ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪ್ರಾಣಿ, ಪಕ್ಷಿಗಳ ಕೂಡಿ ಹಾಕಿರುವ ಮಳಿಗೆಗೆ ದಾಳಿ

ಲಾಕ್‌ಡೌನ್‌ ಪರಿಣಾಮ: ಆಹಾರವಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ಪ್ರಾಣಿಗಳು
Last Updated 29 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣ ಸಲುವಾಗಿ ಜಾರಿಗೆ ತಂದಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಪ್ರಾಣಿ– ಪಕ್ಷಿಗಳೂ ಸಂಕಷ್ಟಕ್ಕೆ ಸಿಲುಕಿವೆ. ಸಾಕುಪ್ರಾಣಿಗಳು ಹಾಗೂ ಪಕ್ಷಿಗಳ ಮಾರಾಟ ಮಳಿಗೆಗಳು (ಪೆಟ್‌ ಶಾಪ್‌) ಲಾಕ್‌ಡೌನ್ ಘೋಷಣೆ ಬಳಿಕ ಬಾಗಿಲನ್ನೇ ತೆರೆದಿಲ್ಲ. ಅವುಗಳಲ್ಲಿರುವ ಪ್ರಾಣಿ ಹಾಗೂ ಪಕ್ಷಿಗಳು ಆಹಾರವಿಲ್ಲದೇ ಬಳಲುತ್ತಿವೆ.

ಮಳಿಗೆಗಳಲ್ಲಿ ಬಂಧಿಯಾಗಿ ನರಳುತ್ತಿರುವ ಪ್ರಾಣಿ ಪಕ್ಷಿಗಳನ್ನು ರಕ್ಷಿಸುವ ಸಲುವಾಗಿರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ಶಿವಾನಂದ್ ಡಂಬಳ್ ಅವರು ಪ್ರಾಣಿ ದಯಾ ಸಂಘಗಳ ಸ್ವಯಂಸೇವಕರ ಜೊತೆ ನಗರದ ಪೆಟ್ ಶಾಪ್‌ಗಳ ಮೇಲೆ ಭಾನುವಾರ ದಾಳಿ ನಡೆಸಿದರು.ಶಿವಾಜಿನಗರದ ರಸೆಲ್ ಮಾರುಕಟ್ಟೆ ಬಳಿಯ ಪೆಟ್ ಶಾಪ್‌ ಒಂದರಲ್ಲಿ ಆಹಾರವಿಲ್ಲದೇ ಬಳಲಿದ್ದ ಪ್ರಾಣಿ, ಪಕ್ಷಿಗಳ ಆಕ್ರಂದನ ಮುಗಿಲುಮುಟ್ಟುವಂತಿತ್ತು.

ಬಿಬಿಎಂಪಿಯ ಪಶು ಸಂಗೋಪನಾ ವಿಭಾಗದ ಅಧಿಕಾರಿಗಳನ್ನು ಭೇಟಿಯಾದ ಸ್ವಯಂಸೇವಕರು ಸಂಕಷ್ಟಕ್ಕೆ ಸಿಲುಕಿರುವ ಪ್ರಾಣಿ ಪಕ್ಷಿಗಳಿಗೆ ತುರ್ತಾಗಿ ಆಹಾರ ಒದಗಿಸುವ ಮತ್ತು ಅವುಗಳನ್ನ ಸುರಕ್ಷಿತ ಸ್ಥಳಕ್ಕೆ ಬಿಡುವ ಬಗ್ಗೆ ಸಮಾಲೋಚನೆ ನಡೆಸಿದರು.

‘ಪ್ರಾಣಿ ಪಕ್ಷಿಗಳಿಗೆ ಆಹಾರ ಒದಗಿಸಲು ಕ್ಯೂಪ (ಸಿಯುಪಿಎ), ಪೀಪಲ್‌ ಫಾರ್‌ ಅನಿಮಲ್ಸ್‌ (ಪಿಎಫ್ಎ), ಆಸ್ತಾ, ಎಸ್‌ಪಿಸಿಎ ಮತ್ತಿತರ ಸಂಸ್ಥೆಗಳು ಮುಂದೆ ಬಂದಿವೆ. ಬೆಂಗಳೂರನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ಪ್ರತಿ ವಿಭಾಗದಲ್ಲಿ ರಕ್ಷಣೆ ಮಾಡುವ ಪ್ರಾಣಿ ಪಕ್ಷಗಳ ಆರೈಕೆ ಹೊಣೆಯನ್ನು ಒಂದೊಂದು ಸಂಸ್ಥೆಗೆ ವಹಿಸಲಾಗುವುತ್ತದೆ’ ಎಂದು ಡಂಬಳ್ ತಿಳಿಸಿದರು.

‘ಈ ಸಂಸ್ಥೆಗಳ ಸ್ವಯಂಸೇವಕರುಬಿಬಿಎಂಪಿ ನೆರವಿನಿಂದ ಬೆಳಗ್ಗೆ 7 ರಿಂದ 9.30 ಮತ್ತು ಸಂಜೆ 4 ರಿಂದ 6ರ ನಡುವೆ ಆಹಾರ ಒದಗಿಸಲಿದ್ದರೆ. ಆಹಾರದ ಶುಚಿತ್ವ ಹಾಗೂ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಲಾಗುತ್ತದೆ’ ಎಂದು ವಿವರಿಸಿದರು.

ಕೋರಮಂಗಲದ ಗೋಶಾಲೆಗೂ ತಂಡ ಭೇಟಿ ನೀಡಿ ಪರಿಶೀಲಿಸಿತು. ‘ಇಲ್ಲಿರುವ ನೂರಾರು ದನ ಕರುಗಳಿಗೆ ಸದ್ಯಕ್ಕೆ ಆಹಾರ ಒದಗಿಸುತ್ತಿದ್ದೇವೆ. ಮುಂದೆ ಮೇವಿನ ಕೊರತೆ ಬಾಧಿಸಬಹುದು. ಆಗ ಸರ್ಕಾರದಿಂದ ಮೇವು ಪೂರೈಸಬೇಕು ’ ಎಂದು ಗೋಶಾಲೆಯ ವ್ಯವಸ್ಥಾಪಕರು ಒತ್ತಾಯಿಸಿದರು.

‘ಪರವಾನಗಿ ಪಡೆಯುವಂತೆ ನಗರದ ಎಲ್ಲಾ ಪೆಟ್ ಶಾಪ್‌ಗಳಿಗೂ ಸೂಚನೆ ನೀಡಲಾಗಿತ್ತು. ಆದರೆ ಬಹುತೇಕರು ಮುಂದೆ ಬಂದಿಲ್ಲ. ಪ್ರಾಣಿ ಕಲ್ಯಾಣ ಮಂಡಳಿಯ ಪರವಾನಗಿ ಪಡೆಯದೆಯೇ ಪ್ರಾಣಿ– ಪಕ್ಷಿಗಳ ವ್ಯಾಪಾರ ನಡೆಸುವುದು ಅಕ್ರಮ. ಅಂತಹ ಚಟುವಟಿಕೆ ಕಂಡು ಬಂದರೆ ಕ್ರಮ ಜರುಗಿಸುತ್ತೇವೆ. ಮಂಡಳಿ ವತಿಯಿಂದ ಸರ್ವೆ ನಡೆಸಿ ಪ್ರಾಣಿ, ಪಕ್ಷಿಗಳ ಸ್ಥಿತಿಗತಿ ಪರಿಶೀಲಿಸುತ್ತೇವೆ. ಮಂಡಳಿಯ ನಿಯಮ ಪಾಲಿಸದವರ ವಿರುದ್ದ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಡಂಬಳ್ ತಿಳಿಸಿದರು.

ಪ್ರಾಣಿ ದಯಾ ಸಂಘದ ಅರುಣ್ ಪ್ರಸಾದ್, ‘ಇಂಥಹ ಕಠಿಣ ಸಮಯದಲ್ಲಿ ಪ್ರಾಣಿಗಳ ಮೇಲೂ ಕರುಣೆ ತೋರಿಸಬೇಕು. ಜನ ಮನೆ ಮುಂದೆ ಅವುಗಳಿಗೆ ಆಹಾರ ಹಾಗೂ ನೀರು ಒದಗಿಸಬೇಕು’ ಎಂದು ಮನವಿ ಮಾಡಿದರು.

‘ಒಂದು ವೇಳೆ ನಗರದಲ್ಲಿನ ಎಲ್ಲಾ ಪ್ರಾಣಿ, ಪಕ್ಷಿಗಳು ಆಹಾರವಿಲ್ಲದೇ ಸಾಯಲು ಶುರುವಾದರೆ ಅದು ಇನ್ನೊಂದು ರೀತಿಯ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ ಮತ್ತು ಸಾಂಕ್ರಾಮಿಕ ಕಾಯಿಲೆ ಹರಡುವುದಕ್ಕೆ ಕಾರಣವಾಗುತ್ತದೆ’ ಎಂದು ಎಚ್ಚರಿಸಿದರು.

‘ಪ್ರಾಣಿ, ಪಕ್ಷಿಗಳಿಗೆ ಆಹಾರ ಒದಗಿಸಲು ಹಲವರು ಸಿದ್ಧರಿದ್ದಾರೆ. ಆದರೆ ಪೊಲೀಸ್ ಬಂದೋಬಸ್ತ್‌ನಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಅವರಿಗೆ ಅನುಮತಿ ಪತ್ರ ಒದಗಿಸಬೇಕು’ ಎಂದು ಸ್ವಯಂಸೇವಕರೊಬ್ಬರು ಒತ್ತಾಯಿಸಿದರು.

‘ಈ ಸಮಸ್ಯೆ ನಿವಾರಣೆಗ ಬಿಬಿಎಂಪಿ ಅಗತ್ಯ ನೆರವು ನೀಡಲಿದೆ’ ಎಂದು ಪಾಲಿಕೆಯ ಪಶು ಸಂಗೋಪನಾ ವಿಭಾಗದ ಜಂಟಿ ನಿರ್ದೇಶಕ ಡಾ. ಶಶಿಕುಮಾರ್ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT