ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಬೇರೆಡೆ ಸೆಳೆಯಲು ಕುಕ್ಕರ್‌ ಸ್ಫೋಟ– ಡಿಕೆಶಿ

Last Updated 15 ಡಿಸೆಂಬರ್ 2022, 21:08 IST
ಅಕ್ಷರ ಗಾತ್ರ

ಬೆಂಗಳೂರು: ‘ಮತದಾರರ ದತ್ತಾಂಶ ಕಳವು ಪ್ರಕರಣದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ರಾಜ್ಯ ಬಿಜೆಪಿ ಸರ್ಕಾರ ಕುಕ್ಕರ್ ಬಾಂಬ್ ಸ್ಫೋಟ ಮಾಡಿಸಿದೆ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ, ಬಿಜೆಪಿ ನಾಯಕರನ್ನು ಕೆರಳಿಸಿದೆ.

ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಸ್ಫೋಟ ಪ್ರಕರಣವನ್ನು ಗುರುವಾರ ಮಾಧ್ಯಮ ಸಂವಾದದಲ್ಲಿ ಪ್ರಸ್ತಾಪಿಸಿದ ಶಿವಕುಮಾರ್‌, ‘ಉಗ್ರ ಎಲ್ಲಿಂದ ಬಂದು ಸ್ಫೋಟ ಮಾಡಿದ? ಪೊಲೀಸ್‌ ಮಹಾನಿರ್ದೇಶಕರು ಆತುರದಲ್ಲಿ ಭಯೋತ್ಪಾದಕ ಕೃತ್ಯವೆಂದರು’ ಎಂದು ದೂರಿದರು.

‘ತನಿಖೆಗೂ ಮೊದಲೇ ಅಧಿಕಾರಿಗಳು ಭಯೋತ್ಪಾದಕ ಕೃತ್ಯ ಎಂದು ಹೇಗೆ ಘೋಷಿಸಿದರು? ಹಿಂದೆ ಯಾವ ಉಗ್ರನಿದ್ದಾನೆ. ಯಾವ ಸಂಘಟನೆ ಇದೆ. ಯಾರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ. ತನಿಖೆ ಏನಾಯಿತು’ ಎಂದು ಪ್ರಶ್ನಿಸಿದರು.

ಅವರು, ‘ಮತ ಮಾಹಿತಿ ಕಳವು ಪ್ರಕರಣವನ್ನು ಮುಚ್ಚಿಹಾಕಲು ಈ ಷಡ್ಯಂತ್ರ ರೂಪಿಸಿದ್ದಾರೆ’ ಎಂದರು. ‘ಇಲ್ಲಿ ದೆಹಲಿ, ಮುಂಬೈ, ಜಮ್ಮುಕಾಶ್ಮೀರ, ಪುಲ್ವಾಮ ಥರದ ದಾಳಿ ಆಗಿಲ್ಲ‌. ಆ ಥರ ಉಗ್ರರ ದಾಳಿ ಮಂಗಳೂರಿನಲ್ಲಿ ಮಾಡಿದ್ದಾರಾ ಎಂದೂ ಪ್ರಶ್ನಿಸಿದರು.

ತಮ್ಮ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಸಿಡಿಮಿಡಿಗೊಂಡ ಡಿ.ಕೆ.ಶಿವಕುಮಾರ್‌, ‘ನಾನು ಯಾರ ಕ್ಷಮೆಯನ್ನೂ ಕೇಳುವುದಿಲ್ಲ. ಸ್ಫೋಟ ಪ್ರಕರಣವನ್ನು ಸಮರ್ಥಿಸಿಕೊಳ್ಳುವುದಿಲ್ಲ. ಘಟನೆ ನಡೆದಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಯಾವ ಉಗ್ರರಿಗೂ ಬೆಂಬಲವಿಲ್ಲ. ಅದನ್ನು ವೈಭವೀಕರಿಸಿದ್ದು ಸರಿಯಲ್ಲ. ಬಿಜೆಪಿಯವರು ಭ್ರಷ್ಟಾಚಾರ ಮುಚ್ಚಿಕೊಳ್ಳಲು ಅಧಿಕಾರಿಗಳನ್ನು ಬಳಸಿಕೊಂಡರು’ ಎಂದರು.

‘ಡಿ.ಕೆ. ಶಿವಕುಮಾರ್‌ ಅವರ ಈ ಹೇಳಿಕೆ ಹೇಡಿತನದ್ದು. ಅವರು ಮೊದಲು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು.ರಾಷ್ಟ್ರದ ಭದ್ರತೆ ಪ್ರಶ್ನೆ ಬಂದಾಗ ಏಕತೆ ಪ್ರದರ್ಶಿಸಬೇಕು.

- ಆರ್.ಅಶೋಕ,ಕಂದಾಯ ಸಚಿವ

ಕುಕ್ಕರ್ ಬಾಂಬ್‌ ಸ್ಫೋಟದ ಆರೋಪಿ ಒಬ್ಬ ಭಯೋತ್ಪಾದಕ.ದೇಶದ ಆಂತರಿಕ ಭದ್ರತೆಯ ವಿಚಾರವಿದು. ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗಳು ಆಡುವ ಮಾತಲ್ಲ

- ಆರಗ ಜ್ಞಾನೇಂದ್ರ,ಗೃಹ ಸಚಿವ

ಕುಕ್ಕರ್‌ ಬಾಂಬ್‌ ಸ್ಫೋಟದ ಆರೋಪಿಗಳ ಕುರಿತು ಅನುಕಂಪ ವ್ಯಕ್ತಪಡಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ

- ವಿ.ಸುನಿಲ್‌ ಕುಮಾರ್‌,ಇಂಧನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT