ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರನ್ನೂ ಖಾಲಿ ಹೊಟ್ಟೆಯಲ್ಲಿರಲು ಬಿಡಲ್ಲ: ಪ್ರತಿದಿನ 12 ಸಾವಿರ ಮಂದಿಗೆ ಊಟ

ಗೋಡವಾಡ್‌ ಜೈನ ಸಮುದಾಯದ ಪಣ
Last Updated 1 ಏಪ್ರಿಲ್ 2020, 20:51 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಲಾಕ್‌ಡೌನ್‌ನಿಂದಾಗಿ ಅಸಂಖ್ಯಾತ ಕೂಲಿಕಾರ್ಮಿಕರು, ಬಡವರು, ನಿರ್ಗತಿಕರು, ಅನಾಥರು, ಕೊಳೆಗೇರಿ ನಿವಾಸಿಗಳಿಗೆಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದ್ದು, ಅಂಥವರಿಗೆ ನಗರದ ಗೋಡವಾಡ್ ಜೈನ್‌ ಸಮುದಾಯ ಊಟದ ವ್ಯವಸ್ಥೆ ಮಾಡಿದೆ.

‘ಯಾರೂ ಹಸಿವಿನಿಂದ ಬಳಲಬಾರದು’ ಎಂಬ ಧ್ಯೇಯದೊಂದಿಗೆ ಗೋಡವಾಡ್‌ ಜೈನ್‌ ಭವನ ಟ್ರಸ್ಟ್‌ ಪದಾಧಿಕಾರಿಗಳು ಜನರಿಗೆ ಕನಿಷ್ಠ
ಒಂದು ಹೊತ್ತಿನ ಆಹಾರ ಪೂರೈಸಲು ನಿರ್ಧರಿಸಿದರು.ಲಾಕ್‌ಡೌನ್‌ ಘೋಷಣೆಯಾದ ಮರುದಿನದಿಂದಲೇಜೆ.ಸಿ. ರಸ್ತೆಯ ಪೂರ್ಣಿಮಾ ಟಾಕೀಸ್ ಬಳಿ ಇರುವ ಗೋಡವಾಡ್‌ ಜೈನ್ ಕಲ್ಯಾಣ ಮಂಟಪದ ಒಲೆಗಳು ಹೊತ್ತಿಕೊಂಡವು.

ಪ್ರತಿದಿನ ಕನಿಷ್ಠ 10ರಿಂದ 12 ಸಾವಿರ ಆಹಾರ ಪೊಟ್ಟಣಗಳು ಸಿದ್ಧವಾಗತೊಡಗಿದವು. ನಾಳೆ ಯಾವ ಪ್ರದೇಶಗಳಿಗೆ ಎಷ್ಟು ಆಹಾರ ಪೊಟ್ಟಣ ಸರಬರಾಜು ಮಾಡಬೇಕು ಎಂಬ ಲೆಕ್ಕಹಿಂದಿನ ದಿನವೇ ಸಿದ್ಧವಾಗುತ್ತದೆ. ದಿನ ಬೆಳಿಗ್ಗೆ 5ಗಂಟೆಯಿಂದಲೇ ಆಹಾರ ಸಿದ್ಧಪಡಿಸುವ ಕೆಲಸ
ಆರಂಭವಾಗುತ್ತದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಎಲ್ಲ ಪೊಟ್ಟಣಗಳನ್ನು ಸಿದ್ಧಪಡಿಸಿ ಜೋಡಿಸಿ ಇಡಲಾಗುತ್ತದೆ.

ವಿವಿಧ ಸಂಘ, ಸಂಸ್ಥೆಗಳಸ್ವಯಂಸೇವಕರು, ಸಾಮಾಜಿಕ ಕಾರ್ಯಕರ್ತರು ವಾಹನಗಳಲ್ಲಿ ಆಹಾರ ಪೊಟ್ಟಣಗಳನ್ನು ಕೊಂಡೊಯ್ದು ಜನರಿಗೆ ವಿತರಿಸುತ್ತಾರೆ.

‘ಸಮಾಜದ ಋಣ ತೀರಿಸಲು ಇದಕ್ಕಿಂತ ಬೇರೆ ಸಮಯ, ಸಂದರ್ಭ ಇನ್ನಾವುದಿದೆ’ ಎನ್ನುತ್ತಾರೆ ಟ್ರಸ್ಟ್‌ ಪದಾಧಿಕಾರಿಗಳು.

‘ಸದ್ಯ ಏಪ್ರಿಲ್‌ 14ರವರೆಗೂ ಆಹಾರ ಪೊಟ್ಟಣ ವಿತರಿಸುವ ಕಾರ್ಯ ಮುಂದುವರಿಯಲಿದೆ. ಒಂದು ವೇಳೆ ಲಾಕ್‌ಡೌನ್‌ ಮುಂದುವರಿದರೆ ನಮ್ಮ ಸೇವೆಯೂ ಮುಂದುವರಿಯಲಿದೆ.ಟ್ರಸ್ಟ್‌ ಇದಕ್ಕಾಗಿ ಸಾರ್ವಜನಿಕರು, ಸರ್ಕಾರ ಸೇರಿದಂತೆ ಯಾರಿಂದಲೂ ಒಂದು ಪೈಸೆಯನ್ನೂ ದೇಣಿಗೆ ಪಡೆದಿಲ್ಲ. ತನ್ನ ಹಣದಲ್ಲಿಯೇ ಅಂದಾಜು ₹50 ಲಕ್ಷ ತೆಗೆದಿರಿಸಿದೆ’ ಎನ್ನುತ್ತಾರೆ ಗೊಡವಾಡ್‌ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕುಮಾರಪಾಲ್‌ ಸಿಸೋಡಿಯಾ.

‘ಯಾರನ್ನೂಉಪವಾಸದಿಂದ ಬಳಲು ನಾವು ಬಿಡುವುದಿಲ್ಲ. ಎಷ್ಟೇ ಖರ್ಚಾಗಲಿ ನಮ್ಮ ಸಮಾಜ ದೇಣಿಗೆ ನೀಡಲು ಸಿದ್ಧವಿದೆ. ಪ್ರತಿದಿನ ಕೇವಲ 12 ಸಾವಿರ ಅಲ್ಲ ಎಷ್ಟೇ ಬೇಡಿಕೆ ಬಂದರೂ ಅಷ್ಟು ಆಹಾರ ಪೊಟ್ಟಣ ಸಿದ್ಧಪಡಿಸಲು ನಾವು ಸಿದ್ಧ’ ಎಂದು ಟ್ರಸ್ಟ್‌ ಅಧ್ಯಕ್ಷ ಮತ್ತು ಪಟೇಲ್‌ ಟ್ರಾನ್ಸ್‌ಪೋರ್ಟ್‌ ಮಾಲೀಕ ಭೀಮರಾಜ್‌ ಕರಬಾವಾಲಾ ಹೇಳುತ್ತಾರೆ.

ಇದಕ್ಕೂ ಮೊದಲು ಗೊಡವಾಡ್‌ ಜೈನ್‌ ಟ್ರಸ್ಟ್‌ ಭವನದಲ್ಲಿಪ್ರತಿದಿನ ಬಡವರು,ನಿರ್ಗತಿಕರು ಮತ್ತು ಹಿರಿಯ ನಾಗರಿಕರಿಗೆ ಉಚಿತ ಊಟದ ವ್ಯವಸ್ಥೆ ಮಾಡಿತ್ತು. ಲಾಕ್‌ಡೌನ್‌ ನಂತರ ಅದನ್ನು ಬಂದ್‌ ಮಾಡಲಾಗಿದೆ. ಅದೇ ಅಡುಗೆ ಸಿಬ್ಬಂದಿ ಮತ್ತು ಭೋಜನಾಲಯವನ್ನು ಆಹಾರ ಸಿದ್ಧಪಡಿಸಲು ಬಳಸಿಕೊಳ್ಳಲಾಗುತ್ತಿದೆ.

ಬಿಸಿಬೇಳೆ ಬಾತ್‌, ರೈಸ್‌ ಬಾತ್‌, ಚಿತ್ರಾನ್ನ, ಪಲಾವ್, ಟೊಮ್ಯಾಟೊ ಬಾತ್‌, ಜೀರಾ ರೈಸ್ ಹೀಗೆ ಪ್ರತಿದಿನವೂ ಒಂದೊಂದು ಬಗೆಯ ಅನ್ನ ತಯಾರಿಸಲಾಗುತ್ತದೆ. ಸುರಕ್ಷತೆ, ರುಚಿ ಮತ್ತು ಶುಚಿತ್ವಕ್ಕೆ ಇಲ್ಲಿ ಮೊದಲ ಆದ್ಯತೆ.

ಇದರೊಂದಿಗೆ ಕಷ್ಟದಲ್ಲಿರುವ ಅಸಹಾಯಕರ ಮನೆ ಬಾಗಿಲಿಗೆ ‘ಪಡಿತರ ಕಿಟ್’ಗಳನ್ನು ವಿತರಿಸಲಾ ಗುತ್ತಿದೆ. ಜೈನ್‌ ಸಮುದಾಯದ ಸೇವಾ ಮನೋಭಾವದ ಈ ಮಹತ್ಕಾರ್ಯಕ್ಕೆ ಬಿಎಂವಿ ಟ್ರಸ್ಟ್‌ ಕೂಡ ಕೈಜೋಡಿಸಿದೆ.

**

ಅಂದೇ ದುಡಿದು, ಅಂದೇ ತಿನ್ನುವ ಕೂಲಿ,ಕಾರ್ಮಿಕರು ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡು ತೊಂದರೆಗೆ ಒಳಗಾಗಿದ್ದಾರೆ. ಸಾವಿರಾರು ಮಂದಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಅಂಥವರ ಒಂದು ಹೊತ್ತಿನ ತುತ್ತಿನ ಚೀಲ ತುಂಬಿದ ಧನ್ಯತೆ ನಮ್ಮದಾಗುತ್ತದೆ.
-ಕುಮಾರಪಾಲ್‌ ಸಿಸೋಡಿಯಾ, ಪ್ರಧಾನ ಕಾರ್ಯದರ್ಶಿ, ಶ್ರೀ ಗೊಡವಾಡ್‌ ಜೈನ್ ಭವನ ಟ್ರಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT