ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್‌ಮಾರ್ಟ್‌ ತೆಕ್ಕೆಗೆ ಫ್ಲಿಪ್‌ಕಾರ್ಟ್‌

ಸಂಸ್ಥೆ ತೊರೆಯಲಿರುವ ಸಹ ಸ್ಥಾಪಕ ಸಚಿನ್‌ ಬನ್ಸಲ್‌
Last Updated 9 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಇ–ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್‌ನಲ್ಲಿನ ಶೇ 77ರಷ್ಟು ಪಾಲು ಬಂಡವಾಳವನ್ನು ₹ 1.07 ಲಕ್ಷ ಕೋಟಿಗೆ ಖರೀದಿಸಿರುವುದಾಗಿ ಅಮೆರಿಕದ ರಿಟೇಲ್‌ ದೈತ್ಯ ಸಂಸ್ಥೆ ವಾಲ್‌ಮಾರ್ಟ್‌ ಇಂಕ್‌ ಪ್ರಕಟಿಸಿದೆ.

ವಾಲ್‌ಮಾರ್ಟ್‌ ಇದುವರೆಗೆ ಸ್ವಾಧೀನಪಡಿಸಿಕೊಂಡಿರುವ ವಹಿವಾಟಿನಲ್ಲಿಯೇ ಇದು ಅತಿ ದೊಡ್ಡದು. ಇದರಿಂದ ಭಾರತದ ಇ–ಕಾಮರ್ಸ್ ಮಾರು
ಕಟ್ಟೆ ಪ್ರವೇಶಿಸಲು ಅದರ ಹಾದಿ ಸುಗಮವಾಗಲಿದೆ.

ಈ ಒಪ್ಪಂದದ ಫಲವಾಗಿ ಜಪಾನಿನ ಸಾಫ್ಟ್‌ಬ್ಯಾಂಕ್‌ ಕಾರ್ಪ್‌ ಗ್ರೂಪ್‌ ಫ್ಲಿಪ್‌ಕಾರ್ಟ್‌ನಿಂದ ಹೊರ ನಡೆಯಲಿದೆ. 11 ವರ್ಷಗಳಷ್ಟು ಹಳೆಯ ಫ್ಲಿಪ್‌ಕಾರ್ಟ್‌ನ ಒಟ್ಟಾರೆ ಮೌಲ್ಯವನ್ನು ₹1.39 ಲಕ್ಷ ಕೋಟಿ ಎಂದು ನಿಗದಿಪಡಿಸಲಾಗಿದೆ.

ವಾಲ್‌ಮಾರ್ಟ್‌ ವಶಕ್ಕೆ ಹೋಗುವುದರಿಂದ ಭವಿಷ್ಯದಲ್ಲಿ ಫ್ಲಿಪ್‌ಕಾರ್ಟ್‌ನ ವಹಿವಾಟು ಗಮನಾರ್ಹ ಚೇತರಿಕೆ ಕಾಣಲಿದೆ. ಈ ಸ್ವಾಧೀನ ಪ್ರಕ್ರಿಯೆ
ಯಲ್ಲಿ ಇತರ ಹೂಡಿಕೆದಾರರೂ ಪಾಲ್ಗೊಳ್ಳಲು ಅವಕಾಶ ಇದೆ.

ಇದರಿಂದ ವಾಲ್‌ಮಾರ್ಟ್‌ನ ಹೂಡಿಕೆ ಪಾಲು ಕಡಿಮೆಯಾಗಬಹುದು. ಆದರೂ, ಪಾಲು ಬಂಡವಾಳ ಗರಿಷ್ಠ ಮಟ್ಟದಲ್ಲಿಯೇ ಇರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಗೂಗಲ್‌ನ ಮೂಲ ಸಂಸ್ಥೆ ಅಲ್ಪಾಬೆಟ್‌ ಇಂಕ್‌ ಶೇ 15ರಷ್ಟು ಬಂಡವಾಳ ಖರೀದಿಸುವ ಸಾಧ್ಯತೆ ಇದೆ.

ಈ ಸ್ವಾಧೀನ ಪ್ರಕ್ರಿಯೆ ಜಾರಿಗೆ ಬರುತ್ತಿದ್ದಂತೆ, ಫ್ಲಿಪ್‌ಕಾರ್ಟ್‌ನ ಸಹ ಸ್ಥಾಪಕ ಸಚಿನ್‌ ಬನ್ಸಲ್‌ ಅವರು ಸಂಸ್ಥೆಯಿಂದ ಹೊರ ನಡೆಯಲಿದ್ದಾರೆ. ‘ಅಮೆಜಾನ್‌ ಡಾಟ್‌ಕಾಂ’ನಲ್ಲಿ ಉದ್ಯೋಗದಲ್ಲಿದ್ದ ಸಚಿನ್‌ ಮತ್ತು ಬಿನ್ನಿ ಬನ್ಸಲ್‌, 2007ರಲ್ಲಿ ಇದನ್ನು ಸ್ಥಾಪಿಸಿದ್ದರು.

ಪುಸ್ತಕಗಳ ಆನ್‌ಲೈನ್‌ ಮಾರಾಟದಿಂದ ವಹಿವಾಟು ಆರಂಭಿಸಲಾಗಿತ್ತು.

ವರ್ಷದ ಅತಿದೊಡ್ಡ ಸ್ವಾಧೀನ

ಭಾರತದಲ್ಲಿ ಈ ವರ್ಷ ನಡೆದ ಅತಿದೊಡ್ಡ ಸ್ವಾಧೀನ ಪ್ರಕ್ರಿಯೆ ಇದಾಗಿದೆ. ತನ್ನ ಪ್ರತಿಸ್ಪರ್ಧಿ ಸಂಸ್ಥೆ ಅಮೆಜಾನ್‌ಗೆ ತೀವ್ರ ಸ್ಪರ್ಧೆ ನೀಡಲೂ ಇದರಿಂದ ವಾಲ್‌ಮಾರ್ಟ್‌ಗೆ ಸಾಧ್ಯವಾಗಲಿದೆ.

₹ 1.54 ಲಕ್ಷ ಕೋಟಿ ಮೊತ್ತದ ವೊಡಾಫೋನ್‌ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್‌ ವಿಲೀನವು ದೇಶದಲ್ಲಿನ ಇದುವರೆಗಿನ ಅತಿದೊಡ್ಡ ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳಬೇಕಾಗಿದೆ.

ರೋಸ್ನೆಫ್ಟ್‌ ಮತ್ತು ಅದರ ಪಾಲುದಾರರು ಎಸ್ಸಾರ್‌ ಆಯಿಲ್‌ ಅನ್ನು ₹ 86,430 ಕೋಟಿಗೆ ಖರೀದಿಸಿದ್ದಾರೆ. ಇದು ದೇಶದಲ್ಲಿನ ಇದುವರೆಗಿನ ಅತಿದೊಡ್ಡ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT