ಶನಿವಾರ, ಸೆಪ್ಟೆಂಬರ್ 26, 2020
22 °C
ಕೋವಿಡ್‌ ಗೆದ್ದು ಬಂದ 40 ವರ್ಷದ ವ್ಯಕ್ತಿಯ ಕುಟುಂಬ

ಕೋವಿಡ್‌ ಗೆದ್ದವರ ಕಥೆಗಳು | ‘ದುರ್ಬಲ ಸೋಂಕಿಗೆ ಆಹಾರದಲ್ಲಿದೆ ಮದ್ದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನನಗೆ ಸೋಂಕು ತಗುಲಿದ ಬಳಿಕ 6 ವರ್ಷದ ಪುತ್ರ, 60 ವರ್ಷದ ಅತ್ತೆ ಸೇರಿದಂತೆ ಕುಟುಂಬದ ಐದು ಮಂದಿಗೆ ಸೋಂಕು ಹರಡಿತು. ನಾನು ಗುಣಮುಖನಾಗುತ್ತೇನೆಯೋ ಇಲ್ಲವೋ ಎಂಬ ಭಯ, ಇನ್ನೊಂದೆಡೆ ನನ್ನಿಂದಾಗಿ ಕುಟುಂಬದ ಸದಸ್ಯರೆಲ್ಲರೂ ಕೋವಿಡ್ ಪೀಡಿತರಾದರು ಎಂಬ ಅಳಕು. ಆದರೆ, ಆಸ್ಪತ್ರೆಗೆ ದಾಖಲಾದ ಕೆಲವೇ ದಿನಗಳಲ್ಲಿ ಎಲ್ಲರೂ ಗುಣಮುಖರಾದೆವು. ಭಯ, ಆತಂಕಕ್ಕೆ ಒಳಗಾಗದಿದ್ದಲ್ಲಿ ಚಿಕಿತ್ಸೆ ಪಡೆಯದೆಯೂ ಸೋಂಕನ್ನು ಹೊಡೆದೊಡಿಸಲು ಸಾಧ್ಯ’. 

ಇದು ಕೋವಿಡ್‌ ಗೆದ್ದು ಬಂದ 40 ವರ್ಷದ ಹೆಬ್ಬಾಳದ ನಿವಾಸಿ ಪ್ರವೀಣ್ ಕುಮಾರ್ ಅವರ ಮನದಾಳದ ಮಾತುಗಳು. ಅವರು ಆಧಾರ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೋಂಕಿತ ಸಹೋದ್ಯೋಗಿಯ ಸಂಪರ್ಕದಿಂದ ಕೋವಿಡ್ ಪೀಡಿತರಾಗಿದ್ದರು. ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಮೂರು ದಿನಗಳಲ್ಲೇ ಚೇತರಿಸಿಕೊಂಡಿದ್ದರು. ಆದರೆ, ಆರೋಗ್ಯ ಇಲಾಖೆಯ ನಿಯಮದ ಅನುಸಾರ ಅವರನ್ನು ಆಸ್ಪತ್ರೆಯಲ್ಲಿ ಹತ್ತು ದಿನಗಳು ಇರಿಸಿಕೊಳ್ಳಲಾಗಿತ್ತು. ಅವರು 14 ದಿನಗಳ ಮನೆ ಕ್ವಾರಂಟೈನ್‌ ಪೂರ್ಣಗೊಳಿಸಿ, ಪುನಃ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ‌

‘ಸಹೋದ್ಯೋಗಿ ಸೊಂಕಿತರಾಗಿರುವುದು ಖಚಿತಪಟ್ಟ ಕಾರಣ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಜು.6ರಂದು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡೆ. ಸೋಂಕಿತರಾಗಿರುವುದು ಜು.11ರಂದು ದೃಢಪಟ್ಟಿತು. ಬಿಬಿಎಂಪಿ ಅಧಿಕಾರಿಗಳು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಿಸಿದರು. ಕೋವಿಡ್‌ ಬಂದರೆ ಜೀವಕ್ಕೆ ಅಪಾಯ ಎಂದು ಹೊರಗಡೆ ಬಿಂಬಿಸಿರುವ ಕಾರಣ ನನಗೆ ಕೂಡ ಭಯವಿತ್ತು. ನನ್ನಿಂದ ಕುಟುಂಬದ ಸದಸ್ಯರೆಲ್ಲ ಸೋಂಕಿತರಾಗಿರುವುದನ್ನು ತಿಳಿದಾಗ ಇನ್ನಷ್ಟು ಬೇಸರವಾಯಿತು. ಆದರೆ,  ವಿಶೇಷ ಚಿಕಿತ್ಸೆ ಇಲ್ಲದೆಯೇ ಎಲ್ಲರೂ ಗುಣಮುಖರಾದೆವು’ ಎಂದು ಪ್ರವೀಣ್ ಕುಮಾರ್ ತಿಳಿಸಿದರು.

‘ಆಸ್ಪತ್ರೆಯಲ್ಲಿ ಓದಲು ಪುಸ್ತಕಗಳಿದ್ದವು. ಮಕ್ಕಳಿಗೆ ಆಟಿಕೆಗಳನ್ನು ಇರಿಸಲಾಗಿತ್ತು. ಅಲ್ಲಿನ ಸಿಬ್ಬಂದಿ ಕಾಳಜಿಯಿಂದ ವಿಚಾರಿಸುತ್ತಿದ್ದರು. ನಾವು ಸೋಂಕಿತರು ಎನ್ನುವುದನ್ನೇ ಮರೆತು, ಮಾತುಕತೆ ನಡೆಸುತ್ತಿದ್ದೆವು. ರೋಗನಿರೋಧಕ ಶಕ್ತಿ ವೃದ್ಧಿಸಲು ಪೂರಕವಾದ ಮಾತ್ರೆಗಳು ಹಾಗೂ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. ಸೋಂಕು ಇನ್ನೊಬ್ಬರಿಗೆ ಹರಡಬಾರದು ಎಂಬ ಕಾರಣಕ್ಕೆ ಮಾತ್ರ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ‌’ ಎಂದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು