ಮಂಗಳವಾರ, ಜೂನ್ 2, 2020
27 °C
ಲಾಕ್‌ಡೌನ್‌ ಬಿಗಿಗೊಳಿಸುವಂತೆ ಸಿ.ಎಂಗೆ ಪ್ರಧಾನಿ ಸೂಚನೆ * ಪಾಸ್ ವ್ಯವಸ್ಥೆ ಕೈ ಬಿಡಲು ಚಿಂತನೆ?

ಪಾಸ್‌ ವಿತರಣೆಯಲ್ಲೂ ಅವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಗತ್ಯ ಸೇವೆ ನೀಡುವ ಜನರಿಗೆ ವಿತರಿಸಬೇಕಾದ ಪಾಸ್‌ಗಳನ್ನು, ಅವಶ್ಯವಲ್ಲದ ಸೇವೆಗಳ ಜನರಿಗೂ ಬೇಕಾಬಿಟ್ಟಿಯಾಗಿ ವಿತರಿಸುತ್ತಿರುವುದಕ್ಕೆ ಹಲವರಿಂದ ಅಸಮಾಧಾನ ವ್ಯಕ್ತವಾಗಿದೆ. ಮೂರೇ ದಿನದಲ್ಲೇ ಸಾವಿರಾರು ಜನರಿಗೆ ಪೊಲೀಸರು ಪಾಸ್‌ ವಿತರಿಸಿದ್ದು, ಅವರಿಗೆಲ್ಲ ‘ಲಾಕ್‌ಡೌನ್‌’ ನೆಪಕ್ಕಷ್ಟೇ ಎಂಬುವಂತಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಅದರನ್ವಯ ರಾಜ್ಯದಲ್ಲಿ ಲಾಕ್‌ಡೌನ್ ಆದೇಶ ಸರಿಯಾಗಿ ಪಾಲನೆಯಾಗುತ್ತಿಲ್ಲ. ಇದಕ್ಕೆ ಅಸಮಾಧಾನಗೊಂಡಿರುವ ಪ್ರಧಾನಿ, ಲಾಕ್‌ಡೌನ್‌ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸುವಂತೆ ಮುಖ್ಯಮತ್ರಿ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ.

ಹೀಗಾಗಿ, ಲಾಕ್‌ಡೌನ್‌ ವೇಳೆ ಓಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.

ಇದರ ಜೊತೆಗೆಯೇ, ಬೆಂಗಳೂರಿನಲ್ಲಿ ನೀಡಲಾಗಿರುವ ಪಾಸ್‌ ವ್ಯವಸ್ಥೆ ರದ್ದುಪಡಿಸುವ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಕಮಿಷನರ್ ಅವರಿಗೂ ಸೂಚನೆ ನೀಡಿದ್ದಾರೆ.

ಮಧ್ಯಾಹ್ನವೇ ಪಾಸ್‌ ವಿತರಣೆ ಬಂದ್: ಪಾಸ್‌ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ನಗರದ ಹಲವು ಡಿಸಿಪಿ ಕಚೇರಿಗಳಲ್ಲಿ ಪಾಸ್‌ ವಿತರಣೆಯನ್ನು ಶನಿವಾರ ಮಧ್ಯಾಹ್ನವೇ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಈ ಬಗ್ಗೆ ಡಿಸಿಪಿಯೊಬ್ಬರನ್ನು ಪ್ರಶ್ನಿಸಿದಾಗ, ‘ಪಾಸ್‌ ವಿತರಣೆಯನ್ನು ಆನ್‌ಲೈನ್‌ ಮಾಡುವುದಾಗಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ, ಸದ್ಯಕ್ಕೆ ಬಂದ್ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ನಗರದಲ್ಲಿ ಈಗಾಗಲೇ 4 ಸಾವಿರಕ್ಕೂ ಹೆಚ್ಚು ಪಾಸ್‌ ನೀಡಲಾಗಿದೆ. ಪ್ರತಿಯೊಂದು ಡಿಸಿಪಿ ಕಚೇರಿ ಎದುರು ಸರದಿಯಲ್ಲಿ ನಿಂತು ಜನ ಪಾಸ್‌ ಪಡೆಯುತ್ತಿದ್ದಾರೆ. ಜನ ಸಂದಣಿ ಹೆಚ್ಚಾಗುತ್ತಿರುವುದರಿಂದ ಪಾಸ್‌ ನೀಡುವುದನ್ನೂ ಆನ್‌ಲೈನ್ ಮಾಡುವಂತೆ ಬೇಡಿಕೆ ಬಂದಿದೆ’ ಎಂದು ಡಿಸಿಪಿ ಹೇಳಿದರು.

ತಮಗೂ, ತಮ್ಮ ಕುಟುಂಬಕ್ಕೂ ಪಾಸ್: ‘ಅಗತ್ಯ ಸೇವೆ ಮಾಡುವವರು ತಮ್ಮ ಜೊತೆಗೆ ತಮ್ಮ ಕುಟುಂಬದವರಿಗೂ ಪಾಸ್‌ ಪಡೆಯುತ್ತಿದ್ದಾರೆ. ಏನಾದರೂ ಕೇಳಿದರೆ, ಅವರು ಅಗತ್ಯ ಸೇವೆ ನೀಡುತ್ತಾರೆ ಎಂದೇ ಸಬೂಬು ಹೇಳುತ್ತಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಯಾರಿಗೆ ಪಾಸ್‌ ನೀಡಬೇಕು ಎಂಬ ಬಗ್ಗೆ ನಿರ್ದಿಷ್ಟ ನಿಯಮಗಳು ಇಲ್ಲ. ಶಾಸಕರ, ಅಧಿಕಾರಿಗಳ ಹಾಗೂ ಮುಖಂಡರ ಹೆಸರು ಹೇಳಿಯೇ ಪಾಸ್‌ ಪಡೆಯುತ್ತಿದ್ದಾರೆ. ಕೆಲವರಂತೂ ತಮ್ಮ ಮನೆ ಕೆಲಸದವರಿಗೂ ಪಾಸ್‌ ಕೊಡಿಸುತ್ತಿದ್ದಾರೆ’ ಎಂದು ಅಸಮಾಧಾನ
ವ್ಯಕ್ತಪಡಿಸಿದರು.

‘ಒಳ್ಳೆಯ ಕೆಲಸಕ್ಕೆಂದು ಪಾಸ್‌ ವ್ಯವಸ್ಥೆ ರೂಪಿಸಲಾಗಿದೆ. ಜನರು ಅದರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೇಳಿದವರಿಗೆಲ್ಲ ಪಾಸ್‌ ಕೊಡುತ್ತ ಹೋದರೆ, ಲಾಕ್‌ಡೌನ್‌ ಮಾಡಿ ಏನು ಪ್ರಯೋಜನ. ಎಲ್ಲರೂ ರಸ್ತೆಯಲ್ಲೇ ಇರುತ್ತಾರೆ. ಪೊಲೀಸರಾದರೂ ಏನು ಮಾಡಲು ಸಾಧ್ಯ. ಪಾಸ್‌ ನೋಡಿ ಮುಂದೆ ಬಿಡಲೇ ಬೇಕು’ ಎಂದರು.

ವಾಹನ ಕೀ ಕಿತ್ತುಕೊಂಡು ಕಾಯುವ ‘ಶಿಕ್ಷೆ’
ನಗರ ಪೊಲೀಸ್ ಕಮಿಷನರ್ ಸೂಚನೆಯಂತೆ ಲಾಠಿ ಬಿಟ್ಟು ಶನಿವಾರ ಕೆಲಸ ಮಾಡಿದ ಪೊಲೀಸರು, ಅನಗತ್ಯವಾಗಿ ಓಡಾಡುವವರಿಗೆ ಬೇರೆ ಬೇರೆ ಪ್ರಕಾರವಾಗಿ ‘ಶಿಕ್ಷೆ’ ನೀಡಿದರು.

ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣ ಬಳಿ ನಿಂತಿದ್ದ ಬ್ಯಾಟರಾಯನಪುರ ಠಾಣೆ ಪೊಲೀಸರು, ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನಗಳನ್ನ ತಡೆದು ಕೀ ಕಿತ್ತುಕೊಂಡರು. ನಂತರ, ಕೀಗಳನ್ನು ಒಂದು ಬಾಕ್ಸ್‌ ನಲ್ಲಿಟ್ಟಿದ್ದರು. ಸಂಜೆಯವರೆಗೂ ಚಾಲಕರನ್ನು ಸ್ಥಳದಲ್ಲೇ ಕಾಯುವಂತೆ ಮಾಡಿ ನಂತರ ಎಚ್ಚರಿಕೆ ನೀಡಿ ವಾಹನಗಳನ್ನು ಬಿಟ್ಟು ಕಳುಹಿಸಿದರು. ವಿಜಯನಗರ, ಕಾಮಾಕ್ಷಿಪಾಳ್ಯ, ಪೀಣ್ಯ ಸೇರಿ ಹಲವು ಠಾಣೆಗಳ ಪೊಲೀಸರು ಇದನ್ನೇ ಮಾಡಿದರು.

‘ದೊಡ್ಡ ಮಳಿಗೆಗಳಲ್ಲಿ ಹೆಚ್ಚು ಜನಸಂದಣಿ‘
‘ದಿನಸಿ ಸೇರಿ ಅಗತ್ಯ ವಸ್ತುಗಳನ್ನು ಮಾರುವ ಮಳಿಗೆಗಳ ಮುಂದೆಯೇ ಜನ ಸಂದಣಿ ಹೆಚ್ಚು ಕಂಡು ಬರುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಜನರು ವಾಸವಿರುವ ಪ್ರದೇಶಗಳಲ್ಲೇ ದಿನಸಿ ಸಿಗುವಂತೆ ಮಾಡಬೇಕು’ ಎಂದು ಮಲ್ಲೇಶ್ವರದ ನಿವಾಸಿ ಚಂದ್ರಶೇಖರ್ ಹೇಳಿದರು.

ಟ್ವೀಟ್‌ ಮಾಡಿರುವ ಅವರು, ‘ಲಾಕ್‌ಡೌನ್‌ ಮಾಡಿಯೂ ಮಾಡದಂತಹ ಸ್ಥಿತಿ ಹಲವೆಡೆ ಕಂಡುಬರುತ್ತಿದೆ. ಹಾಲು, ಗ್ಯಾಸ್‌ ಹಾಗೂ ತುರ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ಸೇವೆಗಳನ್ನು ಬಂದ್ ಮಾಡಬೇಕು. ಅವಾಗಲೇ ಈ ಸೋಂಕು ನಿಯಂತ್ರಣ ಸಾಧ್ಯ’ ಎಂದು ಅವರು ಸಲಹೆ ನೀಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು