ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ಕ್ಕಿಂತ ಹೆಚ್ಚು ಪ್ರಕರಣ, ಕಂಟೈನ್‌ಮೆಂಟ್‌ ವಲಯ: ಬಿಬಿಎಂಪಿ

ಕೋವಿಡ್‌: ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳಿಗೆ ಬಿಬಿಎಂಪಿ ಸಲಹೆ
Last Updated 13 ಜನವರಿ 2022, 19:52 IST
ಅಕ್ಷರ ಗಾತ್ರ

ಬೆಂಗಳೂರು: ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಮೂರಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾದರೆ ಏಳು ದಿನಗಳ ಕಾಲ ಆಯಾ ಸೀಮಿತ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯವನ್ನಾಗಿ ಘೋಷಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.

ನಗರದಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯ ಆಯುಕ್ತ ಗೌರವ ಗುಪ್ತ ತಿಳಿಸಿದ್ದಾರೆ.

ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳಿಗೆ (ಆರ್‌ಡಬ್ಲ್ಯುಎ) ಮತ್ತು ಅಪಾರ್ಟ್‌ಮೆಂಟ್‌ ಸಮುಚ್ಚಯ ಹಾಗೂ ವಸತಿ ಸೊಸೈಟಿಗಳಿಗೆ ಈ ಬಗ್ಗೆ ಹಲವು ಸಲಹೆಗಳನ್ನು ಸುತ್ತೋಲೆಯಲ್ಲಿ ಅವರು ನೀಡಿದ್ದಾರೆ.

ಮೂರಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುವ 100 ಮೀಟರ್‌ ಸುತ್ತಮುತ್ತಲಿನ ಪ್ರದೇಶ ಅಥವಾ ಆಯಾ ಮಹಡಿಯ ಮೇಲಿನ ಮತ್ತು ಕೆಳಗಿನ ಪ್ರದೇಶಗಳು ಅಥವಾ ಸಂಪೂರ್ಣ ಬ್ಲಾಕ್‌ ಅಥವಾ ಸಣ್ಣ ಅಪಾರ್ಟ್‌ಮೆಂಟ್‌ ಸಮುಚ್ಚಯಗಳನ್ನು ಕಂಟೈನ್‌ಮೆಂಟ್‌ ವಲಯವನ್ನಾಗಿ ಘೋಷಿಸಲಾಗುವುದು ಎಂದು ಆರ್‌ಡಬ್ಲ್ಯೂಎಗಳಿಗೆ ತಿಳಿಸಲಾಗಿದೆ.

ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಿದರೆ ಅಲ್ಲಿನ ಎಲ್ಲ ನಿವಾಸಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ವಿವರವಾದ ಸಂಪರ್ಕಿತರ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರು ಪರೀಕ್ಷೆಗೆ ಒಳಗಾಗುವುದು ಉತ್ತಮ. ಸೋಂಕು ಲಕ್ಷಣಗಳಿದ್ದರೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳ ಬೇಕು. ಪರೀಕ್ಷೆಯ ಫಲಿತಾಂಶ ಬರುವವರೆಗೂ ಎಲ್ಲ ಸಂಪರ್ಕಿತರು ಪ್ರತ್ಯೇಕವಾಗಿ ವಾಸಿಸಬೇಕು ಎಂದು ಸೂಚಿಸಲಾಗಿದೆ. ಸೋಂಕಿತ ವ್ಯಕ್ತಿ ವಾಸಿಸುವ ಸ್ಥಳದಲ್ಲಿ ಕ್ವಾರಂಟೈನ್‌ ಪೋಸ್ಟರ್‌ಗಳನ್ನು ಆರೋಗ್ಯ ಅಧಿಕಾರಿಗಳು ಅಂಟಿಸುತ್ತಾರೆ. ಸೋಂಕಿನ ಲಕ್ಷಣಗಳಿರುವ ವ್ಯಕ್ತಿಯ ಬಗ್ಗೆ ಅಥವಾ ಸೋಂಕು ದೃಢಪಟ್ಟ ವ್ಯಕ್ತಿಯ ಜತೆ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಬಗ್ಗೆ ನಿವಾಸಿ ಕ್ಷೇಮಾಭಿವೃದ್ಧಿ ಸಂಘವು ವಲಯ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು ಎಂದು ಕೋರಲಾಗಿದೆ.

ಯಾವುದೇ ನಿವಾಸಿ ಅಥವಾ ಕುಟುಂಬದ ಸದಸ್ಯರು ಅಂತರರಾಷ್ಟ್ರೀಯ ಪ್ರವಾಸ ಕೈಗೊಂಡಿದ್ದರೆ ಅಥವಾ ಕೇರಳ, ಮಹಾರಾಷ್ಟ್ರ, ಗೋವಾಕ್ಕೆ ತೆರಳಿದ್ದರೆ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಬೇಕು. ಕೋರಿಯರ್‌ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುವವರು ಮುಖ್ಯ ಗೇಟ್‌ ಬಳಿಯೇ ಸಂಬಂಧಪಟ್ಟವರಿಗೆ ಉತ್ಪನ್ನಗಳನ್ನು ವಿತರಿಸುವುದು ಉತ್ತಮ. 60 ವರ್ಷ ಮೇಲ್ಪಟ್ಟ ಎಲ್ಲ ವ್ಯಕ್ತಿಗಳು ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರ ಆರೋಗ್ಯದ ಮೇಲೆ ನಿಗಾವಹಿಸಬೇಕು. ಸೋಂಕಿತ ವ್ಯಕ್ತಿಗೆ ದೂರವಾಣಿ, ವಾಟ್ಸ್‌ಆ್ಯಪ್‌ ಮೂಲಕ ಸಂಪರ್ಕಿಸುವ ಮೂಲಕ ಆತ್ಮಸ್ಥೈರ್ಯ ತುಂಬಬೇಕು ಎಂದು ಸಲಹೆ ನೀಡಲಾಗಿದೆ.

ಕಂಟೈನ್‌ಮೆಂಟ್‌ ವಲಯಕ್ಕೆ ಪರಿಗಣಿಸಿರುವ ಅಂಶಗಳು

l ಮಹಡಿಯಲ್ಲಿ ಒಂದು ಪ್ರಕರಣ ಪತ್ತೆಯಾದರೆ ಆಯಾ ಮನೆ ಹಾಗೂ ಮಹಡಿಯೊಂದರಲ್ಲಿ ಮೂರು ಪ್ರಕರಣಗಳು ವರದಿಯಾದರೆ ಇಡೀ ಮಹಡಿಯನ್ನು ಕಂಟೈನ್‌ಮೆಂಟ್‌ ವಲಯವನ್ನಾಗಿ ಘೋಷಿಸಲಾಗುವುದು.

l ಒಂದು ಕಟ್ಟಡದಲ್ಲಿ 10 ಪ್ರಕರಣಗಳು ವರದಿಯಾದರೆ ಒಂದು ಮಹಡಿ ಅಥವಾ ವಿವಿಧ ಮಹಡಿಗಳು ಅಥವಾ ಇಡೀ ಕಟ್ಟಡವನ್ನು ಕಂಟೈನ್‌ಮೆಂಟ್‌ ವಲಯವನ್ನಾಗಿ ಘೋಷಿಸಲಾಗುವುದು.

l 50ರಿಂದ 100 ಮನೆಗಳಿರುವಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ 50 ಪ್ರಕರಣಗಳು ವರದಿಯಾದರೆ ಅಥವಾ 100ಕ್ಕೂ ಹೆಚ್ಚು ಮನೆಗಳಿರುವ ಕಟ್ಟಡದಲ್ಲಿ 100 ಪ್ರಕರಣಗಳು ವರದಿಯಾದರೆ ಕಂಟೈನ್‌ಮೆಂಟ್‌ ವಲಯಕ್ಕೆ ಪರಿಗಣಿಸಲಾಗುವುದು.

lಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಎಲ್ಲರೂ ಸಾಮಾನ್ಯವಾಗಿ ಉಪಯೋಗಿಸುವ ರೈಲಿಂಗ್ಸ್‌ ಮುಂತಾದ ಸ್ಥಳಗಳನ್ನು ಸೋಡಿಯಂ ಹೈಪೊಕ್ಲೊರೈಟ್‌, ಬ್ಲೀಚಿಂಗ್‌ ಪುಡಿ ಅಥವಾ ಇತರ ಯಾವುದಾದರೂ ಪರಿಣಾಮಕಾರಿ ಸೋಂಕು ನಿವಾರಕಗಳಿಂದ ಸ್ವಚ್ಛಗೊಳಿಸಬೇಕು. ಈ ಮೂಲಕ ನೈರ್ಮಲ್ಯ ಕಾಪಾಡಿಕೊಳ್ಳಬೇಕು.

lಉದ್ಯಾನಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಸ್ಥಳಗಳಲ್ಲಿ ಸಭೆಗಳನ್ನು ನಡೆಸಲು ಬಳಸಬಾರದು.

l ಲಸಿಕೆ ಪಡೆಯುವಂತೆ ಮತ್ತು ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುವಂತೆ ಅರಿವು ಮೂಡಿಸಲು ನಿವಾಸಿಗಳ ಕ್ಷೇಮಾಭಿವೃದ್ಧಿಗಳ ಸಂಘಗಳು ವಾಟ್ಸ್‌ಆ್ಯಪ್‌, ಟೆಲಿಗ್ರಾಂ ಮುಂತಾದವುಗಳನ್ನು ಬಳಸಿಕೊಳ್ಳಬೇಕು. ಬಿಬಿಎಂಪಿ ಹಂಚಿಕೊಳ್ಳುವ ಅಧಿಕೃತ ಮಾಹಿತಿಯನ್ನು ಮಾತ್ರ ನೀಡಬೇಕು.

lಜಿಮ್‌, ಕ್ರೀಡಾ ಸೌಲಭ್ಯಗಳು, ಈಜುಕೊಳ ಬಳಕೆ ತಪ್ಪಿಸಬೇಕು.

lಬಯಲು ಮತ್ತು ಆಟವಾಡುವ ಸ್ಥಳಗಳಲ್ಲಿ ಮಕ್ಕಳು ಮಾಸ್ಕ್‌ ಧರಿಸುವಂತೆ ಪೋಷಕರು ಮತ್ತು ಸಂಘದ ಸದಸ್ಯರು ಎಚ್ಚರವಹಿಸಬೇಕು.

lಕ್ಲಬ್‌ ಹೌಸ್‌ ಅಥವಾ ಸಭಾಂಗಣಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ತಪ್ಪಿಸಬೇಕು. ಅನಿವಾರ್ಯವಾಗಿ ನಡೆದರೂ 50 ಸದಸ್ಯರನ್ನು ಮೀರಬಾರದು.

lಲಿಫ್ಟ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.

ವಾರಾಂತ್ಯ ಕರ್ಫ್ಯೂಗೆ ವಿರೋಧ

ಬೆಂಗಳೂರು: ವಾರಾಂತ್ಯ ಕರ್ಫ್ಯೂ ರದ್ದುಪಡಿಸುವಂತೆ ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

‘ಶೀಘ್ರ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ವಾರಾಂತ್ಯ ಕರ್ಫ್ಯೂ ರದ್ದುಪಡಿಸುವಂತೆ ಕೋರುತ್ತೇವೆ. ಸರ್ಕಾರ ಯಾವುದೇ ರೀತಿ ಕ್ರಮಕೈಗೊಳ್ಳದಿದ್ದರೆ ಮುಂದಿನ ವಾರದಿಂದ ಹೋಟೆಲ್‌ಗಳ ಹೊರಗೆ ವಹಿವಾಟು ನಡೆಸುವುದು ಅನಿವಾರ್ಯವಾಗುತ್ತದೆ’ ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್‌ ಗುರುವಾರ ತಿಳಿಸಿದರು.

‘ಈಗಾಗಲೇ ಹೋಟೆಲ್‌ ಉದ್ಯಮ ತೀವ್ರ ಸಂಕಷ್ಟದ ಸ್ಥಿತಿಯಲ್ಲಿದೆ. ಆದರೆ, ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸುವ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಅವೈಜ್ಞಾನಿಕ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಹೀಗಾಗಿ, ಸರ್ಕಾರಕ್ಕೆ ಒಂದು ವಾರ ಗಡುವು ನೀಡುತ್ತಿದ್ದೇವೆ. ಇದೇ ಶನಿವಾರ ಮತ್ತು ಭಾನುವಾರ ಕರ್ಫ್ಯೂ ನಿಯಮಗಳನ್ನು ಪಾಲಿಸಲಾಗುವುದು’ ಎಂದು ತಿಳಿಸಿದರು.

‘ಎಲ್ಲ ಹೋಟೆಲ್ ಮಾಲೀಕರ ಜತೆ ಗುರುವಾರ ಸಭೆ ಮಾಡಿದ್ದೇವೆ. ವಾರಾಂತ್ಯದ ಕರ್ಫ್ಯೂ ವಿರುದ್ಧ ಕಾನೂನು ಹೋರಾಟ ಮಾಡುವ ಬಗ್ಗೆಯೂ ಚಿಂತನೆ ಮಾಡಲಾಗಿದೆ. ಬೀದಿ ವ್ಯಾಪಾರಿಗಳಿಗೆ ಅವಕಾಶ ನೀಡಿರುವುದರಿಂದ ನಾವು ಸಹ ಹೋಟೆಲ್‌ ಹೊರಗೆ ವಹಿವಾಟು ನಡೆಸುತ್ತೇವೆ’ ಎಂದು ಹೇಳಿದರು.

‘ಸರ್ಕಾರಕ್ಕೆ ಲೈಸನ್ಸ್‌ ಶುಲ್ಕ ಮತ್ತು ತೆರಿಗೆಯನ್ನು ನಿರಂತರವಾಗಿ ಪಾವತಿಸಬೇಕು. ಆದರೆ, ಹೋಟೆಲ್‌ ಉದ್ಯಮದ ಬಗ್ಗೆ ಸರ್ಕಾರ ಈಗಲಾದರೂ ಕಾಳಜಿ ತೋರದಿದ್ದರೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT