗಳಿಗೆ ಮತ್ತು ಸಿವಿಲ್ ಎಂಜಿನಿಯರಿಂಗ್ ವೃತ್ತಿಪರರಿಗೆ ಜ್ಞಾನ ಒದಗಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ’ ಎಂದರು. ‘ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಟಿ.ಜಿ.ಸೀತಾರಾಮ್ ಅವರು ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ’ ಎಂದರು. ಸುದ್ದಿಗೋಷ್ಠಿಯಲ್ಲಿ ಇನ್‌ಸ್ಟ್ರಕ್ಟ್‌ನ ಅಧ್ಯಕ್ಷ ಎ.ಆರ್. ಶೇಷಾದ್ರಿ, ಸಂಘಟನಾ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಬಿ.ವಿ. ಉಪಸ್ಥಿತರಿದ್ದರು.