ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದರಾಯನಪುರ ಗಲಾಟೆ ಆರೋಪಿಗಳಲ್ಲಿ ಸೋಂಕು; ಪೊಲೀಸರಲ್ಲಿ ಆತಂಕ

ಆರೋಪಿಗಳ ಸ್ಥಳಾಂತರ ವಿರೋಧಿಸಿ ನಿವಾಸಿಗಳ ಪ್ರತಿಭಟನೆ  
Last Updated 24 ಏಪ್ರಿಲ್ 2020, 20:23 IST
ಅಕ್ಷರ ಗಾತ್ರ

ಬೆಂಗಳೂರು: ಪಾದರಾಯನಪುರ ಗಲಾಟೆ ಪ್ರಕರಣದ ಆರೋಪಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲ್ಲೇ, ನಗರ ಕಮಿಷನರೇಟ್‌ನ ಹಲವು ಪೊಲೀಸರಲ್ಲಿ ಆತಂಕ ಶುರುವಾಗಿದೆ.

ಸೋಂಕಿತರ ಜೊತೆ ಸಂಪರ್ಕದಲ್ಲಿದ್ದ ಶಂಕಿತರನ್ನು ಕ್ವಾರಂಟೈನ್‌ ಮಾಡಲೆಂದು ಬಿಬಿಎಂಪಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಪಾದರಾಯನಪುರದ ಅರಫತ್ ನಗರಕ್ಕೆ ಹೋಗಿದ್ದಾಗಲೇ ಆರೋಪಿಗಳು ಹಲ್ಲೆ ಮಾಡಿದ್ದರು. ಸ್ಥಳಕ್ಕೆ ಹೋಗಿದ್ದ ಹೆಚ್ಚುವರಿ ಸಿಬ್ಬಂದಿ, ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದ್ದರು.

ಹಲ್ಲೆ ಪ್ರಕರಣ ಸಂಬಂಧ ಐದು ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಅರಿತ ಕಮಿಷನರ್ ಭಾಸ್ಕರ್ ರಾವ್, ಸ್ಥಳೀಯ ಠಾಣೆ ಪೊಲೀಸರ 6 ತಂಡ ಹಾಗೂ ಸಿಸಿಬಿ ಪೊಲೀಸರನ್ನು ಒಳಗೊಂಡ 12 ವಿಶೇಷ ತಂಡಗಳನ್ನು ರಚಿಸಿದ್ದರು. ತಂಡದಲ್ಲಿದ್ದ ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್ ಸೇರಿದಂತೆ 100ಕ್ಕೂ ಹೆಚ್ಚು ಸಿಬ್ಬಂದಿ ಆರೋಪಿಗಳ ಬಂಧನಕ್ಕಾಗಿ ಕಾರ್ಯಾಚರಣೆ ಆರಂಭಿಸಿದ್ದರು.

ನಗರ ಹಾಗೂ ಹೊರವಲಯದಲ್ಲಿ ತಲೆಮರೆಸಿಕೊಂಡಿದ್ದ 126 ಮಂದಿಯನ್ನು ಬಂಧಿಸಿದ್ದ ಪೊಲೀಸರು, ರಾಮನಗರ ಜೈಲಿಗೆ ಕಳುಹಿಸಿದ್ದರು. ಬಂಧನ ಪ್ರಕ್ರಿಯೆ ವೇಳೆ ಪೊಲೀಸರು, ಆರೋಪಿಗಳನ್ನು ಮುಟ್ಟಿದ್ದಾರೆ. ಜೈಲಿಗೆ ಕಳುಹಿಸುವ ಮುನ್ನ ಆರೋಪಿಗಳನ್ನು ಕೋರಮಂಗಲದ ಕಟ್ಟಡವೊಂದರಲ್ಲಿ ಇರಿಸಲಾಗಿತ್ತು. ಅಲ್ಲಿಯೂ 30ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡಿದ್ದರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಗೂ ಜೈಲಿಗೆ ಕರೆದೊಯ್ಯುವ ಜೀಪಿನಲ್ಲೂ ಪೊಲೀಸರು ಇದ್ದರು. ಹೀಗೆ, ಆರೋಪಿಗಳ ಜೊತೆ ಸಂಪರ್ಕ ಹೊಂದಿದ್ದ ಪೊಲೀಸರೆಲ್ಲರೂ ಈಗ ಆತಂಕಗೊಂಡಿದ್ದಾರೆ. ಕಮಿಷನರ್, ಹೆಚ್ಚುವರಿ ಕಮಿಷನರ್, ಗೃಹ ಸಚಿವ, ಶಾಸಕ, ಪಾಲಿಕೆ ಸದಸ್ಯ ಸೇರಿ ಹಲವರು ಸ್ಥಳಕ್ಕೆ ಭೇಟಿ ನೀಡಿದ್ದರು.

ಆರೋಗ್ಯ ತಪಾಸಣೆಗೆ ಪಟ್ಟಿ ಸಿದ್ಧ: ಆರೋಪಿಗಳಿಗೆ ಸೋಂಕು ತಗುಲಿರುವ ವಿಷಯ ಗೊತ್ತಾಗುತ್ತಿದ್ದಂತೆ, ಅವರ ಜೊತೆ ಸಂಪರ್ಕ ಹೊಂದಿದ್ದ, ಪಾರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಾಗೂ ವಿಶೇಷ ತಂಡದಲ್ಲಿದ್ದ ಪೊಲೀಸರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ.

‘ಮುಂಜಾಗ್ರತಾ ಕ್ರಮವಾಗಿ ಪಟ್ಟಿ ಸಿದ್ಧಪಡಿಸಲಾಗಿದೆ. ಪ್ರತಿಯೊಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಿದೆ. ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಪೊಲೀಸರ ವೈದ್ಯಕೀಯ ತಪಾಸಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸ್ಥಳೀಯ ಠಾಣೆ, ಸಿಸಿಬಿ, ಕೆಎಸ್‌ಆರ್‌ಪಿ ಹಾಗೂ ಇತರೆ ವಿಭಾಗದ ಪೊಲೀಸರೆಲ್ಲರ ಹೆಸರುಗಳು ಪಟ್ಟಿಯಲ್ಲಿವೆ. ತಂಡಗಳ ಮುಖ್ಯಸ್ಥರಿಗೂ ತಪಾಸಣೆ ಮಾಡಿಸಿಕೊಳ್ಳುವಂತೆ ಹೇಳಲಾಗಿದೆ. ಕೆಲವರಿಗೆ ಇಂದಿನಿಂದಲೇ ಕ್ವಾರಂಟೈನ್‌ನಲ್ಲಿ ಇರುವಂತೆ ಕೋರಲಾಗಿದೆ’ ಎಂದರು.

ಸ್ಥಳಾಂತರ ವಿರೋಧಿಸಿ ಪ್ರತಿಭಟನೆ: ರಾಮನಗರದ ಜೈಲಿನಲ್ಲಿರುವ ಆರೋಪಿಗಳನ್ನು ಹಜ್‌ ಭವನಕ್ಕೆ ಸ್ಥಳಾಂತರಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಹೆಗಡೆ ನಿವಾಸಿಗಳು ಪ್ರತಿಭಟನೆ ನಡೆಸಿದರು.

'ನಮ್ಮ ಪ್ರದೇಶಕ್ಕೆ ಕೊರೊನಾ ಸೋಂಕಿತರು ಹಾಗೂ ಶಂಕಿತರನ್ನು ಕರೆತರಬೇಡಿ. ಇವರಿಂದ ನಮ್ಮ ಪ್ರದೇಶಕ್ಕೆ ಕೊರೊನಾ ಬರುವುದು ಬೇಡ’ ಎಂದು ನಿವಾಸಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT