ಬೆಂಗಳೂರು: ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಪಿ.ನಗರದ ಕೊಠಡಿಯಲ್ಲಿ ಕುಕ್ಕರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ದೆಹಲಿಯ ಮೋಸಿನ್(23) ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ಮೃತಪಟ್ಟರು.
ಇದೇ ಘಟನೆಯಲ್ಲಿ ಗಾಯಗೊಂಡಿದ್ದ ಸಮೀರ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಸಮೀರ್‌ಗೆ ಶೇಕಡ 40ರಷ್ಟು ಸುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಕೆಲವು ಅನುಮಾನ ವ್ಯಕ್ತವಾದ ಮೇಲೆ ಬುಧವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ), ಆಂತರಿಕಾ ಭದ್ರತಾ ವಿಭಾಗ(ಐಎಸ್‌ಡಿ), ನಗರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್), ರಾಜ್ಯ ಗುಪ್ತಚರ ದಳದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
‘ಘಟನಾ ಸ್ಥಳದಲ್ಲಿ ಯಾವುದೇ ಸ್ಫೋಟಕ ವಸ್ತು, ರಾಸಾಯನಿಕ ಪತ್ತೆಯಾಗಿಲ್ಲ. ಯಾವುದೇ ಭಯೋತ್ಪಾದನಾ ಚಟುವಟಿಕೆ ಅಲ್ಲ. ಅಡುಗೆ ಮಾಡುವಾಗ ನಿರ್ಲಕ್ಷ್ಯದಿಂದ ಉಂಟಾದ ಕುಕ್ಕರ್ ಸ್ಫೋಟ ಎಂಬುದು ತನಿಖಾ ಸಂಸ್ಥೆಗಳು ಸ್ಥಳೀಯ ಪೊಲೀಸರಿಗೆ ವರದಿ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಜೆ.ಪಿ.ನಗರದ ಸಲೂನ್‌ನಲ್ಲಿ ಮೋಸಿನ್ ಹಾಗೂ ಸಮೀರ್ ಕೆಲಸ ಮಾಡಿಕೊಂಡಿದ್ದರು. ಮಂಗಳವಾರ ಸಲೂನ್‌ಗೆ ರಜೆ ಇತ್ತು. ಬೆಳಿಗ್ಗೆ ತಡವಾಗಿ ಎದ್ದು, 11ರ ಸುಮಾರಿಗೆ ಕುಕ್ಕರ್‌ನಲ್ಲಿ ಅನ್ನ ಮಾಡಲು ಅಕ್ಕಿ ಇಟ್ಟಿದ್ದರು. ಆಗ ಕುಕ್ಕರ್ ಸ್ಪೋಟಗೊಂಡಿತ್ತು. ಸ್ಫೋಟದ ತೀವ್ರತೆಗೆ ಕುಕ್ಕರ್‌ನ ಒಂದು ಭಾಗವು ಚಿಕ್ಕ ಕೊಠಡಿಯಲ್ಲಿದ್ದ ಬಲ್ಬ್‌ಗೆ ಬಡಿದಿತ್ತು. ಆಗ ಶಾರ್ಟ್ ಸರ್ಕಿಟ್ ಆಗಿ ಬೆಂಕಿ ಹೊತ್ತಿಕೊಂಡು ಇಬ್ಬರೂ ಗಾಯಗೊಂಡಿದ್ದರು. ಸ್ಫೋಟದ ತೀವ್ರತೆ ಹೆಚ್ಚಿದ್ದರಿಂದ ಜೋರು ಶಬ್ದ ಕೇಳಿಸಿತ್ತು. ನಂತರ ಸ್ಥಳಕ್ಕೆ ಬಂದಿದ್ದ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಮಂಗಳವಾರ ಬೆಳಿಗ್ಗೆಯೇ ಪುಟ್ಟೇನಹಳ್ಳಿ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದರು.
ಸ್ವಾತಂತ್ರ್ಯ ದಿನಾಚರಣೆ ಕಾರಣದಿಂದ ಕುಕ್ಕರ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎನ್‌ಐಎ ಸೇರಿದಂತೆ ಪ್ರಮುಖ ತನಿಖಾ ಸಂಸ್ಥೆಗಳು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿವೆ. ಮೃತ ಯುವಕ ಹಾಗೂ ಗಾಯಾಳುವಿನ ಪೂರ್ವಾಪರ ವಿಚಾರಣೆ ನಡೆಸಲಾಗಿದೆ. ಇದುವರೆಗೂ ಇಬ್ಬರ ಬಗ್ಗೆ ಅನುಮಾನಾಸ್ಪದ ವಿಚಾರಗಳು ಕಂಡು ಬಂದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅಡುಗೆ ಮಾಡುವಾಗ ನಿರ್ಲಕ್ಷ್ಯ ವಹಿಸಿದ್ದರಿಂದ ಕುಕ್ಕರ್ ಸ್ಫೋಟಗೊಂಡಿರುವ ಸಾಧ್ಯತೆಯಿದೆ. ಆದರೂ ಸಮಗ್ರ ತನಿಖೆಗೆ ಸೂಚಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.