ಬೆಂಗಳೂರು: ‘ಅನಧಿಕೃತ ನೀರಿನ ಸಂಪರ್ಕಗಳನ್ನು ಕಡಿತಗೊಳಿಸಿ, ಅವುಗಳನ್ನು ಅಧಿಕೃತಗೊಳಿಸುವ ಮೂಲಕ ಜಲಮಂಡಳಿ ಆದಾಯ ಹೆಚ್ಚಿಸಲು ಕೈ ಜೋಡಿಸಬೇಕು’ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ಪ್ರಸಾದ್ ಮನೋಹರ್ ಹೇಳಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸನ್ನದು ಪಡೆದ ಗುತ್ತಿಗೆದಾರರ ಸಂಘ ಆಯೋಜಿಸಿದ್ದ ಕಾವೇರಿ ತಾಯಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಗುತ್ತಿಗೆದಾರರು ಹಾಗೂ ಪ್ಲಂಬರ್‌ಗಳು ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಉತ್ತಮ ಸೇವೆ ಸಲ್ಲಿಸಿದ್ದೀರಿ. ಇದೇ ರೀತಿ ನೂರಾರು ಕಿಲೋಮೀಟರ್ ದೂರದಿಂದ ನಗರಕ್ಕೆ ತರುವ ನೀರು ಪೋಲಾಗದಂತೆ ತಡೆಯಲು ಮಂಡಳಿಯೊಂದಿಗೆ ಕೈಜೋಡಿಸಬೇಕು’ ಎಂದು ಕರೆ ನೀಡಿದರು.
ಇದೇ ವೇಳೆ ಜಲಮಂಡಳಿಯ ನೋಂದಾಯಿತ ಪ್ಲಂಬರ್‌ಗಳ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಲಮಂಡಳಿಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಚಂದ್ರಮೌಳಿ ಡಿ.ಎನ್., ಪ್ರಧಾನ ಕಾರ್ಯದರ್ಶಿ ಕುಮಾರ್.ಜಿ, ಉಪಾಧ್ಯಕ್ಷ ಚಂದ್ರಶೇಖರ್ ಪಿ.ಎಲ್, ಗೌರವಾಧ್ಯಕ್ಷ ಶ್ರೀನಿವಾಸ್ ಬಿ.ಟಿ., ಮಾಜಿ ಗೌರವಾಧ್ಯಕ್ಷ ಲೋಕೇಶ್ ರಾವ್ ಉಪಸ್ಥಿತರಿದ್ದರು.