ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19: ಹೊಗಳಿಕೆಯಿಂದ ಮೈಮರೆಯಿತೇ ಪಾಲಿಕೆ?

ಸೋಂಕು ಪತ್ತೆಯಾದರೆ ಸ್ಫಂದನೆ ಇಲ್ಲ– ಮನೆಗೆ ಸೋಂಕು ನಿವಾರಕ ಸಿಂಪಡಣೆಯೂ ವಿಳಂಬ
Last Updated 22 ಜೂನ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ವ್ಯಕ್ತಿಗೆ ಸೋಂಕು ದೃಢಪಟ್ಟು ಒಂದೂವರೆ ದಿನ ಕಳೆದರೂ ಆತನನ್ನು ಚಿಕಿತ್ಸೆಗೆ ಕರೆದೊಯ್ಯುವುದಿಲ್ಲ. ವ್ಯಕ್ತಿಗೆ ಕೋವಿಡ್‌ 19 ಖಚಿತಗೊಂಡು ಎರಡು ದಿನಗಳೂ ಕಳೆದರೂ ಅವರು ವಾಸವಿದ್ದ ಮನೆಯನ್ನು ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಕ್ರಮ ಕೈಗೊಳ್ಳುವುದಿಲ್ಲ...

ಕೋವಿಡ್‌ 19 ಪ್ರಕರಣ ಪತ್ತೆಯಾದ ಪ್ರಕರಣಗಳಲ್ಲಿ ಬಿಬಿಎಂಪಿ ಆಡಳಿತ ತೋರುತ್ತಿರುವ ‘ತುರ್ತು ಸ್ಪಂದನೆ’ಗೆ ಕೆಲವು ಉದಾಹರಣೆಗಳಿವು!

‘ದೇಶದ ಮಹಾನಗರಗಳಲ್ಲಿ ಕೋವಿಡ್‌ 19 ಪ್ರಕರಣಗಳ ನಿಯಂತ್ರಣಕ್ಕೆ ಆರಂಭಿಕ ಹಂತದಲ್ಲಿ ಕೈಗೊಂಡ ಕ್ರಮಕ್ಕಾಗಿ ಬಿಬಿಎಂಪಿ ಕೇಂದ್ರ ಸರ್ಕಾರದಿಂದ ಬೆನ್ನು ತಟ್ಟಿಸಿಕೊಂಡಿತ್ತು. ಆದರೆ, ಇತ್ತೀಚೆಗೆ ಈ ಸೋಂಕು ಪತ್ತೆಯಾದ ಬಳಿಕ ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳ ಬಗ್ಗೆ ಅಸಡ್ಡೆ ವಹಿಸುತ್ತಿದೆ. ಹೊಗಳಿಕೆಯಿಂದ ಪಾಲಿಕೆ ಆಡಳಿತ ಮೈಮರೆತಂತೆ ತೋರುತ್ತಿದೆ’ ಎಂದು ನಗರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಆರ್‌ಆರ್‌ನಗರ ವಲಯ ವ್ಯಾಪ್ತಿಯ ಉಲ್ಲಾಳು ವಾರ್ಡ್‌ನಲ್ಲಿ ವ್ಯಕ್ತಿಯೊಬ್ಬರಿಗೆ ತೀವ್ರ ಶೀತ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕೋವಿಡ್‌ ಪರೀಕ್ಷೆ ಸಲುವಾಗಿ ಅವರೇ ಸ್ವತಃ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಂಟಲ ದ್ರವ ನೀಡಿದ್ದರು. ಅವರಿಗೆ ಸೋಂಕು ಇರುವುದು ಶನಿವಾರ ಬೆಳಿಗ್ಗೆ ದೃಢಪಟ್ಟಿತ್ತು. ಕೋವಿಡ್‌ 19 ಚಿಕಿತ್ಸೆ ನೀಡುವ ಆಸ್ಪತ್ರೆಗೆ ಅವರನ್ನು ದಾಖಲಿಸಲು ದಿನವಿಡೀ ಕಾಯಬೇಕಾಯಿತು. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಬಳಿಕವಷ್ಟೇ ಅವರನ್ನು ಕರೆದೊಯ್ಯಲು ಆ್ಯಂಬುಲೆನ್ಸ್‌ ಬಂತು’ ಎಂದು ಅವರ ಕುಟುಂಬಸ್ಥರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಯಾರಿಗಾದರೂ ಕೋವಿಡ್‌ 19 ಪತ್ತೆಯಾದರೆ ತಕ್ಷಣವೇ ಅವರು ವಾಸಿಸುವ ಮನೆಗೆ ಸೋಂಕು ನಿವಾರಕ ಸಿಂಪಡಿಸಲು ಕ್ರಮ ಕೈಗೊಳ್ಳಬೇಕಲ್ಲವೇ. ಸೋಂಕು ಪತ್ತೆಯಾದ ಮರುದಿನ ಅವರ ಮನೆಯವರನ್ನು ಕ್ವಾರಂಟೈನ್‌ ಕೇಂದ್ರಕ್ಕೆ ಸಾಗಿಸಿದ್ದ ಬಿಬಿಎಂಪಿ ಸಿಬ್ಬಂದಿ ಎರಡು ದಿನಗಳು ಕಳೆದರೂ ಅವರ ಮನೆಯತ್ತ ಸುಳಿದಿಲ್ಲ. ಈ ಬಗ್ಗೆ ಆರ್‌ಆರ್‌ನಗರ ವಲಯದ ಜಂಟಿ ಆಯುಕ್ತರ ಗಮನಕ್ಕೆ ತಂದ ಬಳಿಕ ಮೂರನೇ ದಿನ ಮಧ್ಯಾಹ್ನ ಸೋಂಕು ನಿವಾರಕ ಔಷಧ ಸಿಂಪಡಿಸಿದರು. ಅದೂ ಕಾಟಾಚಾರಕ್ಕೆ. ಇಷ್ಟು ವಿಳಂಬ ಮಾಡಿದರೆ ಸೋಂಕು ಹಬ್ಬದಂತೆ ತಡೆಯಲು ಸಾಧ್ಯವೇ. ಇದು ದೇಶದಲ್ಲಿ ಮಾದರಿ ವ್ಯವಸ್ಥೆಯೇ ನೀವೇ ಹೇಳಿ’ ಎಂದು ರೋಗಿಯ ಆಪ್ತರೊಬ್ಬರು ಪ್ರಶ್ನಿಸಿದರು.

‘ಆಸ್ಪತ್ರೆಗಳಲ್ಲಂತೂ (ಖಾಸಗಿಯೂ ಸೇರಿ) ಕೋವಿಡ್‌ ಸೋಂಕು ಇಲ್ಲದ ರೋಗಿಗಳು ಗಂಭೀರ ಸಮಸ್ಯೆ ಎದುರಿಸುತ್ತಿದ್ದರೂ ತಕ್ಷಣ ವೈದ್ಯರು ಸ್ಪಂದಿಸುತ್ತಿಲ್ಲ. ಅರೆ ವೈದ್ಯಕೀಯ ಸಿಬ್ಬಂದಿಯೂ ರೋಗಿಗಳ ಸಮೀಪ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ. ರಕ್ತದೊತ್ತಡ ಸಮಸ್ಯೆ ಹೊಂದಿದ್ದ ರೋಗಿಯೊಬ್ಬರು ಕುಸಿದು ಬಿದ್ದರೂ ವೈದ್ಯರಾಗಲೀ, ಅಲ್ಲಿನ ಸಿಬ್ಬಂದಿಯಾಗಲೀ ಅವರ ಆರೈಕೆಗೆ ಧಾವಿಸಲಿಲ್ಲ’ ಎಂದು ಇನ್ನೊಬ್ಬ ರೋಗಿಯ ಬಂಧುವೊಬ್ಬರು ದೂರಿದರು.

‘ಕೋವಿಡ್‌ ಸೋಂಕು ಇಲ್ಲದ ಮೃತದೇಹದ ಅಂತ್ಯಕ್ರಿಯೆಗೂ ಬಿಬಿಎಂಪಿ ಸ್ಮಶಾನಗಳ ಸಿಬ್ಬಂದಿಹಿಂದೆ ಮುಂದೆ ನೋಡುತ್ತಿದ್ದಾರೆ. ಭವಿಷ್ಯದ ಕರಾಳ ದಿನಗಳು ಹೇಗಿರಬಹುದು ಎಂದು ಊಹಿಸುವುದೂ ಕಷ್ಟ’ ಎಂದು ಆತಂಕ ತೋಡಿಕೊಂಡರು.

ಪ್ರಕರಣ ಸಂಖ್ಯೆ ಹೆಚ್ಚಿದ್ದರಿಂದ ಸಮಸ್ಯೆ

‘ಸೋಂಕು ದೃಢಪಟ್ಟ ಒಂದೆರಡು ಗಂಟೆಗಳ ಒಳಗೆ ಸೋಂಕಿತರನ್ನು ಕೋವಿಡ್‌ 19 ಚಿಕಿತ್ಸೆ ನೀಡುವ ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಆದರೆ, 3–4 ದಿನಗಳಿಂದ ನಿತ್ಯ ನೂರಾರು ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಹೆಚ್ಚು ಸಮಯ ತಗಲುತ್ತಿದೆ’ ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನ ಅಲ್ಲಿ ಚಿಕಿತ್ಸೆಗೆ ಹಾಸಿಗೆ ಲಭ್ಯ ಇದೆಯೇ ಎಂದು ಪರಿಶೀಲಿಸಬೇಕಾಗುತ್ತದೆ. ನಗರದಲ್ಲಿ ಕೋವಿಡ್‌ 19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಹಾಸಿಗೆಗಳು ಬಹುತೇಕ ಭರ್ತಿಯಾಗಿವೆ. ಕೊರೊನಾ ಸೋಂಕಿತರನ್ನು ಕರೆದೊಯ್ಯಲು ಕೆಲವೊಂದು ಆ್ಯಂಬುಲೆನ್ಸ್‌ಗಳನ್ನು ಕಾಯ್ದಿರಿಸಲಾಗಿದೆ. ಪ್ರತಿ ರೋಗಿಯನ್ನು ಸಾಗಿಸಿದ ಬಳಿಕವೂ ಅದನ್ನು ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕಾಗುತ್ತದೆ. ಹಾಗಾಗಿ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವಾಗಿ ವಿಳಂಬವಾಗಿರಬಹುದು’ ಎಂದು ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT