ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡದ ಡಿಜಿಟಲ್‌ ಲೋಕ ವಿಸ್ತರಿಸಲು ಕೈಜೋಡಿಸಿ’

ಕನ್ನಡಿಗರಲ್ಲಿ ಓಂಶೀವಪ್ರಕಾಶ್‌ ಮನವಿ
Last Updated 10 ನವೆಂಬರ್ 2019, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ತಂತ್ರಜ್ಞಾನದಲ್ಲಿ ಆಗಿರುವ ಇತ್ತೀಚಿನ ಬೆಳವಣಿಗೆಗಳು ಕನ್ನಡದಲ್ಲೇ ಡಿಜಿಟಲ್‌ ಲೋಕವನ್ನು ಕಟ್ಟಿಕೊಳ್ಳುವ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಕನ್ನಡದಲ್ಲಿ ಅರಿವಿನ ಮೇರೆಗಳನ್ನು ವಿಸ್ತರಿಸುವ ಈ ಕೈಂಕರ್ಯದಲ್ಲಿ ಆಸಕ್ತ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು’ ಎಂದು ಸಂಚಿ ಪ್ರತಿಷ್ಠಾನದ ಓಂಶಿವಪ್ರಕಾಶ್‌ ಮನವಿ ಮಾಡಿದರು.

ಮುನ್ನೋಟ ಬಳಗದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅರಿಮೆ ಕಾರ್ಯಕ್ರಮದಲ್ಲಿ ಅವರು ‘ಡಿಜಿಟಲ್‌ ಜಗತ್ತಿನಲ್ಲಿ ಕನ್ನಡ– ನಿನ್ನೆ– ಇಂದು– ನಾಳೆ’ ಕುರಿತು ಮಾತನಾಡಿದರು.

ಮೊಬೈಲ್‌ನಲ್ಲಿ ಮೊದಲ ಬಾರಿ ಕನ್ನಡದಲ್ಲೇ ಟೈಪ್‌ ಮಾಡಿ ಸಂದೇಶ ಕಳುಹಿಸಲು ಸಾಧ್ಯವಾದಾಗ ರೋಮಾಂಚನಗೊಂಡಿದ್ದನ್ನು ಮೆಲುಕು ಹಾಕಿದ ಅವರು, ‘ಇಂದು ಡಿಜಿಟಲ್‌ ಲೋಕ ಮತ್ತಷ್ಟು ವಿಸ್ತಾರಗೊಂಡಿದೆ. ಲಿಪ್ಯಂತರ (ಲೋಕಲೈಸೇಷನ್‌) ಪರಿಕರಗಳಿಂದಾಗಿ ಯಾವುದೇ ಮಾಹಿತಿಯನ್ನು ಕನ್ನಡಕ್ಕೆ ಒಗ್ಗಿಸಿಕೊಳ್ಳಲು ಸಾಧ್ಯವಾಗಿದೆ. ಇಲ್ಲಿ ಇಂಗ್ಲಿಷ್‌ನಲ್ಲಿ ಏನೆಲ್ಲ ಪಡೆಯಲು ಸಾಧ್ಯವೋ ಅದೆಲ್ಲವನ್ನೂ ಕನ್ನಡದಲ್ಲೂ ಪಡೆಯಲು ಸಾಧ್ಯವಿದೆ. ಇಂಟರ್ನೆಟ್‌ನಲ್ಲಿ ಯಾವುದೇ ಮಾಹಿತಿಯನ್ನು ಕನ್ನಡದಲ್ಲೇ ಪಡೆಯುವಂತೆ ಮಾಡುವುದು ಕನ್ನಡ ಕಟ್ಟುವ ನಿಟ್ಟಿನಲ್ಲಿ ದೊಡ್ಡ ಕೆಲಸ’ ಎಂದರು.

‘ಪುಸ್ತಕ ಹಾಗೂ ಇನ್ನಿತರ ರೂಪಗಳಲ್ಲಿರುವ ಜ್ಞಾನವನ್ನು ಯಾವುದೇ ಕನ್ನಡಿಗರು ಬೇಕಾದರೂ ಕನ್ನಡದಲ್ಲೇ ಡಿಜಿಟಲ್‌ ಲೋಕಕ್ಕೆ ಸೇರಿಸಬಹುದು. ಇದಕ್ಕೆ ಆಸಕ್ತಿ ಇದ್ದರೆ ಸಾಕು, ಪಾಂಡಿತ್ಯ ಬೇಕಾಗಿಲ್ಲ. ಹಕ್ಕುಸ್ವಾಮ್ಯಕ್ಕೆ ಒಳಪಡದ ಅನೇಕ ಪುಸ್ತಕಗಳನ್ನು ಡಿಜಿಟಲೀಕರಿಸುವ ಪ್ರಕ್ರಿಯೆ ಈಗಾಗಲೇ ಪ್ರಗತಿಯಲ್ಲಿದೆ. ಇನ್ನಷ್ಟು ಮಂದಿ ಕೈಜೋಡಿಸಿದರೆ ಈ ಕಾರ್ಯ ಇನ್ನಷ್ಟು ಸುಲಭವಾಗುತ್ತದೆ’ ಎಂದರು. ‌

‘ಕನ್ನಡದಲ್ಲಿರುವ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಡಿಜಿಟಲ್‌ ರೂಪಕ್ಕಿಳಿಸುವುದು ಡಿಜಿಟಲೀಕರಣದ ಮೊದಲ ಹಂತ ಮಾತ್ರ. ಡಿಜಿಟಲೀಕರಣದ ಮಾನದಂಡ ಹಾಗೂ ಗುಣಮಟ್ಟವೂ ಮುಖ್ಯವಾಗುತ್ತದೆ. ಮೂಲಮಾಹಿತಿಯಲ್ಲಿ ತಪ್ಪುಗಳಿದ್ದರೆ ತಿದ್ದಬೇಕು. ಅದಕ್ಕೆ ಪೂರಕ ಮಾಹಿತಿಗಳನ್ನು ಸೇರಿಸಬೇಕು. ಕೃತಿಯ ಲೇಖಕರ ಹೆಸರು, ಪ್ರಕಾಶನ ಸಂಸ್ಥೆ, ಪ್ರಕಟಿಸಿದ ವರ್ಷ, ಸ್ಥಳ ಮುಂತಾದ ದಾಖಲೆಗಳೂ ಡಿಜಿಟಲ್‌ ಅವತರಣಿಯಲ್ಲಿ ಯುನಿಕೋಡ್‌ನಲ್ಲಿ ಸ್ಪಷ್ಟವಾಗಿ ದಾಖಲಾಗುವಂತೆ ಮಾಡಬೇಕು. ಕೆಲವೊಂದು ಪದ ರಾಜ್ಯದ ಬೇರೆ ಬೇರೆ ಕಡೆ ಬೇರೆಯೇ ಅರ್ಥದಲ್ಲಿ ಬಳಕೆಯಾಗುತ್ತವೆ. ಅಂತಹವುಗಳಿಗೆ ಪದವಿವರಣೆ ನೀಡಬೇಕು. ಈ ರೀತಿ ಸಮಗ್ರ ವಿಚಾರವನ್ನು ರೂಪಿಸುವುದಕ್ಕೆ ಸಮುದಾಯದ ಸಹಭಾಗಿತ್ವ ಅತ್ಯಗತ್ಯ.

‘ಕೃತಿಗಳ ಡಿಜಿಟಲೀಕರಣಕ್ಕೆ ಮುನ್ನ ಡಿಜಿಟಲ್‌ ಹಕ್ಕು ನಿರ್ವಹಣೆ (ಡಿಆರ್‌ಎಂ) ಬಗ್ಗೆ ತಿಳಿದಿರಬೇಕಾಗುತ್ತದೆ. ಕೆಲವು ಲೇಖಕರು ತಮ್ಮ ಕೃತಿಯನ್ನು ಉಚಿತವಾಗಿ ಓದುಗರಿಗೆ ಒದಗಿಸಲು ಆಸಕ್ತಿ ಹೊಂದಿರುತ್ತಾರೆ. ಆದರೆ, ಡಿಜಿಟಲೀಕರಣಗೊಂಡರೆ ಹಕ್ಕುಸ್ವಾಮ್ಯ ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕದಿಂದ ಅವುಗಳ ಡಿಜಿಟಲೀಕರಣಕ್ಕೆ ಒಪ್ಪುವುದಿಲ್ಲ. ಅಂತಹವರು ಸೃಜನಾತ್ಮಕ ಸಾಮಾನ್ಯ ಅನುಮತಿಯನ್ನು (ಕ್ರಿಯೇಟಿವ್‌ ಕಾಮನ್‌ ಲೈಸೆನ್ಸ್‌) ನೀಡುವ ಮೂಲಕ ಕೃತಿಗಳನ್ನು ಡಿಜಿಟಲೀಕರಿಸಬಹುದು. ಆಗ ಕೆಲವೊಂದು ಹಕ್ಕುಗಳನ್ನು ಲೇಖಕರು ತಮ್ಮ ಬಳಿಯೇ ಉಳಿಸಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

‘ಸರ್ಕಾರಿ ವೆಬ್‌ಸೈಟ್‌ಗಳು ಮೇಲ್ದರ್ಜೆಗೇರಿಲ್ಲ’
‘ಸರ್ಕಾರದ ಅನೇಕ ವೆಬ್‌ಸೈಟ್‌ಗಳಲ್ಲಿ ಕನ್ನಡದಲ್ಲಿ ಮಾಹಿತಿಗಳೇನೋ ಸಿಗುತ್ತಿವೆ. ಆದರೆ, ಈ ವೆಬ್‌ಸೈಟ್‌ಗಳು ಕಾಲದ ಅಗತ್ಯಕ್ಕೆ ತಕ್ಕಂತೆ ಮೇಲ್ದರ್ಜೆಗೇರಿಲ್ಲ. ಈಗಲೂ ಅನೇಕ ವೆಬ್‌ಸೈಟ್‌ಗಳಲ್ಲಿ ನುಡಿ ಅಕ್ಷರಗಳನ್ನೇ ಬಳಸಲಾಗುತ್ತದೆ. ಯುನಿಕೋಡ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ. ಅವುಗಳ ಸರಳೀಕರಣ ಆಗಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಹಳೆ ಕೃತಿಗಳಿದ್ದರೆ ಗಮನಕ್ಕೆ ತನ್ನಿ’
‘ಸ್ವಾತಂತ್ರ್ಯಪೂರ್ವದ ಕೃತಿಗಳು, ಬಾಸೆಲ್‌ ಮಿಷನ್‌ ಕನ್ನಡ ಕುರಿತು ಪ್ರಕಟಿಸಿರುವ ಕೃತಿಗಳಂತಹ ಲೇಖಕರು ಹಕ್ಕುಸ್ವಾಮ್ಯ ಹೊಂದಿಲ್ಲದ ಕನ್ನಡದ ಹಳೆಯ ಕೃತಿಗಳನ್ನು ಡಿಜಿಟಲೀಕರಿಸಬಹುದು. ಆದರೆ ಅವುಗಳ ಪ್ರತಿಗಳು ಸಿಗುತ್ತಿಲ್ಲ. ಯಾರ ಬಳಿಯಾದರೂ ಇದ್ದರೆ ಸಂಪರ್ಕಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT