ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಬದಲಾಗಲಿದೆ ನಿಯಮ, ನಗರದಲ್ಲಿ 9,815 ಸಕ್ರಿಯ ಕಂಟೈನ್‌ಮೆಂಟ್‌ ಪ್ರದೇಶ

Last Updated 22 ಜುಲೈ 2020, 20:03 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹತೋಟಿಗೆ ಸಲುವಾಗಿ ಗುರುತಿಸುವ ನಿಯಂತ್ರಿತ (ಕಂಟೈನ್‌ಮೆಂಟ್‌) ಪ್ರದೇಶಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಸಾಗಿದೆ. ಮೇ ಅಂತ್ಯದಲ್ಲಿ ಎರಡಂಕಿಯಲ್ಲಿದ್ದ ಕಂಟೈನ್‌ಮೆಂಟ್‌ ಪ್ರದೇಶಗಳ ಸಂಖ್ಯೆ ಈಗ 12 ಸಾವಿರದ ಸಮೀಪಕ್ಕೆ ತಲುಪಿದೆ. ಒಂದೇ ಪ್ರದೇಶದಲ್ಲಿ ಹತ್ತಾರು ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಇವುಗಳನ್ನು ಗುರುತಿಸುವ ಮಾನದಂಡವನ್ನೂ ಬದಲಾಯಿಸಲು ಬಿಬಿಎಂಪಿ ಮುಂದಾಗಿದೆ.

ಬಿಬಿಎಂಪಿ ವಾರ್‌ರೂಂ ಬುಧವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ನಗರದಲ್ಲಿ ಇದುವರೆಗೆ ಒಟ್ಟು 11,638 ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಗುರುತಿಸಲಾಗಿದ್ದು, 9,815 ಸಕ್ರಿಯ ಕಂಟೈನ್‌ಮೆಂಟ್‌ ಪ್ರದೇಶಗಳಿವೆ.

ಒಂದೊಂದೇ ಮನೆಯನ್ನು ಗುರುತಿಸಿ ಕಂಟೈನ್‌ಮೆಂಟ್‌ ಮಾಡುವ ಬದಲು ಯಾವುದಾದರೂ ವಾರ್ಡ್‌ಗಳಲ್ಲಿ ಹೆಚ್ಚು ಪ್ರಕರಣಗಳಿರುವ ಪ್ರದೇಶವನ್ನು ಒಂದು ಕ್ಲಸ್ಟರ್‌ ಆಗಿ ಗುರುತಿಸಿ ಅಲ್ಲಿ ನಿರ್ಬಂಧ ವಿಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.

‘ಇತ್ತೀಚೆಗೆ ಒಂದೇ ಕಡೆ ಅನೇಕ ಪ್ರಕರಣಗಳು ಪತ್ತೆಯಾಗುತ್ತಿವೆ. ಅಲ್ಲೆಲ್ಲ ಒಂದೊಂದೇ ಮನೆಯನ್ನು ಗುರುತಿಸಿ ಕಂಟೈನ್‌ಮೆಂಟ್‌ ಮಾಡುವುದು ಸೂಕ್ತವಲ್ಲ. ಇದರಿಂದ ಅವುಗಳ ಸಂಖ್ಯೆ ಹೆಚ್ಚುತ್ತದೆಯೇ ಹೊರತು ಸೋಂಕು ನಿಯಂತ್ರಣದ ಆಶಯ ಈಡೇರದು. ಹಾಗಾಗಿ ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಗುರುತಿಸುವ ಮಾನದಂಡ ಬದಲಿಸುವ ಬಗ್ಗೆ ನಗರದ ಪೊಲೀಸ್‌ ಆಯುಕ್ತರ ಜೊತೆ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇವೆ. ಈ ಬಗ್ಗೆ ಶೀಘ್ರವೇ ಹೊಸ ಮಾನದಂಡಗಳನ್ನು ರೂಪಿಸಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಿಯಂತ್ರಿತ ಪ್ರದೇಶಕ್ಕೆ ಜನರಿಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ. ಅಲ್ಲಿನ ನಿವಾಸಿಗಳು ಯಾರೂ ವೈದ್ಯಕೀಯ ತುರ್ತಿನ ಹೊರತಾಗಿ ಹೊರಗೆ ಬರುವುದಕ್ಕೆ ಅವಕಾಶವಿಲ್ಲ. ಈ ನಿರ್ಬಂಧ 28 ದಿನಗಳವರೆಗೆ ಮುಂದುವರಿಯುತ್ತದೆ.

ಸೋಂಕು ಪತ್ತೆಯಾದ ಕಡೆ ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಗುರುತಿಸುವ ನಿಯಮಗಳನ್ನು ಪಾಲಿಕೆ ಏ.19ರಿಂದ ಜಾರಿಗೆ ತಂದಿತ್ತು. ಅದರ ಪ್ರಕಾರ ಸೋಂಕಿತ ವ್ಯಕ್ತಿ ವಾಸವಿದ್ದ ಮನೆಯ ಸುತ್ತಲಿನ 100 ಮೀ ವ್ಯಾಪ್ತಿಯ ಪ್ರದೇಶವನ್ನು ನಿಯಂತ್ರಿತ ಪ್ರದೇಶ ಎಂದು ಗುರುತಿಸಿ ಸೀಲ್‌ಡೌನ್‌ ಮಾಡಲಾಗುತ್ತಿತ್ತು. ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ವಾಸವಿದ್ದವರಲ್ಲಿ ಕೋವಿಡ್‌ ಕಾಣಿಸಿಕೊಂಡರೆ ಇಡೀ ಕಟ್ಟಡವನ್ನು ಕಂಟೈನ್‌ಮೆಂಟ್‌ ಪ್ರದೇಶವೆಂದು ಗುರುತಿಸಲಾಗುತ್ತಿತ್ತು.

ಸೋಂಕಿತ ವ್ಯಕ್ತಿ ವಾಸವಿದ್ದ ಮನೆಯ 1 ಕಿ.ಮೀ ವ್ಯಾಪ್ತಿಯನ್ನು ಈ ಹಿಂದೆ ಮೀಸಲು ಪ್ರದೇಶ (ಬಫರ್‌ ಜೋನ್‌) ಎಂದು ಗುರುತಿಸಿ ಅಲ್ಲೂ ಕೆಲವು ನಿರ್ಬಂಧಗಳನ್ನು ವಿಧಿಸಲಾಗುತ್ತಿತ್ತು.

ನಗರದಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಾ ಹೋದಂತೆಯೇ ನಿಯಂತ್ರಿತ (ಕಂಟೈನ್‌ಮೆಂಟ್‌) ಪ್ರದೇಶವನ್ನು ಗುರುತಿಸುವ ನಿಯಮಗಳನ್ನು ಬಿಬಿಎಂಪಿ ಮೇ 25ರಿಂದ ಮಾರ್ಪಾಡು ಮಾಡಿದೆ. ಈ ಪ್ರದೇಶದ ವ್ಯಾಪ್ತಿಯನ್ನು ಕುಗ್ಗಿಸಿದೆ. ಪ್ರಸ್ತುತ ಸೋಂಕಿತ ವ್ಯಕ್ತಿ ವಾಸಿಸುತ್ತಿದ್ದ ಮನೆಯ ಎದುರಿನ ಬೀದಿಯನ್ನು ಮಾತ್ರ ಕಂಟೈನ್‌ಮೆಂಟ್‌ ಪ್ರದೇಶ ಎಂದು ಗುರುತಿಸಲಾಗುತ್ತಿದೆ. ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿಗಳಿಗೆ ಸೋಂಕು ಕಂಡುಬಂದರೆ ಅವರ ವಾಸದ ಮನೆ ಇರುವ ಮಹಡಿಯನ್ನು ಮಾತ್ರ ಕಂಟೈನ್‌ಮೆಂಟ್‌ ಪ್ರದೇಶ ಎಂದು ಗುರುತಿಸಲಾಗುತ್ತಿದೆ.

ಹಿಂದೆ ಸೋಂಕು ಪತ್ತೆಯಾದ ತಕ್ಷಣವೇ ಸೋಂಕಿತ ವ್ಯಕ್ತಿ ವಾಸವಿದ್ದ ಮನೆ ಹಾಗೂ ಆಸುಪಾಸಿನಲ್ಲಿ ಸೋಂಕು ನಿವಾರಕ ಸಿಂಪಡಿಸಿ ಆ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗುತ್ತಿತ್ತು. ಈ ಪ್ರಕ್ರಿಯೆಗೂ ಈಗ ಎರಡು ದಿನ ತಗೆದುಕೊಳ್ಳಲಾಗುತ್ತಿದೆ.

‘ಆಹಾರ ಕಿಟ್‌ ಪೂರೈಕೆ’

ಕಂಟೈನ್‌ಮೆಂಟ್‌ ಪ್ರದೇಶದಲ್ಲಿರುವ ಬಡವರಿಗೆ ಆಹಾರ ಪೂರೈಸಲು ಕ್ರಮ ಕೈಗೊಳ್ಳದ ಬಗ್ಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಹೀಗಾಗಿ, ಕಂಟೈನ್‌ಮೆಂಟ್‌ ಪ್ರದೇಶದಲ್ಲಿ ಆಹಾರಧಾನ್ಯ ಅಗತ್ಯ ಇರುವವರಿಗೆ ಉಚಿತವಾಗಿ ಆಹಾರದ ಕಿಟ್‌ ಪೂರೈಸಲು ಪಾಲಿಕೆ ಕ್ರಮಕೈಗೊಂಡಿದೆ. ಆಹಾರದ ಕಿಟ್‌ ಬೇಕಾದವವರು 080–22660000ಕ್ಕೆ ಅಥವಾ 9480685888ಗೆ ಕರೆ ಮಾಡಬ
ಹುದು ಎಂದು ಪಾಲಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT