ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯ ಸೇವೆಗಳಿಗೆ ‘ಇ–ಪಾಸ್’: ಸರದಿ ಸಾಲು ತಪ್ಪಿಸಲು ಕ್ರಮ

‘ಮೈ ಗೇಟ್‌’ ಜಾಲತಾಣದಲ್ಲಿ ನೋಂದಣಿಗೆ ಅವಕಾಶ
Last Updated 29 ಮಾರ್ಚ್ 2020, 20:16 IST
ಅಕ್ಷರ ಗಾತ್ರ

ಬೆಂಗಳೂರು: ನಿಷೇಧಾಜ್ಞೆ ವೇಳೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಸೇವೆ ಪೂರೈಸುವವರಿಗೆ ಆನ್‌ಲೈನ್‌ ಮೂಲಕವೇ ಪಾಸ್‌ಗಳನ್ನು ವಿತರಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ‘ಮೈ ಗೇಟ್‌’ ಜಾಲತಾಣದಲ್ಲಿ ಭಾನುವಾರದಿಂದಲೇ ನೋಂದಣಿ ಶುರುವಾಗಿದೆ.

ಕೊರೊನಾ ವೈರಾಣು ಹರಡುವಿಕೆ ತಡೆಯುವ ಉದ್ದೇಶದಿಂದ ದೇಶದಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು, ರಾಜ್ಯವೂ ಸ್ತಬ್ಧಗೊಂಡಿದೆ. ಅನಗತ್ಯವಾಗಿ ಓಡಾಡುವವರ ಮೇಲೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ. ಇದರ ನಡುವೆಯೇ ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸುವ ಕೆಲಸದಲ್ಲಿ ಸಾವಿರಾರು ಜನ ನಿರತರಾಗಿದ್ದಾರೆ.

ತುರ್ತು ಸೇವಾ ಸಿಬ್ಬಂದಿ, ಔಷಧ, ತರಕಾರಿ, ಆಹಾರ ಪದಾರ್ಥಗಳ ವಿತರಕರು ಹಾಗೂ ಮಾಧ್ಯಮದವರನ್ನು ಅಗತ್ಯ ಸೇವೆಗಳ ವ್ಯಾಪ್ತಿಗೆ ಸೇರಿಸಲಾಗಿದೆ. ಇವರೆಲ್ಲರಿಗೂ ಪಾಸ್‌ ನೀಡಲು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತೀರ್ಮಾನ ಕೈಗೊಂಡಿದ್ದರು. ಅದರಂತೆ ನಗರದ ಎಲ್ಲ ಡಿಸಿಪಿ ಕಚೇರಿಯಲ್ಲಿ ಪಾಸ್‌ ವಿತರಣೆ ಪ್ರಕ್ರಿಯೆ ಶುರುವಾಗಿತ್ತು.

ಹಲವರಿಗೆ ಬೇಕಾಬಿಟ್ಟಿಯಾಗಿ ಪಾಸ್‌ ವಿತರಣೆ ಮಾಡಿರುವ ಆರೋಪ ಕೇಳಿಬಂದ ಕಾರಣ, ಪಾಸ್‌ ವಿತರಣೆ ವ್ಯವಸ್ಥೆಯನ್ನು ಇದೀಗ ಸಂಪೂರ್ಣವಾಗಿ ಆನ್‌ಲೈನ್‌ ಮಾಡಲಾಗಿದೆ.

ಕೈ ಮುಗಿದು ಮನವಿ: ನಿಷೇಧಾಜ್ಞೆ ನಡುವೆಯೂ ರಸ್ತೆಯಲ್ಲಿ ಸಂಚರಿಸುವರ ಸಂಖ್ಯೆ ಭಾನುವಾರ ಹೆಚ್ಚಿತ್ತು. ಅಂಥ ಜನರನ್ನು ತಡೆದಿದ್ದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ನಿಷೇಧಾಜ್ಞೆಯನ್ನು ಪಾಲಿಸುವಂತೆ ಕೈ ಮುಗಿದು ಮನವಿ ಮಾಡಿದರು. ಕೆಲವರು ಮಾಸ್ಕ್‌ ಧರಿಸಿರಲಿಲ್ಲ. ಅವರಿಗೆ ಪೊಲೀಸರು ತಿಳಿಹೇಳಿದರು.

ಪಾಸ್ ನೋಂದಣಿ ಹೇಗೆ?
ಅಗತ್ಯ ಸೇವೆ ವ್ಯಾಪ್ತಿಗೆ ಬರುವವರು, ‘ಮೈ ಗೇಟ್ ಡಾಟ್ ಕಾಮ್’ ಜಾಲತಾಣಕ್ಕೆ ಭೇಟಿ ನೀಡಬೇಕು. ವೈಯಕ್ತಿಕ ಹಾಗೂ ಗುಂಪು ಪಾಸ್‌ಗಳಿಗಾಗಿ ನೋಂದಣಿ ಮಾಡಿಕೊಳ್ಳಬಹುದು.

ನೋಂದಣಿ ಮಾಡಿಕೊಂಡವರ ಅರ್ಜಿಗಳನ್ನು ಪೊಲೀಸರು ಪರಿಶೀಲನೆ ಮಾಡಲಿದ್ದಾರೆ. ಅರ್ಹರಿದ್ದವರಿಗೆ ಮಾತ್ರ ಪಾಸ್‌ ವಿತರಣೆ ಮಾಡಲಿದ್ದಾರೆ. ವೈಯಕ್ತಿಕ ಪಾಸ್‌ಗಳಿಗೆ ಒಂದೇ ಬಾರಿ ನೋಂದಣಿ ಮಾಡಿಕೊಳ್ಳಬಹುದು.

ಅದರ ಜೊತೆಗೆ, 100 ಮಂದಿಗೆ ಗುಂಪು ಪಾಸ್‌ ಪಡೆಯಲೂ ಅವಕಾಶವಿದೆ. ಅದಕ್ಕೆ ಪ್ರತ್ಯೇಕವಾಗಿ ನೋಂದಣಿ ಮಾಡಲು ಅವಕಾಶವಿದೆ. ಪಾಸ್‌ ಪಡೆಯಲಿಚ್ಛಿಸುವರು ಗುರುತಿನ ಚೀಟಿ ಜೊತೆಗೆ ಪಾನ್‌ ಕಾರ್ಡ್‌ಮಾಹಿತಿಯನ್ನೂ ನೀಡಬೇಕಿದೆ.

ಜಾಲತಾಣದ ಲಿಂಕ್: http://bit.ly/ksp-mg-org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT