ಗುರುವಾರ , ಆಗಸ್ಟ್ 5, 2021
22 °C
ಒಂದೇ ದಿನ 138 ಮಂದಿಗೆ ಕೊರೊನಾ ಸೋಂಕು ದೃಢ * ಒಟ್ಟು ಸೋಂಕಿತರ ಸಂಖ್ಯೆ 982ಕ್ಕೆ ಏರಿಕೆ

ಕೋವಿಡ್: ಬೆಂಗಳೂರಿನಲ್ಲಿ ಗರಿಷ್ಠ ಪ್ರಕರಣಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಶುಕ್ರವಾರ ಒಂದೇ ದಿನ 138 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವು ಒಂದು ದಿನದ ಗರಿಷ್ಠ ಪ್ರಕರಣಗಳಾಗಿದ್ದು, ಕೋವಿಡ್ ಪೀಡಿತರ ಸಂಖ್ಯೆ ಸಾವಿರದ ಗಡಿ (982) ಸಮೀಪಿಸಿದೆ. 

ಕೊರೊನಾ ಸೋಂಕಿನಿಂದ ಮತ್ತೆ 7 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದಾಗಿ ಮೃತರ ಸಂಖ್ಯೆ 58ಕ್ಕೆ ತಲುಪಿದೆ. ಎಂಟು ಮಂದಿ ಚೇತ ರಿಸಿಕೊಂಡು ಮನೆಗೆ ತೆರಳಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 392ಕ್ಕೆ ಏರಿಕೆಯಾಗಿದೆ. 35 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ. 

ಶುಕ್ರವಾರ ವರದಿಯಾದ ಪ್ರಕರಣ ಗಳಲ್ಲಿ 34 ಮಂದಿ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲುತ್ತಿದ್ದಾರೆ. 30 ಮಂದಿ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. 33 ಮಂದಿಗೆ ಹೇಗೆ ಸೋಂಕು ತಗುಲಿತು ಎಂಬುದು ಪತ್ತೆಯಾಗಿಲ್ಲ. 9 ಮಂದಿ ಅನ್ಯರಾಜ್ಯಗಳಿಗೆ ಪ್ರಯಾಣ ಮಾಡಿ ವಾಪಸ್ ಆದವರು. ಕೆಲವರು ರೋಗಿಗಳ ಸಂಪರ್ಕದಿಂದ ಸೋಂಕಿತರಾಗಿದ್ದಾರೆ. 

ಕ್ಯಾನ್ಸರ್ ರೋಗಿಗಳಿಗೆ ಸೋಂಕು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಇಬ್ಬರು ಕ್ಯಾನ್ಸರ್ ರೋಗಿಗಳು ಕೊರೊನಾ ಸೋಂಕಿತರಾಗಿರುವುದು ಕೋವಿಡ್ ಪರೀಕ್ಷೆಯಿಂದ ದೃಢಪಟ್ಟಿದೆ. ಇದರಲ್ಲಿ ಒಬ್ಬರು ಒಳರೋಗಿಯಾಗಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದರೆ, ಇನ್ನೊಬ್ಬರು ಹೊರ ರೋಗಿ. ಇಬ್ಬರು ರೋಗಿಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಕೊಳ್ಳಲಾಗಿದೆ. 

ಕೆಂಗೇರಿ ಉಪನಗರದ 29 ವರ್ಷದ ಮಹಿಳೆ ಹಾಗೂ ಜೆ.ಸಿ. ನಗರದ 30 ವರ್ಷದ ಮಹಿಳೆ ಸೋಂಕಿತರಾಗಿದ್ದಾರೆ. 29 ವರ್ಷದ ಮಹಿಳೆ ದಾಖಲಾಗಿದ್ದ ವಾರ್ಡ್‌ ಅನ್ನು ಸೀಲ್‌ ಡೌನ್‌ ಮಾಡಿ, ರೋಗಿಗಳನ್ನು ಬೇರೆ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ. ಅವರ ಸಂಪರ್ಕಕ್ಕೆ ಬಂದಿದ್ದ ತಲಾ 7 ವೈದ್ಯರು ಹಾಗೂ ಶುಶ್ರೂಷಕರನ್ನು ಕ್ವಾರಂಟೈನ್‌ ಮಾಡಲಾಗಿದೆ. 30 ವರ್ಷದ ಮಹಿಳೆ ಕಿದ್ವಾಯಿಯಲ್ಲಿ ‍ಪರೀಕ್ಷೆ ಮಾಡಿಸಿಕೊಂಡು ಮನೆಗೆ ತೆರಳಿದ್ದರು. ಬಳಿಕ ಅವರನ್ನು ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರು ವೈದ್ಯರು ಹಾಗೂ ಒಬ್ಬ ತಾಂತ್ರಿಕ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. 

‘ವೈದ್ಯರು ಹಾಗೂ ಸಿಬ್ಬಂದಿ ವೈಯಕ್ತಿಕ ಸುರಕ್ಷಾ ಸಾಧನಗಳನ್ನು (ಪಿಪಿಇ ಕಿಟ್‌) ಧರಿಸಿದ್ದರು. ಸೋಂಕಿತ ಮಹಿಳೆ ದಾಖಲಾದ ವಾರ್ಡ್‌ನಲ್ಲಿನ ರೋಗಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಯಾರಿಗೂ ಸೋಂಕು ತಗುಲಿಲ್ಲ. ಇದರಿಂದಾಗಿ ಚಿಕಿತ್ಸೆ
ಗಳನ್ನು ಮುಂದುವರಿಸಲಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಸಿ. ರಾಮಚಂದ್ರ ತಿಳಿಸಿದರು.

ಆರೋಗ್ಯ ಸಿಬ್ಬಂದಿಗೆ ಸೋಂಕು

ನಗರದ ಖಾಸಗಿ ಆಸ್ಪತ್ರೆಯೊಂದರ 50 ವರ್ಷದ ಆರೋಗ್ಯ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿದೆ. ಅವರು ಕನಕಪುರ ಮುಖ್ಯರಸ್ತೆಯ ಕಗ್ಗಲೀಪುರ ಕ್ವಾಟ್ರರ್ಸ್‌ನಲ್ಲಿ ವಾಸವಿದ್ದರು. ಕೆಂಗೇರಿ ಉಪನಗರದ ನೇತಾಜಿ ಬಡಾವಣೆಯ ಶಿರ್ಕೆ ಅಪಾರ್ಟ್‌ಮೆಂಟ್ ಸಮುಚ್ಛಯದಲ್ಲಿ ವಾಸವಿದ್ದ 15 ವರ್ಷದ ಬಾಲಕಿ, 42 ವರ್ಷದ ಪುರುಷ ಹಾಗೂ 39 ವರ್ಷದ ಮಹಿಳೆ ಕೋವಿಡ್ ಪೀಡಿತರಾಗಿದ್ದಾರೆ.

ಜಯನಗರದ ಪರೀಕ್ಷಾ ಕೇಂದ್ರವೊಂದರಲ್ಲಿನ ಕೊಠಡಿಯಲ್ಲಿ ಕೋವಿಡ್‌ ಸೋಂಕಿತ ವ್ಯಕ್ತಿಯೊಬ್ಬರ ಪುತ್ರಿ ಸಹ ಪರೀಕ್ಷೆ ಬರೆದಿದ್ದಳು
ಎಂಬ ಕಾರಣಕ್ಕೆ ಕೊಠಡಿಯಲ್ಲಿನ ಇತರ 23 ವಿದ್ಯಾರ್ಥಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ವಿದ್ಯಾರ್ಥಿನಿಯ ತಂದೆಗೆ ಕೊರೊನಾ ಸೋಂಕು ತಗುಲಿರುವುದು ಶುಕ್ರವಾರ ಬೆಳಿಗ್ಗೆ ದೃಢಪಟ್ಟಿತ್ತು.

‘ಈ ಕಾಲೇಜಿನಲ್ಲಿ ಎರಡು ಕಾಲೇಜುಗಳ 640 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಎಲ್ಲಾ ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗಿತ್ತು. ಈ ನಿರ್ದಿಷ್ಟ ವಿದ್ಯಾರ್ಥಿನಿ ಸಹಿತ ಯಾರಲ್ಲೂ ಜ್ವರದ ಲಕ್ಷಣ ಕಾಣಿಸಿರಲಿಲ್ಲ’ ಎಂದು ಕಾಲೇಜಿನ ಮೂಲಗಳು ತಿಳಿಸಿವೆ.

ಒಂದೇ ದಿನ ₹2.38 ಲಕ್ಷ ದಂಡ ವಸೂಲಿ

ಮಾಸ್ಕ್ ಧರಿಸದ ಮತ್ತು ಅಂತರ ಕಾಯ್ದುಕೊಳ್ಳದೆ ಓಡಾಡುವವರಿಂದ ಒಂದೇ ದಿನ ₹2.38 ಲಕ್ಷ ದಂಡವನ್ನು ಬಿಬಿಎಂಪಿ ಸಂಗ್ರಹಿಸಿದೆ.

‘ಶುಕ್ರವಾರ ನಗರದ ಎಲ್ಲಾ ವಾರ್ಡ್‌ಗಳ ಪ್ರಮುಖ ಜಂಕ್ಷನ್‌ಗಳಲ್ಲಿ ನಿಂತಿದ್ದ ಪಾಲಿಕೆ ಮಾರ್ಷಲ್‌ಗಳು, ಮಾಸ್ಕ್ ಧರಿಸದ 1,140 ಜನ ಮತ್ತು ಅಂತರ ಕಾಯ್ದುಕೊಳ್ಳದ 49 ಮಂದಿಗೆ ದಂಡ ವಿಧಿಸಿದ್ದಾರೆ’ ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು