ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಚೀಲಕ್ಕೆ ನಕಾರ: ₹ 15 ಸಾವಿರ ಪರಿಹಾರ

Last Updated 8 ಜೂನ್ 2022, 20:20 IST
ಅಕ್ಷರ ಗಾತ್ರ

ಬೆಂಗಳೂರು: ಸ್ಟೇಷನರಿ ವಸ್ತು ಖರೀದಿಸಿದ ಗ್ರಾಹಕರೊಬ್ಬರಿಗೆ ಉಚಿತ ಕೈಚೀಲ ನೀಡಲು ನಿರಾಕರಿಸಿ, ಪ್ರತ್ಯೇಕ ಶುಲ್ಕ ವಿಧಿಸಿದ ಗಾಂಧಿನಗರದ ಪ್ರಖ್ಯಾತ ಮಾರಾಟ ಮಳಿಗೆದಾರರಿಗೆಬೆಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ₹ 15 ಸಾವಿರ ಪರಿಹಾರವನ್ನು ದಂಡದ ರೂಪದಲ್ಲಿ ವಿಧಿಸಿದೆ.

ಈ ಕುರಿತಂತೆ ಗಾಂಧಿನಗರ ನಿವಾಸಿ ವಕೀಲ ವಿ.ಕಾಂತರಾಜ್‌ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಎಂ.ಎಸ್.ರಾಮಚಂದ್ರ ಹಾಗೂ ಸದಸ್ಯರಾದ ನಂದಿನಿ ಎಚ್.ಕುಂಬಾರ ಮತ್ತು ಚಂದ್ರಶೇಖರ ಎಸ್‌.ನೂಲಾ ಅವರಿದ್ದ ಪೀಠವು 2022ರ ಮೇ 16ರಂದು ತನ್ನ ಆದೇಶ ಪ್ರಕಟಿಸಿದೆ.

ದೂರುದಾರ ಕಾಂತರಾಜ್‌ ತಮ್ಮ ಸ್ನೇಹಿತರ ಜೊತೆ 2019ರ ಡಿಸೆಂಬರ್ 17ರಂದು ಮಳಿಗೆಯಲ್ಲಿ ಒಂಬತ್ತು ಬಗೆಯ ವಿವಿಧ ನಿತ್ಯ ಉಪಯೋಗಿ ಸಾಮಾನುಗಳನ್ನು ಖರೀದಿಸಿದ್ದರು. ಇದಕ್ಕೆ ₹ 775 ಪಾವತಿಸಿದ್ದರು. ಸಾಮಾನುಗಳನ್ನು ಭರ್ತಿ ಮಾಡಿ ಒಯ್ಯಲು ಕೈಚೀಲ ಕೇಳಿದ್ದಕ್ಕೆ ಅಂಗಡಿಯವರು ಉಚಿತವಾಗಿ ನೀಡಲು ನಿರಾಕರಿಸಿದ್ದರು. ಈ ಧೋರಣೆಯನ್ನು ಪ್ರತಿಭಟಿಸಿದಾಗ್ಯೂ ಪ್ರತ್ಯೇಕವಾಗಿ ₹ 16 ಶುಲ್ಕ ವಿಧಿಸಿದ್ದರು.

ಇದರ ವಿರುದ್ಧ ಕಾಂತರಾಜ್ ಆಯೋಗಕ್ಕೆ 2019ರ ಡಿಸೆಂಬರ್ 21ರಂದು ದೂರು ನೀಡಿದ್ದರು. ವಿಚಾರಣೆ ನಡೆಸಿದ ಆಯೋಗವು ಗ್ರಾಹಕರ ರಕ್ಷಣಾ ಕಾಯ್ದೆ–1986ರ ಕಲಂ 12ರ ಅನುಸಾರ; ದೂರುದಾರರಿಗೆ ₹ 16, ಕೈಚೀಲ ನೀಡಲು ನಿರಾಕರಿಸಿದ್ದಕ್ಕೆ ₹ 5 ಸಾವಿರ, ಗ್ರಾಹಕರಿಗೆ ನೀಡಲಾಗುವ ಸೇವೆಯಲ್ಲಿ ಉಂಟಾದ ವ್ಯತ್ಯಯಕ್ಕೆ ₹ 3 ಸಾವಿರ, ದೂರುದಾರರಿಗೆ ಆಗಿರುವ ಮಾನಸಿಕ ನೋವು ಮತ್ತು ದಾವೆಗೆ ತಗುಲಿದ ವೆಚ್ಚಕ್ಕೆ ₹ 2 ಸಾವಿರ ಹಾಗೂ ಗ್ರಾಹಕ ಕಾನೂನು ಸೇವೆಗಳ ನೆರವಿಗೆ ₹ 5 ಸಾವಿರ ಸೇರಿ ಒಟ್ಟು 15,061 ಮೊತ್ತದ ಪರಿಹಾರ ನೀಡುವಂತೆ ಪ್ರತಿವಾದಿಗಳಿಗೆ ಆದೇಶಿಸಿದೆ.

‘ಆದೇಶ ಪ್ರಕಟವಾದ 45 ದಿನಗಳ ಒಳಗೆ ಈ ಪರಿಹಾರ ನೀಡಬೇಕು. ದೂರು ದಾಖಲಾದ ದಿನದಿಂದ ಪ್ರಾರಂಭಿಸಿ ಪರಿಹಾರ ವಿತರಿಸುವ ದಿನಕ್ಕೆ ಸರಿಯಾಗಿ ಒಟ್ಟು ಮೊತ್ತಕ್ಕೆ ವಾರ್ಷಿಕ ಶೇ 6ರಷ್ಟು ಬಡ್ಡಿ ನೀಡಬೇಕು‘ ಎಂದು ಆದೇಶದಲ್ಲಿ ವಿವರಿಸಲಾಗಿದೆ. ದೂರುದಾರರ ಪರ ವಿ.ಶಿವಕುಮಾರ್ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT