ಬುಧವಾರ, ಸೆಪ್ಟೆಂಬರ್ 30, 2020
26 °C
ನಗರದಲ್ಲಿ ಶೇ 85.7 ರಷ್ಟು ಪ್ರಕರಣಗಳು ಲಕ್ಷಣ ರಹಿತ

ಬೆಂಗಳೂರು: 1.63 ಲಕ್ಷ ಮಂದಿ ಕ್ವಾರಂಟೈನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದ ಬಳಿಕ ಸೋಂಕಿತರ ಸಂಪರ್ಕ ಹೊಂದಿರುವವರನ್ನು ಗುರುತಿಸುವ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ. ಇಷ್ಟಾಗಿಯೂ ಸದ್ಯ 1.63 ಲಕ್ಷ ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.  

ಈ ಮೊದಲು ಸೋಂಕಿತರೊಂದಿಗೆ ನೇರ ಮತ್ತು ಪರೋಕ್ಷ ಸಂಪರ್ಕ ಹೊಂದಿದ್ದವರು ಹಾಗೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿತ್ತು. ಆದರೆ, ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿರುವ ಕಾರಣ ಮನೆ ಕ್ವಾರಂಟೈನ್‌ಗೆ ಒಳಪಡಲು ಬಹುತೇಕರಿಗೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ. ನಗರದಲ್ಲಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಶೇ 85.7 ರಷ್ಟು ಮಂದಿಗೆ ಸೋಂಕಿನ ಲಕ್ಷಣಗಳೇ ಗೋಚರಿಸಿಲ್ಲ.

ಇದರಿಂದಾಗಿ ಅವರ ಪ್ರಯಾಣದ ಇತಿಹಾಸ ಪತ್ತೆ ಹಚ್ಚಲು ಬಿಬಿಎಂಪಿ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ. ಅವರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಗುರುತಿಸುವ ಪ್ರಕ್ರಿಯೆ ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ. ಇನ್ನೊಂದೆಡೆ, 14 ದಿನಗಳ ಮನೆ ಕ್ವಾರಂಟೈನ್‌ನಲ್ಲಿ ಇರುವವರ ಮೇಲೆ ಸೂಕ್ತ ನಿಗಾ ವ್ಯವಸ್ಥೆ ಇಲ್ಲದ ಪರಿಣಾಮ ನಿಯಮ ಉಲ್ಲಂಘಿಸಿ, ಬೀದಿಗೆ ಬರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ‌ 

ಸೋಂಕು ಶಂಕಿತರು ಹಾಗೂ ಕೋವಿಡ್ ಪೀಡಿತರೊಂದಿಗೆ ಸಂಪರ್ಕ ಹೊಂದಿರುವವರು ಹೊರಗಡೆ ಸಂಚರಿಸಿದಲ್ಲಿ ಸೋಂಕು ಹರಡುವ ಸಾಧ್ಯತೆಯಿದೆ. ಈ ಕಾರಣಕ್ಕೆ ಕಡ್ಡಾಯವಾಗಿ ಮನೆ ಕ್ವಾರಂಟೈನ್‌ಗೆ ಒಳಗಾಗಬೇಕೆಂಬ ನಿಯಮ ರೂಪಿಸಲಾಗಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ನಗರದಲ್ಲಿ ಕ್ವಾರಂಟೈನ್‌ ನಿಯಮ ಉಲ್ಲಂಘನೆಯ ಆರೋಪದಲ್ಲಿ ಪ್ರತಿ ಸಾವಿರ ವ್ಯಕ್ತಿಗಳಲ್ಲಿ ಸರಾಸರಿ ಇಬ್ಬರ ಮೇಲೆ ವಿವಿಧ ಠಾಣೆಗಳಲ್ಲಿ ಎಫ್ಐಆರ್‌ ದಾಖಲಿಸಲಾಗುತ್ತಿದೆ. 

ನಗರದಲ್ಲಿ ಕೋವಿಡ್ ಸ್ಥಿತಿಗತಿ

ಶೇ 3.2

ಪಾಸಿಟಿವ್ ಪ್ರಕರಣಗಳ ಬೆಳವಣಿಗೆ ದರ

17 ದಿನಗಳು

ಪ್ರಕರಣಗಳು ದುಪ್ಪಟ್ಟಾಗಲು ತೆಗೆದುಕೊಳ್ಳುವ ಅವಧಿ

ಶೇ 1.8

ಮರಣ ಪ್ರಮಾಣ ದರ

121

ಪ್ರತಿ ಹತ್ತು ಲಕ್ಷ ಮಂದಿಯಲ್ಲಿ ಮೃತಪಡುತ್ತಿರುವವರು

ಶೇ 17.81

ಸೋಂಕು ದೃಢಪಡುತ್ತಿರುವ ಪ್ರಮಾಣ

14,541

ಒಂದು ದಿನ ನಡೆಸಲಾದ ಗರಿಷ್ಠ ಕೋವಿಡ್ ಪರೀಕ್ಷೆಗಳು

4 ಮಂದಿ

ಪ್ರತಿ ವ್ಯಕ್ತಿಗೆ ಸರಾಸರಿ ನೇರ ಸಂಪರ್ಕ ಹೊಂದಿರುವವರು

9,653

ಪ್ರತಿ ಹತ್ತು ಲಕ್ಷ ಮಂದಿಗೆ ನಡೆಸಲಾಗುತ್ತಿರುವ ಪರೀಕ್ಷೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು